ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ITF ಟೆನಿಸ್ ಸಂಭ್ರಮಕ್ಕೆ ತೆರೆ:ರಷ್ಯಾದ ಬೊಬ್ರೊವ್‌ಗೆ ಸಿಂಗಲ್ಸ್‌ ಕಿರೀಟ

ದೇಶ-ವಿದೇಶದ ಕ್ರೀಡಾಪಟುಗಳ ಹಣಾಹಣಿಗೆ ಸಾಕ್ಷಿಯಾದ ದಾವಣಗೆರೆ
Published 30 ಅಕ್ಟೋಬರ್ 2023, 5:49 IST
Last Updated 30 ಅಕ್ಟೋಬರ್ 2023, 5:49 IST
ಅಕ್ಷರ ಗಾತ್ರ

ದಾವಣಗೆರೆ: ‘ಬೆಣ್ಣೆ ನಗರಿ’ ಖ್ಯಾತಿಯ ದಾವಣಗೆರೆ ಬರೋಬ್ಬರಿ 11 ವರ್ಷಗಳ ನಂತರ ಐಟಿಎಫ್ ಟೆನಿಸ್ ಟೂರ್ನಿಯ ಆತಿಥ್ಯ ವಹಿಸಿತ್ತು. ನಗರದ ಹೃದಯಭಾಗದಲ್ಲಿರುವ ಹೈಸ್ಕೂಲ್ ಮೈದಾನಕ್ಕೆ ಹೊಂದಿಕೊಂಡಿರುವ ಜಿಲ್ಲಾ ಟೆನಿಸ್ ಸಂಸ್ಥೆಯ ಅಂಗಳದಲ್ಲಿ ಕಳೆದ ಭಾನುವಾರ ಗರಿಗೆದರಿದ್ದ ಟೆನಿಸ್ ಸಂಭ್ರಮಕ್ಕೆ ಈಗ ತೆರೆ ಬಿದ್ದಿದೆ.

ಒಂದು ವಾರ ಕಾಲ ದೇಶ- ವಿದೇಶಗಳ ಹಲವು ಆಟಗಾರರು ಇಲ್ಲಿನ ಅಂಗಳಗಳಲ್ಲಿ 'ಕಾದಾಡಿ'ದರು. ಈ ಪೈಕಿ ಕೆಲವರು ಜಯದ ಸಿಹಿ ಸವಿದರೆ, ಇನ್ನೂ ಕೆಲವರಿಗೆ ಸೋಲಿನ ಕಹಿ ಅನುಭವವಾಯಿತು.

ಒಲಿಂಪಿಕ್ಸ್‌ನಲ್ಲಿ ಆಡಿದ್ದ ಭಾರತದ ವಿಷ್ಣುವರ್ಧನ್, ಡೇವಿಸ್‌ಕಪ್ ಆಟಗಾರ ರಾಮಕುಮಾರ್ ರಾಮನಾಥನ್, ಅನುಭವಿ ಆಟಗಾರ ಪುರವ್ ರಾಜಾ ಜೊತೆಗೆ ಈಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರತಿಭಾನ್ವಿತರು ಮನಮೋಹಕ ಆಟದ ಮೂಲಕ ನಗರದ ಟೆನಿಸ್‌ ಪ್ರಿಯರನ್ನು ರಂಜಿಸಿದರು. ನಗರದ ಹೋಟೆಲ್‌ಗಳಲ್ಲಿ ತಯಾರಾಗುವ ಬೆಣ್ಣೆ ದೋಸೆ ತಿಂದು, ಅದರ ಸ್ವಾದಕ್ಕೆ ಮಾರು ಹೋದರು.

ಭಾನುವಾರ ನಡೆದ ಸಿಂಗಲ್ಸ್ ವಿಭಾಗದ ಫೈನಲ್‌ ಪಂದ್ಯ ರೋಮಾಂಚನಕಾರಿ ಕ್ಷಣಗಳಿಗೆ ಸಾಕ್ಷಿಯಾಯಿತು. ಅಮೆರಿಕದ ನಿಕ್ ಚಾಪೆಲ್ ಹಾಗೂ ರಷ್ಯಾದ ಬೊಗ್ಡಾನ್ ಬೊಬ್ರೊವ್ ಅವರನ್ನು ನಗರದ ಜನ ತಮ್ಮವರೆಂದೇ ಭಾವಿಸಿ ಅಪಾರ ಪ್ರೀತಿಯನ್ನು ಧಾರೆ ಎರೆದರು.

ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದಿದ್ದವರು ಈ ಜೋಡಿಯ ಸೊಬಗಿನ ಆಟವನ್ನು ಮನಸಾರೆ ಮೆಚ್ಚಿದರು. ಆಟಗಾರರ ‘ಏಸ್‌’ಗಳು ಮತ್ತು ಪಾಯಿಂಟ್‌ ಬ್ರೇಕ್‌ ಆದಾಗಲೆಲ್ಲ ಚಪ್ಪಾಳೆ ಹೊಡೆಯುವುದರ ಜೊತೆಗೆ ಶಿಳ್ಳೆ, ಕೇಕೆಯನ್ನೂ ಹಾಕಿ ಸಂಭ್ರಮಿಸಿದರು.

ಈ ಆಟಗಾರರು ಅನಗತ್ಯ ತಪ್ಪು ಮಾಡಿ ಗೇಮ್ ಕೈಚೆಲ್ಲಿದಾಗ, ತಮ್ಮವರೇ ಯಾರೋ ತಪ್ಪು ಮಾಡಿದಂತೆ ಭಾವಿಸಿ ತಲೆ ಮೇಲೆ ಕೈಹೊತ್ತು ಕೂತರು. ಹಾಗಲ್ಲ, ಹೀಗೆ ಆಡಬೇಕಿತ್ತೆಂದು ಕುಳಿತಲ್ಲೇ ವಿಶ್ಲೇಷಿಸಿದರು. ಗೇಮ್‌ ಗೆದ್ದಾಗ 'ಹೋ....' ಎಂದು ಹರ್ಷೋದ್ಘಾರ ಮೊಳಗಿಸಿದರು.

ಬೊಬ್ರೊವ್ ಗೆದ್ದಾಗ 'ಅವ್ನು ತುಂಬಾ ಚೆನ್ನಾಗ್ ಆಡಿದ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದೂ ಕಂಡುಬಂತು.

ಪಂದ್ಯ ಮುಗಿದ ಬಳಿಕ ಬೊಬ್ರೊವ್ ಮತ್ತು ಚಾಪೆಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು, ಫೋಟೊ ಕ್ಲಿಕ್ಕಿಸಿಕೊಳ್ಳಲು, ಹಸ್ತಾಕ್ಷರ ಪಡೆಯಲು ಜನ ಮುಗಿಬಿದ್ದರು. ಉಭಯ ಆಟಗಾರರ ಕೈಕುಲುಕಿ ಶುಭಾಶಯ ಕೋರಿದರು.

ಚಾಪೆಲ್‌ ಬಳಿ ತೆರಳಿದ ಕೆಲವರು 'ಬ್ಯಾಡ್‌ ಲಕ್, ಗುಡ್‌ಲಕ್ ಫಾರ್‌ ನೆಕ್ಸ್ಟ್‌ ಗೇಮ್' ಎಂದು ಧೈರ್ಯ ಹೇಳುತ್ತಿದ್ದುದೂ ಕಂಡುಬಂತು.

ಇಂತಹ ಹತ್ತು ಹಲವು ಅವಿಸ್ಮರಣೀಯ ಕ್ಷಣಗಳಿಗೆ ಐಟಿಎಫ್‌ ಟೂರ್ನಿ ಸಾಕ್ಷಿಯಾಯಿತು.

ಪಂದ್ಯ ಗೆದ್ದ ನಂತರ ಲಾಗ ಹೊಡೆದ ರಷ್ಯಾದ ಬೊಬ್ರೊವ್, ತಲೆ ಕೆಳಗೆ ಮಾಡಿ ಕಾಲುಗಳಿಂದಲೇ ಚಪ್ಪಾಳೆ ತಟ್ಟಿ ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ಧನ್ಯವಾದ ಹೇಳಿದರು. ಈ ದೃಶ್ಯ ಕಂಡು ಹಲವರು ಹುಬ್ಬೇರಿಸಿದರು. 'ಬಾಲ್‌ ಬಾಯ್‌'ಗಳಾಗಿದ್ದ ನಗರದ ಚಿಣ್ಣರ ಕಾರ್ಯವನ್ನೂ ಆಟಗಾರರು ಸ್ಮರಿಸಿದರು.

ದಾವಣಗೆರೆಯಲ್ಲಿ ಭಾನುವಾರ ನಡೆದ ಐಟಿಎಫ್ ಟೆನಿಸ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜಯಿಸಿದ ರಷ್ಯಾದ ಬೊಗ್ಡಾನ್ ಬೊಬ್ರೊವ್‌ ಅಂಗಳದಲ್ಲಿ ತಲೆಕೆಳಗಾಗಿ ನಿಂತು ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದರು
ದಾವಣಗೆರೆಯಲ್ಲಿ ಭಾನುವಾರ ನಡೆದ ಐಟಿಎಫ್ ಟೆನಿಸ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜಯಿಸಿದ ರಷ್ಯಾದ ಬೊಗ್ಡಾನ್ ಬೊಬ್ರೊವ್‌ ಅಂಗಳದಲ್ಲಿ ತಲೆಕೆಳಗಾಗಿ ನಿಂತು ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT