ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ ಟೂರ್ನಿ: 15ರ ಬ್ರೆಂಡಾಗೆ ಐಟಿಎಫ್‌ ಕಿರೀಟ

ಪ್ರಶಸ್ತಿ ಸುತ್ತಿನಲ್ಲಿ ಹೋರಾಡಿ ಮಣಿದ ಭಾರತದ ಅಂಕಿತಾ ರೈನಾ
Last Updated 13 ಮಾರ್ಚ್ 2023, 6:01 IST
ಅಕ್ಷರ ಗಾತ್ರ

ಬೆಂಗಳೂರು: ಸೆಟ್‌ ಮುನ್ನಡೆಯನ್ನು ಉಳಿಸಿಕೊಳ್ಳಲಾಗದ ಭಾರತದ ಅಂಕಿತಾ ರೈನಾ ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಎಡವಿದರು. ಅನುಭವಿ ಆಟಗಾರ್ತಿಯನ್ನು ಮಣಿಸಿದ ಜೆಕ್‌ ಗಣರಾಜ್ಯದ ಯುವ ಪ್ರತಿಭೆ ಬ್ರೆಂಡಾ ಫ್ರುವಿರ್ತೊವಾ ಕಿರೀಟ ಧರಿಸಿ ಮೆರೆದರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ಭಾನುವಾರ ಕೊನೆಗೊಂಡ ಐಟಿಎಫ್‌ ಮಹಿಳಾ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ, 15 ವರ್ಷದ ಬ್ರೆಂಡಾ 0-6, 6-4, 6-0ರಿಂದ ಅಂಕಿತಾ ಅವರನ್ನು ಮಣಿಸಿದರು.

ಅಗ್ರಶ್ರೇಯಾಂಕದ ಬ್ರೆಂಡಾ ಮತ್ತು ನಾಲ್ಕನೇ ಶ್ರೇಯಾಂಕದ ಅಂಕಿತಾ ನಡುವಣ ಈ ಹಣಾಹಣಿಯು ತೀವ್ರ ಕುತೂಹಲ ಕೆರಳಿಸಿತ್ತು. ಮೊದಲ ಸೆಟ್‌ನ ಸತತ ಆರೂ ಗೇಮ್‌ಗಳನ್ನು ಜಯಿಸಿದ 30 ವರ್ಷದ ಅಂಕಿತಾ, ಪಂದ್ಯವನ್ನು ಏಕಪಕ್ಷೀಯವಾಗಿ ಗೆಲ್ಲಲಿದ್ದಾರೆ ಎನಿಸಿತ್ತು. ಈ ಸೆಟ್‌ನಲ್ಲಿ ಬ್ರೆಂಡಾ ಅವರಿಗೆ ಒಂದಷ್ಟು ಪೈಪೋಟಿ ನೀಡಲು ಮಾತ್ರ ಸಾಧ್ಯವಾಯಿತು. ಜೆಕ್‌ ಆಟಗಾರ್ತಿ ಮೂರು ಡಬಲ್‌ ಫಾಲ್ಟ್‌ಗಳನ್ನೂ ಮಾಡಿದರು.

ಎರಡನೇ ಸೆಟ್‌ನ ಮೊದಲ ಮೂರು ಗೇಮ್‌ಗಳನ್ನು ಗೆದ್ದ ಅಂಕಿತಾ ಜಯದತ್ತ ಮುನ್ನಡೆದಿದ್ದರು. ಈ ವೇಳೆ ‘ಟೈಮ್‌ ಔಟ್‌’ ಪಡೆದು ಮರಳಿದ ಬ್ರೆಂಡಾ, ಬಿರುಸಿನ ಸ್ಟ್ರೋಕ್‌ಗಳ ಮೂಲಕ ಪುಟಿದೆದ್ದರು. ಸತತ ಮೂರು ಗೇಮ್‌ ಗೆದ್ದು 3–3ರ ಸಮಬಲ ಸಾಧಿಸಿದರು. ನಂತರದ ಗೇಮ್‌ ಅಂಕಿತಾ ಗೆದ್ದುಕೊಂಡರೂ ಪ್ರಯೋಜನವಾಗಲಿಲ್ಲ. ಎರಡು ಬಾರಿ ಭಾರತದ ಆಟಗಾರ್ತಿಯ ಸರ್ವ್‌ ಬ್ರೇಕ್ ಮಾಡಿದ ಬ್ರೆಂಡಾ, ಮತ್ತೆ ಸತತ ಮೂರು ಗೇಮ್‌ಗಳನ್ನು ತಮ್ಮದಾಗಿಸಿಕೊಂಡು ಸೆಟ್‌ ಜಯಿಸಿದರು.

ಮೂರನೇ ಸೆಟ್‌ನಲ್ಲಿ ಸಂಪೂರ್ಣ ಪಾರಮ್ಯ ಬ್ರೆಂಡಾ ಅವರದ್ದಾಯಿತು. ಎದುರಾಳಿಗೆ ಒಂದೂ ಗೇಮ್‌ ಬಿಟ್ಟುಕೊಡದೆ ಸೆಟ್‌ ಹಾಗೂ ಪಂದ್ಯ ಗೆದ್ದರು. ಅಂಗಣದ ಮೇಲೆ ಮಲಗಿ ಸಂಭ್ರಮದಿಂದ ಅಲೆಯಲ್ಲಿ ತೇಲಿದರು. ಬ್ರೆಂಡಾ ಜಯಿಸಿದ ಒಂಬತ್ತನೇ ಐಟಿಎಫ್‌ ಪ್ರಶಸ್ತಿ ಇದು. ಅವರು ಈ ವರ್ಷದ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಮೊದಲ ಸುತ್ತಿನಲ್ಲಿ ಆಡಿದ್ದರು.

ಪ್ರಶಸ್ತಿ ಜಯಿಸಿದ ಬ್ರೆಂಡಾ ಅವರು ₹ 5 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು. ರನ್ನರ್ಸ್ ಅಪ್ ಅಂಕಿತಾ ₹ 2 ಲಕ್ಷ 67 ಸಾವಿರ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT