ಶುಕ್ರವಾರ, ಮೇ 20, 2022
23 °C
ಸೆರೆನಾ, ಒಸಾಕ ಮುನ್ನಡೆ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಜೊಕೊವಿಚ್‌ಗೆ ಪ್ರಯಾಸದ ಜಯ

ಎಪಿ/ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಕಾಲು ನೋವಿನಿಂದ ಬಳಲಿದರೂ ಛಲಬಿಡದೆ ಸೆಣಸಿದ ನೊವಾಕ್‌ ಜೊಕೊವಿಚ್ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟರು. ಖಾಲಿ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ಅವರು 7–6, 6–4, 3–6, 4–6, 6–2ರಿಂದ ಅಮೆರಿಕದ ಟೇಲರ್ ಫ್ರಿಟ್ಜ್ ಅವರ ಸವಾಲು ಮೀರಿದರು.

ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಜೊಕೊವಿಚ್‌ ಅವರಿಗೆ ಫ್ರಿಟ್ಜ್ ಭಾರಿ ಸವಾಲು ಒಡ್ಡಿದರು.

ಮೊದಲ ಎರಡು ಸೆಟ್‌ಗಳನ್ನು ಪ್ರಯಾಸದಿಂದ ಗೆದ್ದುಕೊಂಡಿದ್ದ ಸರ್ಬಿಯಾ ಆಟಗಾರ, ಮೂರು ಮತ್ತು ನಾಲ್ಕನೇ ಸೆಟ್‌ಗಳನ್ನು ಕೈಚೆಲ್ಲಿದರು. ಆದರೆ ಐದನೇ ಸೆಟ್‌ನಲ್ಲಿ ತಮ್ಮ ಅನುಭವವನ್ನು ಒರೆಗೆ ಹಚ್ಚಿದ ಅವರು ಗೆದ್ದು ನಿಟ್ಟುಸಿರು ಬಿಟ್ಟರು.

ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ವಿಧಿಸಿದ ಕಾರಣ, ಪಂದ್ಯ ನೋಡಲು ಸೇರಿದ್ದ ಕೆಲವೇ ಅಭಿಮಾನಿಗಳನ್ನು ಪಂದ್ಯದ ನಾಲ್ಕನೇ ಸೆಟ್‌ ವೇಳೆ ಆಚೆ ಕಳುಹಿಸಲಾಯಿತು. ಈ ವೇಳೆ ಒಂದಷ್ಟು ಹೊತ್ತು ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರೇಕ್ಷಕರು ಒಲ್ಲದ ಮನಸ್ಸಿನಿಂದಲೇ ಗ್ಯಾಲರಿಗಳಿಂದ ಹೊರನಡೆದರು.

ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ: ತಾನು ಸ್ನಾಯು ಸೆಳೆತ ಅನುಭವಿಸುತ್ತಿದ್ದು, ಮಿಲೊಸ್ ರಾನಿಕ್ ಎದುರು ನಡೆಯುವ ಮುಂದಿನ ಪಂದ್ಯದಲ್ಲಿ ಆಡುವುದು ಸಾಧ್ಯವಾಗಲಿಕ್ಕಿಲ್ಲ ಎಂದು ಪಂದ್ಯದ ಬಳಿಕ ಜೊಕೊವಿಚ್ ನುಡಿದರು.

24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಸೆರೆನಾ ವಿಲಿಯಮ್ಸ್ ಅವರು ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟರು. ತನಗಿಂತ 20 ವರ್ಷ ಕಿರಿಯ ಆಟಗಾರ್ತಿ ಅನಸ್ತೇಸಿಯಾ ಪೊಟಪೋವಾ ಎದುರು ಅಮೆರಿಕದ ಆಟಗಾರ್ತಿ 7–6, 6–2ರಿಂದ ಗೆದ್ದು ಮುನ್ನಡೆದರು.

39 ವರ್ಷದ ಸೆರೆನಾ ಅವರಿಗೆ 19ರ ಹರೆಯದ ರಷ್ಯಾ ಆಟಗಾರ್ತಿ ಪ್ರಬಲ ಪೈಪೋಟಿ ನೀಡಿದರು. ಇಲ್ಲಿ ಏಳು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸೆರೆನಾ, ಮೊದಲ ಸೆಟ್‌ನ ಆರಂಭದಲ್ಲಿ 3–5ರ ಹಿನ್ನಡೆ ಅನುಭವಿಸಿದರು. ಆದರೆ ಅದೇ ಗೇಮ್‌ನಲ್ಲಿ ಪೊಟಪೊವಾ ಸೆಟ್‌ ಪಾಯಿಂಟ್‌ನಲ್ಲಿ ಎರಡು ಬಾರಿ ಸೇರಿ ಐದು ಪ್ರಮಾದಗಳನ್ನು ಎಸಗಿದರು. ಟೈಬ್ರೇಕರ್‌ವರೆಗೆ ಸಾಗಿದ ಈ ಸೆಟ್‌ನಲ್ಲಿ ಸೆರೆನಾ ಮತ್ತೆ ಹಿನ್ನಡೆ ಅನುಭವಿಸಿದ್ದರು. ಆದರೆ ಬಳಿಕ ನಾಲ್ಕು ಪಾಯಿಂಟ್‌ಗಳನ್ನು ಕಲೆಹಾಕಿದ ಅವರು ತಿರುಗೇಟು ನೀಡಿದರು. ಅದೇ ಲಯದಲ್ಲಿ ಮುಂದುವರಿದು ಸೆಟ್‌ ಗೆದ್ದುಕೊಂಡರು.

ಸೆರೆನಾ ಅವರಿಗೆ ಮುಂದಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರ ಸವಾಲು ಎದುರಾಗಿದೆ. ಮೂರನೇ ಸುತ್ತಿನ ಪಂದ್ಯದಲ್ಲಿ ಸಬಲೆಂಕಾ 6–3, 6–1ರಿಂದ ಅಮೆರಿಕದ ಆ್ಯನ್ ಲಿ ಅವರನ್ನು ಮಣಿಸಿದರು.

ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಇತರ ಪಂದ್ಯಗಳಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಜಾ 6–1, 61ರಿಂದ ಕಜಕಸ್ತಾನದ ಜರೀನಾ ದಿಯಾಸ್ ಎದುರು, ಜಪಾನ್‌ನ ನವೊಮಿ ಒಸಾಕ 6–3, 6–2ರಿಂದ ಟ್ಯೂನಿಷಿಯಾದ ಆನ್ಸ್ ಜಬೆವುರ್ ವಿರುದ್ಧ , ರುಮೇನಿಯಾದ ಸಿಮೊನಾ ಹಲೆಪ್ 6–1, 6–3ರಿಂದ ರಷ್ಯಾದ ವೆರೊನಿಕಾ ಕುದರ್ಮೆಟೊವಾ ಎದುರು ಗೆಲುವು ಸಾಧಿಸಿದರು.

ಎಂಟನೇ ಶ್ರೇಯಾಂಕದ ಸ್ವಾಟ್ಜ್‌ಮನ್‌ ಪರಾಭವ: ಎಂಟನೇ ಶ್ರೇಯಾಂಕ ಪಡೆದಿದ್ದ ಅರ್ಜೆಂಟೀನಾ ಆಟಗಾರ ಡಿಗೊ ಸ್ವಾಟ್ಜ್‌ಮನ್‌ ಮೂರನೇ ಸುತ್ತಿನ ಪಂದ್ಯದಲ್ಲಿ 3–6, 3–6, 3–6ರಿಂದ 114ನೇ ಕ್ರಮಾಂಕದ ಆಟಗಾರ ರಷ್ಯಾದ ಅಸ್ಲನ್‌ ಕರತ್ಸೆವ್ ಅವರಿಂದ ಪರಾಭವಗೊಂಡರು. 27 ವರ್ಷದ ಅಸ್ಲನ್‌ಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯ ಎಂಬುದು ವಿಶೇಷ.

ಥೀಮ್‌ಗೆ ಪ್ರಯಾಸದ ಜಯ: ಅಮೆರಿಕ ಓಪನ್ ಹಾಲಿ ಚಾಂಪಿಯನ್ ಅವರು ಮೂರನೇ ಸುತ್ತಿನ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಎದುರು ಗೆಲ್ಲಲು ಪ್ರಯಾಸಪಡಬೇಕಾಯಿತು. ಅಸ್ಟ್ರಿಯಾದ ಆಟಗಾರ ಮೊದಲ ಎರಡು ಸೆಟ್‌ಗಳ ಹಿನ್ನಡೆಯನ್ನು ಮೀರಿ ನಿಂತು 4–6, 4–6, 6–3, 6–4, 6–4ರಿಂದ ಜಯ ಸಾಧಿಸಿದರು.

ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಇತರ ಪಂದ್ಯಗಳಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ 6-3, 6-3, 6-1ರಿಂದ ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ಎದುರು, ಕೆನಡಾದ ಮಿಲೊಸ್ ರಾನಿಕ್‌ 7-6, 5-7, 6-2, 6-2ರಿಂದ ಹಂಗರಿಯ ಮಾರ್ಟನ್ ಫುಕೊವಿಕ್ಸ್ ವಿರುದ್ಧ ಗೆದ್ದು ಮುನ್ನಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು