ಶುಕ್ರವಾರ, ಮಾರ್ಚ್ 31, 2023
26 °C

ಅಮೆರಿಕ ಓಪನ್: ಸೆರೆನಾ, ಒಸಾಕಾ ಜಯದ ಓಟ

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಆತಿಥೇಯ ದೇಶದ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಮತ್ತು ಜಪಾನಿನ ನವೊಮಿ ಒಸಾಕಾ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಜಯದ ಓಟ ಮುಂದುವರಿಸಿದ್ದಾರೆ.

ಆರ್ಥರ್‌ ಆ್ಯಶ್ ಕ್ರೀಡಾಂಗಣದ ಕೋರ್ಟ್‌ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ ನಲ್ಲಿ ಸೆರೆನಾ 6–2, 6–4ರ ನೇರ ಸೆಟ್‌ಗಳಿಂದ ರಷ್ಯಾದ ಮಾರ್ಗರಿಟಾ ಗಾಸ್ಪರ್ಯಾನ್ ವಿರುದ್ಧ ಗೆದ್ದರು.

ಅನುಭವಿ ಸೆರೆನಾ ಅವರ ಕೌಶಲಭರಿತ ಆಟದ ಮುಂದೆ 117ನೇ ಶ್ರೇಯಾಂಕದ ಮಾರ್ಗರಿಟಾ ಸುಲಭವಾಗಿ ಮಣಿದರು.  ಸೆರೆನಾ ಮೂರನೇ ಸುತ್ತಿನಲ್ಲಿ 2017ರ ಅಮೆರಿಕ ಓಪನ್ ವಿಜೇತ ಆಟಗಾರ್ತಿ ಸ್ಲೋನ್ ಸ್ಟೀಫನಿಸ್ ವಿರುದ್ಧ ಸೆಣಸುವರು.

‘ಖಾಲಿ ಕ್ರೀಡಾಂಗಣದಲ್ಲಿ ಆಡುತ್ತಿರುವುದು ಬೇಸರ ಮೂಡಿಸಿದೆ. ಅಭಿಮಾನಿಗಳು ತುಂಬಿದ ಕ್ರೀಡಾಂಗಣದಲ್ಲಿ ಆಡುವ ಅನುಭವವೇ ಬೇರೆ’ ಎಂದು ಸೆರೆನಾ ಪಂದ್ಯದ ನಂತರ ಹೇಳಿದರು.

ಪಂದ್ಯಕ್ಕೂ ಮುನ್ನ ಇಬ್ಬರೂ ಆಟಗಾರ್ತಿಯರು ವಾರ್ಮ್‌ ಅಪ್ ಮಾಡುವ ಸಂದರ್ಭದಲ್ಲಿ ಮಳೆ ಆರಂಭವಾಯಿತು. ಇದರಿಂದಾಗಿ ಸೆರೆನಾ ಮತ್ತು ಮಾರ್ಗರಿಟಾ ಅವರು ತಮ್ಮ ಕುರ್ಚಿಗಳಲ್ಲಿ ವಿಶ್ರಾಂತಿ ಪಡೆದರು. ಮಳೆ ನಿಲ್ಲದ ಕಾರಣ,  ಆರ್ಥರ್ ಆ್ಯಶ್‌ ಕ್ರೀಡಾಂಗಣದ ಸ್ವಯಂಚಾಲಿತ ಮೇಲ್ಛಾವಣಿಯ ಬಾಗಿಲುಗಳನ್ನು ಮುಚ್ಚಲಾಯಿತು. ಇದರಿಂದಾಗಿ ಅಂಗಳವು ಒಳಾಂಗಣವಾಗಿ ಪರಿವರ್ತನೆಗೊಂಡು ಪಂದ್ಯ ಆರಂಭಿಸಲಾಯಿತು.

ಇನ್ನೊಂದು ಪಂದ್ಯದಲ್ಲಿ ಜಪಾನಿನ ನವೊಮಿ ಒಸಾಕಾ 6–3, 6–7, 6–2 ರಿಂದ ಉಕ್ರೇನ್‌ನ ಮಾರ್ತಾ ಕೊಸ್ತಾಯುಚ್ ವಿರುದ್ಧ ಜಯಗಳಿಸಿದರು.

ಮೊದಲ ಸೆಟ್‌ನಲ್ಲಿ ಚುರುಕಿನ ಆಟವಾಡಿ ಗೆದ್ದ ಒಸಾಕಾ, ಎರಡನೇ ಸೆಟ್‌ನಲ್ಲಿ ಪ್ರಯಾಸಪಡಬೇಕಾಯಿತು. ಉತ್ತಮ ಸರ್ವ್ ಮತ್ತು ಬ್ಯಾಕ್‌ಹ್ಯಾಂಡ್ ಆಟದ ರುಚಿ ತೋರಿಸಿದ ಉಕ್ರೇನ್ ಆಟಗಾರ್ತಿಯು ಟೈಬ್ರೇಕರ್‌ನಲ್ಲಿ ಸೆಟ್‌ ಗೆದ್ದುಕೊಂಡರು. ಇದರಿಂದಾಗಿ ಮೂರನೇ ಸೆಟ್‌ ಕುತೂಹಲ ಕೆರಳಿಸಿತ್ತು. ಆದರೆ ಒಸಾಕಾ ಮುಂಗೈ ಜೋರಿನಲ್ಲಿ ಮೇಲುಗೈ ಸಾಧಿಸಿದರು.

ಪುರುಷರ ವಿಭಾಗದಲ್ಲಿ; ಡೇನಿಯಲ್ ಮೆಡ್ವೆಡೆವ್ 6–3, 6–2, 6–4ರಿಂದ  116ನೇ ಶ್ರೇಯಾಂಕದ ಕ್ರಿಸ್ಟೋಫರ್ ಓ ಕಾನೆಲ್ ವಿರುದ್ಧ ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು