ಶನಿವಾರ, ಏಪ್ರಿಲ್ 1, 2023
23 °C

ವಿಂಬಲ್ಡನ್‌: ಕ್ವಾರ್ಟರ್‌ಫೈನಲ್‌ನಿಂದ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ

ಎಪಿ Updated:

ಅಕ್ಷರ ಗಾತ್ರ : | |

Prajavani

ವಿಂಬಲ್ಡನ್‌: ಸೆಂಟರ್‌ಕೋರ್ಟ್‌ ಮತ್ತು ಕೋರ್ಟ್‌ ನಂಬರ್‌ ಒಂದರಲ್ಲಿ ನಡೆಯುವ ವಿಂಬಲ್ಡನ್‌ ಟೂರ್ನಿಯ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ಸ್‌ನಿಂದ ಫೈನಲ್ಸ್‌ವರೆಗಿನ ಪಂದ್ಯಗಳಿಗೆ ಪ್ರೇಕ್ಷಕರ ಪೂರ್ಣಪ್ರಮಾಣದ ಹಾಜರಾತಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

‘ತನ್ಮೂಲಕ, ಹೊರಾಂಗಣ ಕ್ರೀಡಾಂಗಣದದಲ್ಲಿ ಕ್ರೀಡಾ ಟೂರ್ನಿಯೊಂದನ್ನು ಶೇ 100ರಷ್ಟು ಪ್ರೇಕ್ಷಕರು ವೀಕ್ಷಿಸಲು ಮೊದಲ ಬಾರಿ ಅವಕಾಶ ನೀಡಿದಂತಾಗಲಿದೆ’ ಎಂದು ಆಲ್‌ ಇಂಗ್ಲೆಂಡ್ ಕ್ಲಬ್ ಭಾನುವಾರ ತಿಳಿಸಿದೆ.

ಓದಿ: 

ವಿಶ್ವದ ಅತಿ ಹಳೆಯ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿ ಎನಿಸಿದ ವಿಂಬಲ್ಡನ್‌, ಕೋವಿಡ್‌ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ನಡೆದಿರಲಿಲ್ಲ.

ಚಾಂಪಿಯನ್‌ಷಿಪ್‌ನ ಮೊದಲ ವಾರದ ಪಂದ್ಯಗಳು ಯಶಸ್ವಿಯಾಗಿ ನಡೆದ ಕಾರಣ ಮತ್ತು ಸರ್ಕಾರದ ಸಮ್ಮತಿಯಿಂದಾಗಿ ಈಗಿನ ಶೇ 50ರಷ್ಟು ಪ್ರೇಕ್ಷಕರ ಸಂಖ್ಯೆಯನ್ನು ಎರಡು ಕೋರ್ಟ್‌ಗಳಲ್ಲಿ ಪೂರ್ಣ ಪ್ರಮಾಣಕ್ಕೆ ಹೆಚ್ಚಿಸಲು ಸಾಧ್ಯವಾಗಿದೆ ಎಂದು ಕ್ಲಬ್‌ ಹೇಳಿದೆ.

ಸೋಮವಾರ ನಾಲ್ಕನೇ ಸುತ್ತಿನ ಸಿಂಗಲ್ಸ್‌ ಪಂದ್ಯಗಳು ಸೀಮಿತ ಪ್ರೇಕ್ಷಕರ ಹಾಜರಾತಿಯಲ್ಲಿ   ನಡೆಯಲಿವೆ. ಮಂಗಳವಾರ ಪುರುಷರ ಮತ್ತು ಮಹಿಳೆಯರ ವಿಭಾಗದ ಎಂಟರ ಘಟ್ಟದ ಪಂದ್ಯಗಳು ಆರಂಭವಾಗಲಿವೆ. ಮುಂದಿನ ಶನಿವಾರ ಮಹಿಳೆಯರ ಸಿಂಗಲ್ಸ್‌ ಮತ್ತು ಜುಲೈ 11 ರಂದು ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯಗಳು ನಿಗದಿಯಾಗಿವೆ.

ಸಿಂಗಲ್ಸ್‌ ಫೈನಲ್‌ ಪಂದ್ಯಗಳಿಗೆ ಮಾತ್ರ ಕ್ರೀಡಾಂಗಣವನ್ನು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ತೆರೆಯುವುದಾಗಿ, ಟೂರ್ನಿ ಆರಂಭಕ್ಕೆ ಮುನ್ನ ಆಲ್‌ ಇಂಗ್ಲೆಂಡ್‌ ಕ್ಲಬ್‌ ಪ್ರಕಟಿಸಿತ್ತು.

ಸೆಂಟರ್‌ ಕೋರ್ಟ್‌ನಲ್ಲಿ ನಡೆಯುವ ಪಂದ್ಯವನ್ನು 14,799 ಪ್ರೇಕ್ಷಕರು ವೀಕ್ಷಿಸಲು ಅವಕಾಶವಿದೆ. ಒಂದನೇ ನಂಬರ್‌ ಕೋರ್ಟ್‌ನಲ್ಲಿ 12,345 ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಸಾಧ್ಯವಿದೆ. ಈ ಪಂದ್ಯಗಳನ್ನು ವೀಕ್ಷಿಸಲು ಬರುವ ಪ್ರೇಕ್ಷಕರು ತಮಗೆ ಸೋಂಕು ಇಲ್ಲವೆಂಬ ಪ್ರಮಾಣಪತ್ರವನ್ನು ಅಥವಾ ಲಸಿಕೆ ಡೋಸ್‌ ಪೂರೈಸಿರುವ ದಾಖಲೆ ಹಾಜರುಪಡಿಸಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು