ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಪಿಯಿಂದ ವಿಂಬಲ್ಡನ್‌ವರೆಗೆ: ಟೆನಿಸ್ ಟೂರ್ನಿಗಳಲ್ಲಿ ಟವೆಲ್ಲುಗಳಿಗೆ ವಿಶೇಷ ಸ್ಥಾನ

Last Updated 21 ಜನವರಿ 2023, 22:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲಿ ಟವೆಲ್ಲುಗಳಿಗೆ ವಿಶೇಷ ಸ್ಥಾನ. ಅದರಲ್ಲೂ ವಿಂಬಲ್ಡನ್‌ನಲ್ಲಿ ಅದರ ಮಹತ್ವ ತುಸು ಹೆಚ್ಚೇ. ಪ್ರತಿವರ್ಷದ ಟೂರ್ನಿಗೆ ನೂತನ ವಿನ್ಯಾಸದಲ್ಲಿ ಮೂಡಿಬರುವ ಈ ಟವೆಲ್ಲುಗಳನ್ನು ಆಟಗಾರರು ಸ್ಮರಣಿಕೆಯಂತೆ ಕೊಂಡೊಯ್ದು ಕಾಪಿಟ್ಟುಕೊಳ್ಳುವುದು ವಾಡಿಕೆ.

ಕೆಲ ವರ್ಷಗಳ ಹಿಂದಿನ ಮಾತು. ಮುಂಗಾರು ಮಳೆಯ ಆರ್ಭಟಕ್ಕೆ ಇಡೀ ಮುಂಬೈ ನಗರವೇ ತತ್ತರಿಸಿತ್ತು. ಜನಜೀವನವೇ ಸ್ತಬ್ಧವಾಗಿತ್ತು. ಮಳೆಯ ಹೊಡೆತಕ್ಕೆ ಸಿಕ್ಕು ನಲುಗಿದ್ದ ನಗರದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಭಾರತದ ಟೆನಿಸ್ ತಾರೆ ಮಹೇಶ್ ಭೂಪತಿಯವರ ಪತ್ನಿ, ರೂಪದರ್ಶಿ ಲಾರಾ ದತ್ತ ಆಗ ತಮ್ಮ ಮನೆಯ ಬಾಲ್ಕನಿಯ ಬಾಗಿಲಿನಿಂದ ಒಳನುಗ್ಗುತ್ತಿದ್ದ ಮಳೆಯ ನೀರನ್ನು ತಡೆಹಿಡಿಯಲು ಸಂದಿಗೆ ಟವೆಲ್ಲು ಹರಡಿದ್ದರು. ಆ ಚಿತ್ರವನ್ನು ಟ್ವೀಟ್ ಮಾಡಿ ಕೊನೆಗೂ ತಮ್ಮ ಪತಿರಾಯನ ಕಮಾಯಿ ಕೆಲಸಕ್ಕೆ ಬಂತು ಎಂದು ಬರೆದುಕೊಂಡಿದ್ದರು. ಇದಕ್ಕೆ ಮಹೇಶ್, ‘ನೋಡಿ, ಇಷ್ಟು ವರ್ಷದ ಕಷ್ಟದ ದುಡಿಮೆಯನ್ನು ನನ್ನ ಹೆಂಡತಿ ಹೇಗೆ ಪೋಲು ಮಾಡಿದ್ದಾಳೆ’ ಎಂಬರ್ಥದಲ್ಲಿ ತುಸು ಕೋಪದಿಂದಲೇ ಪ್ರತಿಕ್ರಿಯಿಸಿದ್ದರು. ಈ ಟ್ವೀಟ್ ಹಲವು ದಿನಗಳ ಕಾಲ ಟ್ರೆಂಡಿಂಗ್‌ನಲ್ಲಿತ್ತು.

ಮಹೇಶ್ ಅವರ ಆ ಪ್ರತಿಕ್ರಿಯೆಗೆ ಕಾರಣವೂ ಇತ್ತು. ಅಲ್ಲಿ ಅಂದು ಲಾರಾ ಹರಡಿದ್ದ ಟವೆಲ್ಲುಗಳೆಲ್ಲವೂ ಮಹೇಶ್ ಅವರು ವಿಂಬಲ್ಡನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಗಳಲ್ಲಿ ಸಾಧಿಸಿದ ಗೆಲುವಿನ ಸ್ಮರಣಿಕೆಯಾಗಿ ಜತನದಿಂದ ಕಾಪಿಟ್ಟುಕೊಂಡಿದ್ದಂಥವು. ಹೀಗಿರುವಾಗ ಅವುಗಳನ್ನು ನೀರು ಹಿಡಿಯಲು ಹರಡಿರುವುದನ್ನು ಕಂಡ ಮಹೇಶ್ ಕೋಪ ತೋರಿಸಿದ್ದು ಸ್ವಾಭಾವಿಕವೇ.

ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲಿ ಟವೆಲ್ಲುಗಳಿಗೆ ವಿಶೇಷ ಸ್ಥಾನ. ಅದರಲ್ಲೂ ವಿಂಬಲ್ಡನ್‌ನಲ್ಲಿ ಅದರ ಮಹತ್ವ ತುಸು ಹೆಚ್ಚೇ. ಪ್ರತಿವರ್ಷದ ಟೂರ್ನಿಗೆ ನೂತನ ವಿನ್ಯಾಸದಲ್ಲಿ ಮೂಡಿಬರುವ ಈ ಟವೆಲ್ಲುಗಳನ್ನು ಆಟಗಾರರು ಸ್ಮರಣಿಕೆಯಂತೆ ಕೊಂಡೊಯ್ದು ಕಾಪಿಟ್ಟುಕೊಳ್ಳುವುದು ವಾಡಿಕೆ. ಇದು ಎಷ್ಟರ ಮಟ್ಟಿಗೆಯೆಂದರೆ ಪಂದ್ಯಕ್ಕೊಂದರಂತೆ ಕೊಡಲಾಗುವ ಈ ಟವೆಲ್‌ಅನ್ನು ವಾಪಸು ಕೊಡಬೇಕೆಂಬ ನಿಯಮವಿದ್ದರೂ ಸಂಘಟಕರಿಗೆ ಪರತ್ ಸಿಗುವುದು ಕೇವಲ ಶೇಕಡ ಇಪ್ಪತ್ತಷ್ಟೆ. ಹೆಚ್ಚಿನ ಸಂಖ್ಯೆಯವು ಆಟಗಾರನ ಕಿಟ್ ಬ್ಯಾಗ್ ಸೇರಿ ಮನೆ ತಲುಪಿದರೆ, ಇನ್ನುಳಿದವುಗಳನ್ನು ತಮ್ಮನ್ನು ಹುರಿದುಂಬಿಸುವ ಅಭಿಮಾನಿಗಳತ್ತ ಪಂದ್ಯ ಮುಗಿದ ನಂತರ ಆಟಗಾರರೇ ಎಸೆಯುವ ಪರಿಪಾಟ ಇದೆ. ಅದಕ್ಕಾಗಿ ಮುಗಿಬೀಳುವವರನ್ನು ನಿಯಂತ್ರಿಸುವುದೂ ಆಯೋಜಕರ ಮಂಡೆಬಿಸಿಗಳಲ್ಲಿ ಒಂದು. ಇಷ್ಟು ಸಾಲದೆಂಬಂತೆ ಈ ಟವೆಲ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಅಭಿಮಾನಿಗಳ ಸಂಖ್ಯೆಗೇನೂ ಕೊರತೆಯಿಲ್ಲ. ಹೀಗಾಗಿ ಇದು ಟೆನಿಸ್ ಉತ್ಸವದ ಅತ್ಯುತ್ಸಾಹವನ್ನು ನಗದೀಕರಿಸಿಕೊಳ್ಳುವ ತಯಾರಕರಿಗೆ ನಾಲ್ಕು ಕಾಸು ಕಮಾಯಿಸುವ ಅವಕಾಶ.

ವಿಂಬಲ್ಡನ್ ಟವೆಲ್ಲು ಹಲವು ಕಾರಣಕ್ಕೆ ಸುದ್ದಿಯಾದದ್ದೂ ಇದೆ. ಆಟಗಾರರಿಗೆ ಟವೆಲ್ಲುಗಳನ್ನು ನೀಡುವ ಪರಿಪಾಟ ಆರಂಭವಾದಾಗಿನಿಂದ ಪ್ರತಿವರ್ಷ ಎರಡು ಬಣ್ಣಗಳ ವಿನ್ಯಾಸದಲ್ಲಿ ಅವುಗಳನ್ನು ತಯಾರಿಸಲಾಗುತ್ತಿತ್ತು. ಪುರುಷ ಆಟಗಾರರಿಗೆ ಗಾಢಬಣ್ಣದ ಟವೆಲ್ಲುಗಳನ್ನು ನೀಡಿದರೆ, ಮಹಿಳೆಯರಿಗೆ ತುಸು ಪೇಲವ ಬಣ್ಣಗಳ ಟವೆಲ್ಲುಗಳಿರುತ್ತಿದ್ದವು. ನಂತರ ಈ ಟವೆಲ್ ವರ್ಣಬೇಧದ ವಿರುದ್ಧ ಲಿಂಗ ತಾರತಮ್ಯದ ದೂರುಗಳು ಕೇಳಿಬರತೊಡಗಿದವು. ಈ ಕಾರಣಕ್ಕೆ 2021ರಿಂದ ಈ ದ್ವಿವರ್ಣ ಸಂಪ್ರದಾಯವನ್ನು ಮುರಿದು ಏಕ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಯಿತು. ಅದಕ್ಕಿಂತ ಎರಡು ವರ್ಷಗಳ ಹಿಂದೆ ಅಂದರೆ 2019ರಿಂದ ಟೂರ್ನಿಯಿಂದ ಅಂಕಗಳನ್ನು ಹೇಳುವ ಸಮಯದಲ್ಲಿ ಮಹಿಳೆಯರಿಗೆ ಸಂಬೋಧಿಸಲು ಬಳಸಲಾಗುತ್ತಿದ್ದ ಮಿಸ್ ಮತ್ತು ಮಿಸ್ಟ್ರೆಸ್ ಪದಗಳನ್ನು ಆಯೋಜಕರು ಕೈಬಿಟ್ಟಿದ್ದರು. ಹೀಗಾಗಿ ಈ ಎರಡು ಮಾರ್ಪಾಡುಗಳನ್ನು ಮುಂದುಮಾಡಿ ವಿಂಬಲ್ಡನ್‌ಗೆ ಪ್ರಪಂಚದ ಏಕೈಕ ಸಮಾನ ಲಿಂಗನೀತಿಯ ಟೂರ್ನಿಯೆಂಬ ಬಿರುದನ್ನು ನೀಡಿ ಆಯೋಜಕರು ತಮ್ಮ ಬೆನ್ನುಗಳನ್ನು ತಾವೇ ತಟ್ಟಿಕೊಂಡರು.

ಜಾಗತಿಕವಾಗಿ ಅತ್ಯಂತ ಪುರಾತನ ಟೆನಿಸ್ ಟೂರ್ನಿಯೆಂಬ ಹೆಗ್ಗಳಿಕೆಯ ವಿಂಬಲ್ಡನ್ ಗ್ರ್ಯಾನ್‌ ಸ್ಲಾಮ್‌ ಆರಂಭವಾಗಿದ್ದು 1877ರಲ್ಲಾದರೂ 1922ರಲ್ಲಿ ಅದು ಲಂಡನ್ನಿನ ಚರ್ಚ್‌ ರಸ್ತೆಯ ನೂತನ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿತು. ಅಂದಿನಿಂದ ಅದೇ ಕೋರ್ಟ್‌ ಟೆನಿಸ್ ಜಗತ್ತಿನ ಅತ್ಯಂತ ರೋಚಕ ಕ್ಷಣಗಳಿಗೆ ವೇದಿಕೆಯಾಗುತ್ತಾ ಬಂತು. ಈ ಟೆನಿಸ್‌ ಕಾಶಿಗೆ ಇದೀಗ ನೂರರ ಸಂಭ್ರಮ. ಹೀಗಾಗಿ ಈ ಉತ್ಸವವನ್ನು ಸ್ಮರಣಿಯವಾಗಿಸಲು ಆಯೋಜಕರು ವಿಶೇಷ ಸ್ಮರಣಿಕೆಯ ಬಗ್ಗೆ ಯೋಚಿಸುತ್ತಿರುವಾಗ ಅವರಿಗೆ ಮೊದಲು ಹೊಳೆದಿದ್ದೇ ಟವೆಲ್ಲು. ವಿಂಬಲ್ಡನ್ ಕೋರ್ಟ್‌ನ ಹುಲ್ಲುಹಾಸಲನ್ನು ಹೋಲುವಂಥ ಹಸಿರು ಬಣ್ಣದ ಟವೆಲ್ಲಿಗೆ ಬಂಗಾರದ ಬಣ್ಣದ ದಾರದ ಸೀಮಾರೇಖೆಯನ್ನು ಮೂಡಿಸಿ ರೂಪಿಸಲಾದ ಈ ವಿಶಿಷ್ಟ ಟವೆಲ್ಲು ಎಲ್ಲರ ಗಮನ ಸೆಳೆಯಿತು. ಅದರ ವಿನ್ಯಾಸವನ್ನು ಪ್ರಪಂಚದಾದ್ಯಂತ ಟೆನಿಸ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು.

ಇಷ್ಟೆಲ್ಲ ಇತಿಹಾಸವನ್ನು ಹೊಂದಿರುವ ವಿಂಬಲ್ಡನ್ ಟವೆಲ್‌ನ ಗುಣಮಟ್ಟವೂ ಉತ್ತಮವಾಗಿರಬೇಕಲ್ಲವೇ? ಅತ್ಯಂತ ಉತ್ಕೃಷ್ಟ ದರ್ಜೆಯ ಹತ್ತಿಯಿಂದ ತಯಾರಾಗುವ, ಬೆವರನ್ನು ತಕ್ಷಣವೇ ಹೀರಿಕೊಳ್ಳಬಲ್ಲ ಸಾಮರ್ಥ್ಯದ ಈ ಟವೆಲ್ಲು ಓಯೆಕೊ ಟೆಕ್ಸ್ ಹಸಿರಿನಿಂದ ತಯಾರಾಗಿದೆ(made in green). ಅಂದರೆ ಸಂಪೂರ್ಣ ಅಪಾಯಕಾರಿಯಲ್ಲದ ರಾಸಾಯನಿಕಗಳಿಂದ ತಯಾರಾಗುತ್ತದೆ. ಪ್ರಪಂಚದ ಕೆಲವೇ ಆಯ್ದ ಕಂಪನಿಗಳು ಈ ಗುಣಮಟ್ಟದ ಟವೆಲ್‌ಗಳನ್ನು ತಯಾರಿಸಬಲ್ಲವು. ಬ್ರಿಟಿಷ್ ಮೂಲದ ಕ್ರಿಸ್ಟಿ ಎಂಬ ಕಂಪನಿಯು ಅನೇಕ ವರ್ಷಗಳಿಂದ ಇದರ ತಯಾರಿಕೆಯಲ್ಲಿ ತೊಡಗಿಸಿಕೊಂಡು ವಿಂಬಲ್ಡನ್ ಆಯೋಜಕರಿಗೆ ಪೂರೈಸುತ್ತಿತ್ತು.

2006ರಲ್ಲಿ ವೆಲ್‌ಸ್ಪನ್ ಎಂಬ ಕಂಪನಿಯು ಕ್ರಿಸ್ಟಿಯ ಮಾಲೀಕತ್ವವನ್ನು ಖರೀದಿಸಿತು. ತನ್ನ ಮಾಂಚೆಸ್ಟರ್ ಕಾರ್ಖಾನೆಯಿಂದ ಟವೆಲ್‌ ತಯಾರಿಸಿ ನೀಡಲಾರಂಭಿಸಿತು. ನಂತರ 2010ರಲ್ಲಿ ಭಾರತದ ಗುಜರಾತಿನ ವಾಪಿಯ ತನ್ನ ಶಾಖೆಗೆ ಇದನ್ನು ವರ್ಗಾಯಿಸಿದ ವೆಲ್‌ಸ್ಪನ್ ಅಂದಿನಿಂದ ಪ್ರಸಕ್ತ ವರ್ಷದ ವಿಶೇಷ ಟವೆಲ್‌ವರೆಗೂ ವರ್ಷವರ್ಷವೂ ಇಲ್ಲಿಂದಲೇ ಮೇಡ್ ಇನ್ ಇಂಡಿಯಾ ಟವೆಲ್‌ ಪೂರೈಸುತ್ತಿದೆ. ಟೆನಿಸ್ ಜಗತ್ತಿಗೆ ವಿಜಯ ಅಮೃತರಾಜ್, ರಮೇಶ್ ಕೃಷ್ಣನ್, ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಅವರಂತಹ ಘಟಾನುಘಟಿಗಳನ್ನು ನೀಡಿದ ಭಾರತವು ಟೆನಿಸ್ ಕಾಶಿಯ ಯಾತ್ರಾರ್ಥಿಗಳಿಗೆ ಅವರ ಜೀವನದ ಅಮೂಲ್ಯ ಕ್ಷಣಗಳನ್ನು ಸದಾ ಹಸಿರಾಗಿಡುವಲ್ಲಿ ವಿಶೇಷ ಸ್ಮರಣಿಕೆಗಳನ್ನೂ ನೀಡುವುದರ ಮೂಲಕ ಇನ್ನೊಂದು ರೀತಿಯ ಕಾಣಿಕೆಯನ್ನೂ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT