ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

French Open 2023: ಫೈನಲ್‌ಗೆ ಮುಕೋವಾ, ಇಗಾ

Published 9 ಜೂನ್ 2023, 4:25 IST
Last Updated 9 ಜೂನ್ 2023, 4:25 IST
ಅಕ್ಷರ ಗಾತ್ರ

ಪ್ಯಾರಿಸ್‌: ಮ್ಯಾರಥಾನ್‌ ಹೋರಾಟದಲ್ಲಿ ಅರಿನಾ ಸಬಲೆಂಕಾ ಅವರನ್ನು ಮಣಿಸಿದ ಜೆಕ್‌ ರಿಪಬ್ಲಿಕ್‌ನ ಕರೊಲಿನಾ ಮುಕೋವಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಮುಕೋವಾ 7–6, 6–7, 7–5 ರಲ್ಲಿ ವಿಶ್ವದ ಎರಡನೇ ರ್‍ಯಾಂಕ್‌ನ ಆಟಗಾರ್ತಿಯನ್ನು ಮಣಿಸಿದರು. ಈ ಹಣಾಹಣಿ 3 ಗಂಟೆ 13 ನಿಮಿಷ ನಡೆಯಿತು.

ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಮುಕೋವಾ ಅವರು ಹಾಲಿ ಚಾಂಪಿಯನ್‌ ಇಗಾ ಶ್ವಾಂಟೆಕ್‌ ವಿರುದ್ಧ ಪೈಪೋಟಿ ನಡೆಸುವರು. ಮತ್ತೊಂದು ಸೆಮಿಫೈನಲ್‌ನಲ್ಲಿ ಇಗಾ 6–2, 7–6 ರಲ್ಲಿ ಬ್ರೆಜಿಲ್‌ನ ಬ್ಯಾತ್ರಿಜ್ ಹದಾದ್‌ ಮಯಾ ಅವರನ್ನು ಮಣಿಸಿದರು.

ಜೊಕೊವಿಚ್– ಅಲ್ಕರಾಜ್‌ ಸೆಣಸು: ಶುಕ್ರವಾರ ನಡೆಯಲಿರುವ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸರ್ಬಿಯದ ನೊವಾಕ್‌ ಜೊಕೊವಿಚ್‌ ಮತ್ತು ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ ಎದುರಾಗಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

36 ವರ್ಷದ ಜೊಕೊವಿಚ್‌ ಅವರು ದಾಖಲೆಯ 23ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಮಾತ್ರವಲ್ಲ, ಫ್ರೆಂಚ್‌ ಓಪನ್‌ ಗೆದ್ದರೆ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲಿದ್ದಾರೆ.

20 ವರ್ಷದ ಅಲ್ಕರಾಜ್‌ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕಾದರೆ, ಸೆಮಿಫೈನಲ್‌ನಲ್ಲಿ ಗೆಲುವು ಪಡೆಯುವುದು ಅನಿವಾರ್ಯ.

‘ಜೊಕೊವಿಚ್‌ ಅವರಿಗೆ ಇದು ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ 45ನೇ ಸೆಮಿಫೈನಲ್‌. ನನಗೆ ಎರಡನೇ ಸೆಮಿ ಹೋರಾಟ’ ಎಂದು ಅಲ್ಕರಾಜ್‌ ಪ್ರತಿಕ್ರಿಯಿಸಿದ್ದಾರೆ. ‘ಅಲ್ಕರಾಜ್‌ ಅವರನ್ನು ಮಣಿಸಬೇಕಾದರೆ ಸೆಮಿಯಲ್ಲಿ
ಉತ್ತಮ ಆರಂಭ ಪಡೆಯುವುದು ಅಗತ್ಯ’ ಎಂದು ಜೊಕೊವಿಚ್‌ ಹೇಳಿದ್ದಾರೆ.

ಅಲ್ಕರಾಜ್‌ ಅವರು ಇಟಲಿಯ ಲೊರೆನ್ಜೊ ಮುಸೆಟ್ಟಿ ಮತ್ತು ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌ ಅವರನ್ನು ಮಣಿಸಿ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಜೊಕೊವಿಚ್‌ ಅವರು ಎಂಟರ ಘಟ್ಟದಲ್ಲಿ ಕರೆನ್‌ ಕಚನೊವ್‌ ವಿರುದ್ಧ ಗೆದ್ದಿದ್ದರು.

ಶುಕ್ರವಾರ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ ಅಪ್‌ ನಾರ್ವೆಯ ಕ್ಯಾಸ್ಪರ್‌ ರೂಡ್‌ ಅವರು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರ ಸವಾಲನ್ನು ಎದುರಿಸುವರು.

ಗುರುವಾರ ರಾತ್ರಿ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರೂಡ್‌ ಅವರು 6–1, 6–2, 3–6, 6–3 ರಲ್ಲಿ ಹೋಲ್ಗರ್‌ ರೂನ್‌ ಅವರನ್ನು ಮಣಿಸಿದ್ದರು. 22 ವರ್ಷದ ಜ್ವೆರೆವ್ ಅವರಿಗೆ ರೋಲಂಡ್‌ ಗ್ಯಾರೋಸ್‌ನಲ್ಲಿ ಸತತ ಮೂರನೇ ಸೆಮಿ ಫೈನಲ್‌ ಪಂದ್ಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT