ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಸಿಮೊನಾ ಹಲೆಪ್‌

ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿ: ಎಂಟರಘಟ್ಟದಲ್ಲಿ ಎಡವಿದ ಬೋಪಣ್ಣ–ಶಪೊವಲೊವ್‌
Last Updated 19 ಸೆಪ್ಟೆಂಬರ್ 2020, 13:54 IST
ಅಕ್ಷರ ಗಾತ್ರ

ರೋಮ್‌: ಅಗ್ರಶ್ರೇಯಾಂಕದ ಆಟಗಾರ್ತಿ ಸಿಮೊನಾ ಹಲೆಪ್‌ ಅವರು ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಅವರ ವಿರುದ್ಧ ಸ್ಪರ್ಧಿಸಿದ್ದ ಕಜಕಸ್ತಾನದ ಯೂಲಿಯಾ ಪುಟಿಂಟ್‌ಸೆವಾ ಬೆನ್ನುನೋವಿನ ಕಾರಣ ಪಂದ್ಯ ನಡೆಯುತ್ತಿರುವಾಗಲೇ ಹಿಂದೆ ಸರಿದರು. ಪುಟಿಂಟ್‌ಸೆವಾ ಪಂದ್ಯ ತೊರೆಯಲು ನಿರ್ಧರಿಸಿದ ವೇಳೆ ರುಮೇನಿಯಾದ ಹಲೆಪ್ ಅವರು 6–2, 2–0 ಮುನ್ನಡೆಯಲ್ಲಿದ್ದರು. ಹೀಗಾಗಿ ಅವರನ್ನು ವಿಜಯೀ ಎಂದು ಪ್ರಕಟಿಸಲಾಯಿತು.

ವಿಶ್ವ ಕ್ರಮಾಂಕದಲ್ಲಿ 30ನೇ ಸ್ಥಾನದಲ್ಲಿರುವ ಪುಟಿಂಟ್‌ಸೆವಾ ಅವರುಈ ಪಂದ್ಯಕ್ಕೂ ಮೊದಲು 8ನೇ ಶ್ರೇಯಾಂಕದ ಪೆಟ್ರಾ ಮಾರ್ಟಿಚ್‌ ಹಾಗೂ 10ನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಅವರನ್ನು ಪರಾಭವಗೊಳಿಸಿದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಜರ್ಮನಿಯ ಡೊಮಿನಿಕ್‌ ಕೊಯ್‌ಫರ್‌ ಅವರನ್ನು ಎದುರಿಸಲಿದ್ದಾರೆ. ಎಂಟರಘಟ್ಟದ ಮತ್ತೊಂದು ಹಣಾಹಣಿಯಲ್ಲಿ ರಫೆಲ್‌ ನಡಾಲ್‌ ಅವರು ಡಿಗೊ ಸ್ವಾರ್ಟ್ಜ್‌ಮನ್‌ ಅವರನ್ನು ಎದುರಿಸಲಿದ್ದಾರೆ. ನಡಾಲ್‌ ಅವರು ಈ ಪಂದ್ಯವನ್ನು ಗೆದ್ದರೆ ಡಿಗೊ ವಿರುದ್ಧ ಅವರ 10ನೇ ಜಯವಾಗಲಿದೆ.

ಬೋಪಣ್ಣ ಜೋಡಿಗೆ ಸೋಲು: ಭಾರತದ ರೋಹನ್‌ ಬೋಪಣ್ಣ ಹಾಗೂ ಕೆನಡಾದ ಡೆನಿಸ್‌ ಶಪೊವಲೊವ್‌ ಜೋಡಿಯು‌ ಟೂರ್ನಿಯಿಂದ ಹೊರಬಿದ್ದಿತು. ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಈ ಜೋಡಿಯು 6–4, 5–7, 7–10ರಿಂದ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಹಾಗೂ ಫ್ಯಾಬ್ರಿಸ್‌ ಮಾರ್ಟಿನ್‌ ಎದುರು ಮಣಿಯಿತು.

ಶುಕ್ರವಾರ ತಡರಾತ್ರಿ ನಡೆದ ಈ ಹಣಾಹಣಿಯಲ್ಲಿ ಭಾರತ–ಕೆನಡಾ ಜೋಡಿ ವೀರೋಚಿತ ಹೋರಾಟ ನೀಡಿತಾದರೂ ಗೆಲುವು ಒಲಿಯಲಿಲ್ಲ.

ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಬೋಪಣ್ಣ–ಶಪೊವಲೊವ್‌ ಅವರು ಅಗ್ರ ಶ್ರೇಯಾಂಕದ ಕೊಲಂಬಿಯಾ ಆಟಗಾರರಾದ ಜುವಾನ್‌ ಸೆಬಾಸ್ಟಿಯನ್‌ ಕ್ಯಾಬಲ್‌–ರಾಬರ್ಟ್‌ ಅವರನ್ನು ಪರಾಭವಗೊಳಿಸಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕ ಓಪನ್‌ ಟೂರ್ನಿಯಲ್ಲೂ ಬೋಪಣ್ಣ ಮತ್ತು ಶಪೊವಲೊವ್‌ ಕ್ವಾರ್ಟರ್‌ಫೈನಲ್‌ ಹಂತದಲ್ಲೇ ಮುಗ್ಗರಿಸಿದ್ದರು. ನೆದರ್ಲೆಂಡ್ಸ್‌–ರುಮೇನಿಯಾ ಜೋಡಿಯಾದ ಜೀನ್‌ ಜೂಲಿಯನ್‌ ರೋಜರ್‌ ಹಾಗೂ ಹೊರಿಯಾ ಟೆಕಾವು ಎದುರು ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT