ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್: ನೊವಾಕ್ ಜೊಕೊವಿಚ್‌ಗೆ ದಾಖಲೆಯ ಚಾಂಪಿಯನ್‌ ಪಟ್ಟ

ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್‌ ಕನಸು ಭಗ್ನ; ಬರ್ಬೊರಾ – ಕಟೆರಿನಾಗೆ ಮಹಿಳಾ ಡಬಲ್ಸ್ ಪ್ರಶಸ್ತಿ
Last Updated 14 ಜೂನ್ 2021, 6:01 IST
ಅಕ್ಷರ ಗಾತ್ರ

ಪ್ಯಾರಿಸ್‌: ಮೊತ್ತ ಮೊದಲ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಕಣಕ್ಕೆ ಇಳಿದ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್‌ ಅವರನ್ನು ಮಣಿಸಿದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಆದರು.

ಭಾನುವಾರ ರಾತ್ರಿ ಇಲ್ಲಿ ನಡೆದ ಐದು ಸೆಟ್‌ಗಳ ಜಿದ್ದಾಜಿದ್ದಿಯ ಫೈನಲ್ ಪಂದ್ಯದಲ್ಲಿ ನೊವಾಕ್‌ 6-7 (6), 2-6, 6-3, 6-2, 6-4ರಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನದಲ್ಲಿರುವ ಜೊಕೊವಿಚ್ ಐದನೇ ಶ್ರೇಯಾಂಕದ ಸ್ಟೆಫನೊಸ್‌ಗೆ ಮೊದಲ ಎರಡು ಸೆಟ್‌ಗಳನ್ನು ಬಿಟ್ಟುಕೊಟ್ಟರೂ ನಂತರ ಚೇತರಿಸಿಕೊಂಡರು. ಮುಂದಿನ ಮೂರೂ ಸೆಟ್‌ಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡರು. ಇದು ಅವರು ಗೆದ್ದ ಒಟ್ಟಾರೆ 19ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯಾಗಿದೆ. ಇನ್ನು ಒಂದು ಪ್ರಶಸ್ತಿ ಗೆದ್ದರೆ ಪುರುಷರ ವಿಭಾಗದಲ್ಲಿ ಅತಿಹೆಚ್ಚು ಗ್ರ್ಯಾನ್‌ಸ್ಲಾಂ ಗೆದ್ದಿರುವ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಬರ್ಬೊರಾ–ಕಟೆರಿನಾಗೆ ಪ್ರಶಸ್ತಿ ಗರಿ: ಜೆಕ್‌ ಗಣರಾಜ್ಯದ ಬರ್ಬೊರಾ ಕ್ರೆಚಿಕೊವಾ ಟೂರ್ನಿಯ ಮಹಿಳಾ ವಿಭಾಗದಲ್ಲಿ ‘ಡಬಲ್‌‘ ಸಾಧನೆ ಮಾಡಿದರು. ಶನಿವಾರ ಸಿಂಗಲ್ಸ್ ವಿಭಾಗದ ಚಾಂಪಿ ಯನ್‌ ಆಗಿದ್ದ ಅವರು ಭಾನುವಾರ ತಮ್ಮದೇ ದೇಶದ ಕಟೆರಿನಾ ಸಿನಿಯಾ ಕೊವಾ ಜೊತೆಗೂಡಿ ಡಬಲ್ಸ್ ವಿಭಾಗದಲ್ಲೂ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಫೈನಲ್ ಹಣಾಹಣಿಯಲ್ಲಿ ಜೆಕ್ ಆಟಗಾರ್ತಿಯರು 6-4, 6-2ರಿಂದ ಪೋಲೆಂಡ್‌ನ ಇಗಾ ಶ್ವಾಟೆಕ್‌ ಹಾಗೂ ಅಮೆರಿಕದ ಬೆಥನಿ ಮೆಟಿಕ್ ಸ್ಯಾಂಡ್ಸ್ ಅವರನ್ನು ಪರಾಭವಗೊಳಿಸಿದರು.

2000 ಇಸವಿಯ ಬಳಿಕ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮಹಿಳಾ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗ ಬರ್ಬೊರಾ ಕ್ರೆಚಿಕೊವಾ ಪಾತ್ರರಾಗಿದ್ದಾರೆ.

2000ರಲ್ಲಿ ಫ್ರಾನ್ಸ್‌ನ ಮೇರಿ ಪಿಯರ್ಸ್‌ ಈ ಶ್ರೇಯ ಗಳಿಸಿದ್ದರು.

25 ವರ್ಷದ ಕ್ರೆಚಿಕೊವಾ ಶನಿವಾರ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಮೂಲಕ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನ ಗಳಿಸಿದ್ದರು. ಸೋಮವಾರ ಪ್ರಕಟವಾಗುವ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ಅವರು ಅಗ್ರಸ್ಥಾನಕ್ಕೇರಲಿದ್ದಾರೆ.

2020ರ ಆವೃತ್ತಿಯ ಸಿಂಗಲ್ಸ್ ವಿಭಾಗದ ಚಾಂಪಿಯನ್‌ ಸ್ವಾಟೆಕ್‌ ಮತ್ತು ಮ್ಯಾಟೆಕ್ ಸ್ಯಾಂಡ್ಸ್ ಮೂರನೇ ಬಾರಿ ಒಟ್ಟಾಗಿ ಕಣಕ್ಕಿಳಿದಿದ್ದರು. ಸಿನಿಯಾಕೊವಾ ಅವರ ವೇಗದ ಚಲನೆ ಹಾಗೂ ಕ್ರೆಚಿಕೊವಾ ಅವರ ಪ್ರಬಲ ಬೇಸ್‌ಲೈನ್ ಹೊಡೆತಗಳ ಮುಂದೆ ಅವರ ಆಟ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT