ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್ ಟೆನಿಸ್ ಟೂರ್ನಿ: ಬಾರ್ಟಿಗೆ ‘ಮೊದಲ’ ಫೈನಲ್

ವಿಂಬಲ್ಡನ್ ಟೆನಿಸ್ ಟೂರ್ನಿ: ನಾಲ್ಕರ ಘಟ್ಟ ಪ್ರವೇಶಿಸಿದ ಮಟಿಯೊ ಬೆರೆಟಿನಿ
Last Updated 8 ಜುಲೈ 2021, 15:04 IST
ಅಕ್ಷರ ಗಾತ್ರ

ಲಂಡನ್: ಮಾಜಿ ಚಾಂಪಿಯನ್ ಏಂಜಲಿಕ್ ಕೆರ್ಬರ್ ಅವರನ್ನು ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಮಣಿಸಿದ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ, ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಫೈನಲ್ ಪ್ರವೇಶಿಸಿದರು. ವಿಂಬಲ್ಡನ್‌ನಲ್ಲಿ ಇದು ಅವರ ಮೊದಲ ಫೈನಲ್ ಆಗಿದೆ.

ಗುರುವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಬಾರ್ಟಿ 6-3, 7-6 (7/3)ರಲ್ಲಿ ಜಯ ಗಳಿಸಿದರು. ಇಲ್ಲಿ, ಜೂನಿಯರ್ ವಿಭಾಗದ ಚಾಂಪಿಯನ್‌ ಆದ ಒಂದು ದಶಕದ ನಂತರ ಅವರಿಂದ ಈ ಸಾಧನೆ ಮೂಡಿಬಂತು. 2018ರ ಚಾಂಪಿಯನ್ ಕೆರ್ಬರ್ ನಿರಾಸೆಗೆ ಒಳಗಾದರು.

1980ರಲ್ಲಿ ಇವಾನ್ ಗೂಲಗಾಂಗ್ ಕಾವ್ಲಿ ಅವರು ಪ್ರಶಸ್ತಿ ಗೆದ್ದ ನಂತರ ವಿಂಬಲ್ಡನ್ ಟೂರ್ನಿಯ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾದ ಮೊದಲ ಮಹಿಳೆಯಾಗಿದ್ದಾರೆ ಬಾರ್ಟಿ. 2019ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು.

ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಜಯ ಗಳಿಸಿದ ಬಾರ್ಟಿ ಎರಡನೇ ಸೆಟ್‌ನಲ್ಲಿ 1–4ರ ಹಿನ್ನಡೆ ಅನುಭವಿಸಿದ್ದ ಸಂದರ್ಭದಲ್ಲಿ ಚೇತರಿಸಿಕೊಂಡು ಗೆಲುವಿನತ್ತ ಹೆಜ್ಜೆ ಇರಿಸಿದರು. ಎಂಟು ಏಸ್‌ ಸಿಡಿಸಿ ಎದುರಾಳಿಯನ್ನು ಕಂಗೆಡಿಸಿದರು. ಛಲದಿಂದ ಕಾದಾಡಿದ ಕೆರ್ಬರ್ ಒಂದು ಹಂತದಲ್ಲಿ ತಿರುಗೇಟು ನೀಡಿ ಪಂದ್ಯವನ್ನು ಟೈ ಬ್ರೇಕರ್‌ ವರೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಆದರೆ ಕೊನೆಗೆ ಸೋಲೊಪ್ಪಿಕೊಳ್ಳಬೇಕಾಯಿತು.

ಬೆರೆಟಿನಿ ಸಮಿಫೈನಲ್‌ಗೆ

ಬುಧವಾರ ತಡರಾತ್ರಿ ನಡೆದ ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಟಿಯೊ ಬೆರೆಟಿನಿ 6-3, 5-7, 7-5, 6-3ರಲ್ಲಿ ಫೆಲಿಕ್ಸ್‌ ಆಗ್ಯೆರ್ ಅಲಿಯಾಸಿಮ್ ಎದುರು ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿದರು.1960ರಲ್ಲಿ ನಿಕೋಲಾ ಪೆಟ್ರಾಂಗೆಲಿ ಗೆದ್ದ ನಂತರ ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ ಇಟಲಿಯ ಎರಡನೇ ಆಟಗಾರ ಬೆರೆಟಿನಿ.

ಇದು ಬೆರೆಟಿನಿ ಅವರಿಗೆ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಎರಡನೇ ಸೆಮಿಫೈನಲ್‌. 2019ರ ಅಮೆರಿಕ ಓಪನ್ ಟೂರ್ನಿಯಲ್ಲೂ ಅವರು ನಾಲ್ಕರ ಘಟ್ಟ ಪ್ರವೇಶಿಸಿದ್ದರು.ರೋಜರ್ ಫೆಡರರ್‌ ಎದುರು ಗೆಲುವು ಸಾಧಿಸಿರುವ ಹೂಬರ್ಟ್‌ ಹುರ್ಕಜ್ ಅವರನ್ನು ಬೆರೆಟಿನಿ ಶುಕ್ರವಾರ ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT