ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರೆಂಚ್‌ ಓಪನ್ ಟೆನಿಸ್‌: ಸೆಮಿಫೈನಲ್ ಪ್ರವೇಶಿಸಿದ ಜಾಸ್ಮಿನ್ ಪಾವ್ಲೋನಿ

Published 6 ಜೂನ್ 2024, 0:12 IST
Last Updated 6 ಜೂನ್ 2024, 0:12 IST
ಅಕ್ಷರ ಗಾತ್ರ

ಪ್ಯಾರಿಸ್‌: ನಾಲ್ಕನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಅವರನ್ನು ಬುಧವಾರ ಮೂರು ಸೆಟ್‌ಗಳ ಪಂದ್ಯದಲ್ಲಿ ಹಿಮ್ಮೆಟ್ಟಿಸಿದ ಇಟಲಿಯ ಜಾಸ್ಮಿನ್ ಪಾವ್ಲೋನಿ ಫ್ರೆಂಚ್‌ ಓಪನ್ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್ ತಲುಪಿದರು. ಇದು ಅವರಿಗೆ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಮೊದಲ ಸೆಮಿಫೈನಲ್.

12ನೇ ಶ್ರೇಯಾಂಕದ ಪಾವ್ಲೋನಿ 6–2, 4–6, 6–4 ರಿಂದ ಕಜಕಸ್ತಾನದ ರಿಬಾಕಿನಾ ಅವರನ್ನು ಸೋಲಿಸಿದರು. 28ನೇ ವರ್ಷದಲ್ಲಿ ಪಾವ್ಲೋನಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಅವರು 17 ವರ್ಷದ ಮಿರಾ ಆ್ಯಂಡ್ರೀವಾ ಅವರನ್ನು ಸೆಮಿಫೈನಲ್‌ ನಲ್ಲಿ ಎದುರಿಸಲಿದ್ದಾರೆ. 2023ರವರೆಗೆ 16 ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಆಡಿರುವ ಅವರು ಒಟ್ಟು 4 ಪಂದ್ಯ ಗಳನ್ನಷ್ಟೇ ಗೆದಿದ್ದರು. ಆದರೆ ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದರು.

ಸಬಲೆಂಕಾಗೆ ಆಘಾತ: ಶ್ರೇಯಾಂಕರಹಿತ ರಷ್ಯಾದ ಆಟಗಾರ್ತಿ ಮಿರಾ ಆ್ಯಂಡ್ರೀವಾ 6-7(5), 6-4, 6-4ರಿಂದ ಎರಡನೇ ಶ್ರೇಯಾಂಕದ ಅರಿನಾ ಸಬಲೆಂಕಾ (ಬೆಲಾರಸ್‌) ಅವರಿಗೆ ಆಘಾತ ನೀಡಿದರು. ಎರಡು ಬಾರಿ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಆಗಿರುವ ಸಬಲೆಂಕಾ ಮೊದಲ ಸೆಟ್‌ನಲ್ಲಿ ಟೈಬ್ರೇಕರ್‌ ಮೂಲಕ ಮೇಲುಗೈ ಸಾಧಿಸಿದರು. ಆದರೆ, ನಂತರ ಮಿರಾ ಹಿಡಿತ ಸಾಧಿಸಿ ಮುನ್ನಡೆದರು.

ಸೆಮಿಗೆ ಅಲ್ಕರಾಜ್: ಮೂರನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್‌ ಮಂಗಳವಾರ ತಡರಾತ್ರಿ ನಡೆದ ಪಂದ್ಯದಲ್ಲಿ 6–3, 7–6 (7/3), 6–4 ರಲ್ಲಿ ನೇರ ಸೆಟ್‌ಗಳಿಂದ ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಾಸ್ ಅವರ ಸವಾಲಡಗಿಸಿ ಪುರುಷರ ಸಿಂಗಲ್ಸ್‌ ಸೆಮಿಫೈನಲ್ ತಲುಪಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ ಈಗ ಒಂಬತ್ತನೇ ಸ್ಥಾನದಲ್ಲಿರುವ ಗ್ರೀಸ್‌ ಆಟಗಾರನ ಎದುರು ಆಡಿರುವ ಆರೂ ಪಂದ್ಯಗಳಲ್ಲಿ ಅಲ್ಕರಾಜ್ ಜಯಗಳಿಸಿದಂತಾಗಿದೆ.

21 ವರ್ಷದ ಸ್ಪೇನ್‌ ಆಟಗಾರ, ಬಹುನಿರೀಕ್ಷಿತ ಸೆಮಿಫೈನಲ್ ಸೆಣಸಾಟದಲ್ಲಿ ಎರಡನೇ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ. ನೊವಾಕ್ ಜೊಕೊವಿಚ್‌ ಹಿಂದೆಸರಿದ ಪರಿಣಾಮ ಸಿನ್ನರ್ ಮುಂದಿನ ಎಟಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕ್ಕೇರುವುದು ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT