ಭಾನುವಾರ, ಅಕ್ಟೋಬರ್ 25, 2020
21 °C

2020ರ ಬಾಕಿ ಟೂರ್ನಿಗಳಲ್ಲಿ ಆಡದಿರಲು ಬಿಯಾಂಕಾ ನಿರ್ಧಾರ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಹೋದ ವರ್ಷದ ಅಮೆರಿಕ ಓಪನ್‌ ಟೂರ್ನಿಯ ಚಾಂಪಿಯನ್‌ ಬಿಯಾಂಕಾ ಆ್ಯಂಡ್ರಿಸ್ಕ್ಯು ಅವರು 2020ರ ಋತುವಿನಲ್ಲಿ ಬಾಕಿ ಉಳಿದಿರುವ ಟೂರ್ನಿಗಳಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಆರೋಗ್ಯ ಹಾಗೂ ತರಬೇತಿಗೆ ಗಮನ ನೀಡುವ ದೃಷ್ಟಿಯಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ವರ್ಷದ ಹಿಂದೆ ಅಮೆರಿಕ ಓಪನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಬಿಯಾಂಕಾ ಅವರು ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ ಈ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಕೆನಡಾದ ಮೊದಲ ಆಟಗಾರ್ತಿ ಎನಿಕೊಂಡಿದ್ದರು. ಆದರೆ 2019ರ ಅಕ್ಟೋಬರ್‌ನಲ್ಲಿ ಶೆನ್‌ಜೆನ್‌ನಲ್ಲಿ ನಡೆದ ಡಬ್ಲ್ಯುಟಿಎ ಫೈನಲ್ಸ್‌ನಲ್ಲಿ ಗಾಯಗೊಂಡ ಬಳಿಕ ಅವರು ಒಂದು ಪಂದ್ಯದಲ್ಲಿಯೂ ಆಡಿಲ್ಲ.

ಈ ಬಾರಿಯ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿಯೂ ಆಡುವುದಿಲ್ಲ ಎಂದು ವಾರದ ಹಿಂದೆ ಬಿಯಾಂಕಾ ಹೇಳಿದ್ದಾರೆ.

‘ಈ ವರ್ಷ ಅಂಗಣದಿಂದ ಹೊರಗುಳಿಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಆರೋಗ್ಯ ಹಾಗೂ ತರಬೇತಿಗೆ ಆದ್ಯತೆ ಕೊಡಲು ತೀರ್ಮಾನಿಸಿದ್ದೇನೆ’ ಎಂದು ಬಿಯಾಂಕಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘2021ರಲ್ಲಿ ನಡೆಯುವ ಒಲಿಂಪಿಕ್ಸ್‌ ಸೇರಿದಂತೆ ಇತರ ಟೂರ್ನಿಗಳಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸಜ್ಜುಗೊಳ್ಳುತ್ತೇನೆ‘ ಎಂದೂ ಉಲ್ಲೇಖಿಸಿದ್ದಾರೆ.

ಹಾಲಿ ಚಾಂಪಿಯನ್‌ ಆ್ಯಷ್ಲೆ ಬಾರ್ಟಿ, ಅಮೆರಿಕ ಓಪನ್‌ ವಿಜೇತೆ ನವೊಮಿ ಒಸಾಕ ಕೂಡ ಈಗಾಗಲೇ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಫ್ರೆಂಚ್‌ ಓಪನ್‌ ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಗಳು ಸೆಪ್ಟೆಂಬರ್‌ 27ರಂದು ಆರಂಭವಾಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು