ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯ ಓಪನ್‌ ಟೆನಿಸ್‌: ಜೊಕೊವಿಚ್‌, ಒಸಾಕಾ ಜಯದ ಓಟ

ಗಫ್‌ ಗೆಲುವಿನ ಅಭಿಯಾನಕ್ಕೆ ಇಲ್ಲ ತಡೆ
Last Updated 22 ಜನವರಿ 2020, 19:45 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಹಾಲಿ ಚಾಂಪಿಯನ್‌ಗಳಾದ ನೊವಾಕ್‌ ಜೊಕೊವಿಚ್‌, ನವೊಮಿ ಒಸಾಕಾ, ಪ್ರಮುಖ ಆಟಗಾರ್ತಿ ಸೆರೆನಾ ವಿಲಿಯಮ್ಸ್, ರೋಜರ್‌ ಫೆಡರರ್‌, ಉದಯೋನ್ಮುಖ ತಾರೆ ಕೊಕೊ ಗಫ್‌ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಬುಧವಾರ ಮೂರನೇ ಸುತ್ತಿಗೆ ಮುನ್ನಡೆದಿದ್ದಾರೆ.

ಜೊಕೊವಿಚ್‌ ಅವರು ಜಪಾನ್‌ನ ವೈಲ್ಡ್‌ಕಾರ್ಡ್‌ ಪ್ರವೇಶದ ಆಟಗಾರ ಜಪಾನ್‌ನ ತಾತ್ಸುಮಾ ಇಟೊ ಎದುರು 6–1, 6–4, 6–2ರಿಂದ ಸುಲಭ ಜಯ ಸಂಪಾದಿಸಿದರು. 95 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಸೆರೆನಾ ಅವರು ಸ್ಲೋವೆನಿಯಾದ ತಮರಾ ಜಿಡಾನ್ಸೆಕ್‌ ಎದುರು 6–2, 6–3ರಿಂದ ಗೆದ್ದು ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ದಾಖಲೆಯ 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಅಮೆರಿಕದ ಆಟಗಾರ್ತಿ, ಮುಂದಿನ ಪಂದ್ಯದಲ್ಲಿ ಅವರು ಚೀನಾದ ವಾಂಗ್‌ ಕಿಯಾಂಗ್‌ ಎದುರು ಆಡಲಿದ್ದಾರೆ.

ಸ್ವಿಟ್ಜರ್ಲೆಂಡ್‌ ದಿಗ್ಗಜ ರೋಜರ್‌ ಫೆಡರರ್‌ ಅವರು ಫಿಲಿಪ್‌ ಕ್ರಾಜಿನೊವಿಕ್‌ ವಿರುದ್ಧ 6–1, 6–4, 6–1ರಿಂದ ಗೆದ್ದರು. ಮುಂದಿನ ಪಂದ್ಯದಲ್ಲಿ ಅವರು ಜಾನ್‌ ಮಿಲ್‌ಮನ್‌ ಎದುರು ಕಣಕ್ಕಿಳಿಯಲಿದ್ದಾರೆ.

ಅಮೆರಿಕದ 15ರ ಬಾಲೆ ಕೊಕೊ ಗಫ್‌ ಕೂಡ ಗೆಲುವಿನ ಅಭಿಯಾನ ಮುಂದುವರಿಸಿದರು. ಮೊದಲ ಸೆಟ್‌ ಸೋತರೂ ಛಲಬಿಡದ ಅವರು ರುಮೇನಿಯಾದ ಸೊರಾನಾ ಕ್ರಿಸ್ಟೆನಾ ಅವರನ್ನು 4–6, 6–3, 7–5 ಸೆಟ್‌ಗಳಿಂದ ಸದೆಬಡಿದು ಮೂರನೇ ಸುತ್ತು ತಲುಪಿದರು. ಮುಂದಿನ ಪಂದ್ಯದಲ್ಲಿ ಅವರಿಗೆ ಹಾಲಿ ಚಾಂಪಿಯನ್‌ ನವೊಮಿ ಒಸಾಕಾ ಅವರ ಸವಾಲು ಎದುರಾಗಿದೆ. ಸತತ ಎರಡನೇ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಗಫ್‌–ನವೊಮಿ ಹಣಾಹಣಿ ನಡೆಯಲಿದೆ. ಹೋದ ವರ್ಷದ ಅಮೆರಿಕ ಓಪನ್‌ ಟೂರ್ನಿಯಲ್ಲಿ ಇವರಿಬ್ಬರು ಮುಖಾಮುಖಿಯಾಗಿದ್ದರು. ಒಸಾಕಾಗೆ ಆ ಪಂದ್ಯದಲ್ಲಿ ಗೆಲುವು ಒಲಿದಿತ್ತು.

ಎರಡನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ 22 ವರ್ಷದ ಒಸಾಕಾ, ಚೀನಾದ ಜೆಂಗ್‌ ಸಾಯ್‌ಸಾಯ್‌ ಎದುರು 6–2, 6–4ರಿಂದ ಗೆದ್ದರು.

ವಿಶ್ವ ಅಗ್ರ ಕ್ರಮಾಂಕದ ಆಟಗಾರ್ತಿ, ಫ್ರೆಂಚ್‌ ಓಪನ್‌ ಚಾಂಪಿಯನ್‌ ಆ್ಯಶ್ಲೆ ಬಾರ್ಟಿ ಅವರ ಪೊಲೊನಾ ಹೆರ್‌ಕಾಗ್‌ ಎದುರು 6–1, 6–4ರ ಸುಲಭ ಜಯ ಸಾಧಿಸಿದರು.

ಸ್ಯಾಂಡ್‌ಗ್ರೆನ್‌ ಅಚ್ಚರಿ: ಅಮೆರಿಕದ 100ನೇ ರ‍್ಯಾಂಕಿನ ಆಟಗಾರ ಟೆನಿಸ್‌ ಸ್ಯಾಂಡ್‌ಗ್ರೆನ್‌, ಇಟಲಿಯ ಯುವ ಆಟಗಾರ 8ನೇ ರ‍್ಯಾಂಕ್‌ನ ಮ್ಯಾಟ್ಟಿಯೊ ಬೆರೆಟ್ಟಿನಿ ಎದುರು ಗೆದ್ದು ‘ದೈತ್ಯಸಂಹಾರಿ’ ಎನಿಸಿದರು. 7–6, 6–4, 4–6, 2–6, 7–5ರಿಂದ ಜಯ ಸಾಧಿಸಿದ ಸ್ಯಾಂಡ್‌ಗ್ರೆನ್‌ ಮೂರು ವರ್ಷಗಳಲ್ಲಿ ಎರಡನೇ ಬಾರಿ ಅಗ್ರ 10ರೊಳಗಿನ ಆಟಗಾರನಿಗೆ ಸೋಲಿನ ರುಚಿ ತೋರಿಸಿದ್ದಾರೆ. 2018ರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲೇ ಅವರು 9ನೇ ಶ್ರೇಯಾಂಕದ ಹಾಗೂ ಮಾಜಿ ಚಾಂಪಿಯನ್‌ ಸ್ಟ್ಯಾನ್‌ ವಾವ್ರಿಂಕಾ ಅವರನ್ನು ಮಣಿಸಿದ್ದರು.

ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಸ್ಟೆಫಾನೊಸ್‌ ಸಿಸಿಪಸ್‌ ಅವರು ಫಿಲಿಪ್‌ ಕೊಹ್ಲ್‌ಸ್ಕ್ರೆಬರ್‌ (ಪಂದ್ಯದಿಂದ ನಿವೃತ್ತಿ) ಎದುರು, ಮಿಲೊಸ್‌ ರಾವೊನಿಕ್‌ ಅವರು ಕ್ರಿಸ್ಟಿಯನ್‌ ಗ್ಯಾರಿನ್‌ ಎದುರು 6–3, 6–4, 6–2ರಿಂದ, ಮರಿನ್‌ ಸಿಲಿಕ್‌ ಅವರು ಬೆನೊಯಿಟ್‌ ಪೇರ್‌ ಎದುರು 6–2, 6–7, 3–6, 6–1, 7–6ರಿಂದ ಜಯ ಸಾಧಿಸಿದರು.

ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಹಣಾಹಣಿಗಳಲ್ಲಿ ಪೆಟ್ರಾ ಕ್ವಿಟೊವಾ ಅವರು ಪೌಲಾ ಬಡೊಸಾ ಎದುರು 7–5, 7–5ರಿಂದ, ಕರೋಲಿನಾ ವೊಜ್ನಿಯಾಕಿ, ಡಯಾನಾ ಯೆಸ್ತರ್‌ಮಸ್ಕಾ ವಿರುದ್ಧ 7–5, 7–5ರಿಂದ ಗೆದ್ದು ಮುನ್ನಡೆದರು.

ದಿವಿಜ್‌ ಮುನ್ನಡೆ, ಬೋಪಣ್ಣಗೆ ಸೋಲು
ಭಾರತದ ದಿವಿಜ್‌ ಶರಣ್‌ ಅವರು ನ್ಯೂಜಿಲೆಂಡ್‌ನ ಅರ್ಟೆಮ್‌ ಸಿಟಾಕ್‌ ಜೊತೆಗೂಡಿ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಬುಧವಾರ ಎರಡನೇ ಸುತ್ತಿಗೆ ಕಾಲಿಟ್ಟರು. ಆದರೆ ರೋಹನ್‌ ಬೋಪಣ್ಣ ಜೋಡಿ ಪರಾಭವ ಕಂಡಿತು.

ದಿವಿಜ್‌–ಸಿಟಾಕ್‌ ಅವರು ಪೋರ್ಚುಗಲ್‌–ಸ್ಪೇನ್‌ನ ಜೋಡಿಯಾದ ಪ್ಯಾಬ್ಲೊ ಕ್ಯಾರೆನೊ ಬಸ್ಟಾ ಹಾಗೂ ಜೊವಾ ಸೌಸಾ ಎದುರು 6–4, 7–5ರಿಂದ ಜಯದ ನಗೆ ಬೀರಿದರು. ಭಾರತ–ನ್ಯೂಜಿಲೆಂಡ್‌ ಜೋಡಿಯು ಮುಂದಿನ ಪಂದ್ಯದಲ್ಲಿ, ಮೇಟ್‌ ಪಾವಿಕ್ –ಬ್ರೂನೊ ಸೋರ್ಸ್ ಹಾಗೂ ಬೆನ್‌ ಮೊಲಚಲನ್‌–ಲ್ಯೂಕ್‌ ಬ್ಯಾಂಬ್ರಿಜ್‌ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಜಪಾನ್‌ನ ಯಾಸುಟಕಾ ಯುಚಿಯಾಮ ಜೊತೆಗೂಡಿ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಬೋಪಣ್ಣ ಅವರು ಅಮೆರಿಕದ ಬಾಬ್‌–ಮೈಕ್‌ ಬ್ರಿಯಾನ್‌ ಸಹೋದರರ ವಿರುದ್ಧ 1–6, 6–3, 3–6ರಿಂದ ಮಣಿದರು.

ಟೂರ್ನಿಯಲ್ಲಿ ಬೋಪಣ್ಣ ಅವರ ಅಭಿಯಾನ ಅಂತ್ಯವೇನೂ ಆಗಿಲ್ಲ. 39 ವರ್ಷದ ಆಟಗಾರ ಸಾನಿಯಾ ಮಿರ್ಜಾ ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT