ಸೋಮವಾರ, ನವೆಂಬರ್ 18, 2019
25 °C

ಬಾಸೆಲ್‌ ಓಪನ್ ಟೆನಿಸ್: ವೃತ್ತಿ ಬದುಕಿನ 1500ನೇ ಪಂದ್ಯ ಗೆಲ್ಲಲು ಫೆಡರರ್ ಸಜ್ಜು

Published:
Updated:

ಬಾಸೆಲ್‌: 20 ಬಾರಿಯ ಗ್ರಾಂಡ್‌ ಸ್ಲಾಂ ಚಾಂಪಿಯನ್‌ ಸ್ವಿಟ್ಜರ್‌ಲ್ಯಾಂಡ್‌ನ ಟೆನಿಸ್‌ ತಾರೆ ರೋಜರ್‌ ಫೆಡರರ್‌ ಅವರು ಬಾಸೆಲ್‌ ಓಪನ್ ಟೆನಿಸ್‌ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಇಂದು ಅವರು ತಮ್ಮ ವೃತ್ತಿ ಬದುಕಿನ 1500ನೇ ಪಂದ್ಯ ಆಡಲಿದ್ದಾರೆ.

ಬಾಸೆಲ್‌ ಓಪನ್ ಟೆನಿಸ್‌ನಲ್ಲಿ ಇದುವರೆಗೆ ಒಂಭತ್ತು ಮತ್ತು ಒಟ್ಟಾರೆ 102 ಸಿಂಗಲ್ಸ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ 38 ವಯಸ್ಸಿನ ಫೆಡರರ್‌ಗೆ ಜರ್ಮನಿಯ ಪೀಟರ್ ಗೊಜೊವ್ಜಿಕ್ ಎದುರಾಗುತ್ತಿದ್ದಾರೆ. ಇಲ್ಲಿನ ಸೆಂಟರ್‌ ಕೋರ್ಟ್‌ ಒಳಾಂಗಣದಲ್ಲಿ ರಾತ್ರಿ 10.30ಕ್ಕೆ ಪಂದ್ಯ ಆರಂಭವಾಗಲಿದೆ. ಶುಕ್ರವಾರ, ಶನಿವಾರ ಇಲ್ಲಿ ಸಾಕಷ್ಟು ಹೊತ್ತು ಅಭ್ಯಾಸ ನಡೆಸಿರುವ ಫೆಡರರ್‌ ಜಯದ ಭರವಸೆಯಲ್ಲಿದ್ದಾರೆ.

ವೃತ್ತಿ ಬದುಕಿನ ಬಗ್ಗೆ ಮಾತನಾಡಿರುವ ಅವರು, ‘ಒಂದು ವೇಳೆ ನಾನು ನನ್ನ ಇಡೀ ಪಯಣದತ್ತ ಚಿತ್ತಹರಿಸಿದರೆ, ಗೆಲ್ಲಬಹುದಿದ್ದ ಸಾಕಷ್ಟು ಪಂದ್ಯಗಳನ್ನು ಸೋತಿದ್ದೇನೆ. ಆದರೆ, ನಾನು ಗಳಿಸಲೇಬೇಕಾದ ಅಥವಾ ಗಳಿಸಬಹುದಾದ್ದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿದ್ದೇನೆ ಎನಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಲಂಡನ್‌ನಲ್ಲಿ ನವೆಂಬರ್‌ನಲ್ಲಿ ಆರಂಭವಾಗಲಿರುವ ಎಟಿಪಿ ಫೈನಲ್ಸ್‌ಗೆ ಈಗಾಗಲೇ ಅರ್ಹತೆ ಗಿಟ್ಟಿಸಿರುವ ಫೆಡರರ್‌, ‘ನನ್ನ ಪಾಲಿಗೆ ಇದೊಂದು ದೊಡ್ಡ ಟೂರ್ನಿ. ವರ್ಷಾಂತ್ಯದಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದೇನೆ’ ಎಂದಿದ್ದಾರೆ. ಅಂದಹಾಗೆ ಅವರು ಎಟಿಪಿ ಫೈನಲ್ಸ್‌ನಲ್ಲಿ 17ನೇ ಬಾರಿ ಭಾಗವಹಿಸಲಿದ್ದಾರೆ.

ಶನಿವಾರ ವಿವಾಹವಾದ ಸ್ಪೇನ್‌ನ ರಫೆಲ್‌ ನಡಾಲ್‌ ಅವರಿಗೆ ಶುಭಾಶಯವನ್ನೂ ಕೋರಿದ್ದಾರೆ.

14 ವರ್ಷಗಳಿಂದ ಪ್ರೀತಿಸುತ್ತಿದ್ದ 33 ವರ್ಷದ ನಡಾಲ್‌ ಮತ್ತು 31ರ ಹರೆಯದ ಜಿಸ್ಕಾ ಪರೆಲ್ಲೊ ಅವರು ಲಾ ಫೋರ್ಟಾಲೆಜಾದಲ್ಲಿ ಶನಿವಾರ ವಿವಾಹವಾದರು.

ಪ್ರತಿಕ್ರಿಯಿಸಿ (+)