ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಗಾ ಸ್ವೆಟೆಕ್‌ ಚಾಂಪಿಯನ್‌

ಫ್ರೆಂಚ್‌ ಓಪನ್ ಟೆನಿಸ್: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಒಲಿದ ಪ್ರಶಸ್ತಿ
Last Updated 4 ಜೂನ್ 2022, 19:31 IST
ಅಕ್ಷರ ಗಾತ್ರ

ಪ್ಯಾರಿಸ್: ಪಂದ್ಯದ ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮೆರೆದ ಪೋಲೆಂಡ್‌ನ ಇಗಾ ಸ್ವೆಟೆಕ್‌ ಅವರು ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.

ರೋಲಂಡ್‌ ಗ್ಯಾರೋಸ್‌ನ ಫಿಲಿಪ್‌ ಚಾಟ್ರಿಯರ್‌ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಸ್ವೆಟೆಕ್‌ 6–1, 6–3 ರಲ್ಲಿ ಅಮೆರಿಕದ ಕೊಕೊ ಗಫ್ ವಿರುದ್ಧ ನಿರಾಯಾಸ ಗೆಲುವು ಸಾಧಿಸಿದರು. ಈ ಪಂದ್ಯ 68 ನಿಮಿಷಗಳಲ್ಲಿ ಕೊನೆಗೊಂಡಿತು.

ವಿಶ್ವದ ಅಗ್ರ ರ‍್ಯಾಂಕಿಂಗ್‌ನ ಆಟಗಾರ್ತಿಗೆ ಒಲಿದ ಎರಡನೇ ಫ್ರೆಂಚ್‌ ಓಪನ್‌ ಪ್ರಶಸ್ತಿ ಇದು. 2020 ರಲ್ಲೂ ಅವರು ಇಲ್ಲಿ ಚಾಂಪಿಯನ್‌ ಆಗಿದ್ದರು. 23 ಸ್ವಯಂಕೃತ ತಪ್ಪುಗಳು ಮತ್ತು ಮೂರು ಡಬಲ್‌ಫಾಲ್ಟ್ಸ್‌ ಎಸಗಿದ ಕೊಕೊ, ತಕ್ಕ ಪೈಪೋಟಿ ನೀಡುವಲ್ಲಿ ವಿಫಲರಾದರು. ಸೋಲು ಎದುರಾಗುತ್ತಿದ್ದಂತೆಯೇ ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು.

ಆರಂಭದಲ್ಲೇ ತಪ್ಪುಗಳನ್ನು ಮಾಡಿದ ಗಫ್, ಮೊದಲ ಗೇಮ್‌ನಲ್ಲೇ ತಮ್ಮ ಸರ್ವ್‌ ಕಳೆದುಕೊಂಡು ಎದುರಾಳಿಗೆ ಪಾಯಿಂಟ್‌ ಬಿಟ್ಟು ಕೊಟ್ಟರು. ಈ ಆಘಾತದಿಂದ ಚೇತರಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಬ್ಯಾಕ್‌ ಹ್ಯಾಂಡ್‌ ಹೊಡೆತಗಳ ಮೂಲಕ ಎದುರಾಳಿಯ ಮೇಲೆ ಸವಾರಿ ಮಾಡಿದ ಸ್ವೆಟೆಕ್‌ ಕೇವಲ ಒಂದು ಗೇಮ್‌ ಬಿಟ್ಟು ಕೊಟ್ಟು ಮೊದಲ ಸೆಟ್‌ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಮರುಹೋರಾಟದ ಸೂಚನೆ ನೀಡಿದ ಗಫ್‌ 2–2 ರಲ್ಲಿ ಸಮಬಲ ಸಾಧಿಸಿದರು. ಆ ಬಳಿಕ ಮತ್ತೆ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು. ಸ್ವೆಟೆಕ್‌ ತಮಗೆ ಲಭಿಸಿದ ಮೊದಲ ಮ್ಯಾಚ್‌ ಪಾಯಿಂಟ್‌ಅನ್ನು ಉಳಿಸಿಕೊಂಡು ಚಾಂಪಿಯನ್‌ ಪಟ್ಟವನ್ನೇರಿದರು. ಗಫ್‌ ಅವರ ರಿಟರ್ನ್‌ನಲ್ಲಿ ಚೆಂಡು ಅಂಕಣದ ಹೊರಹೋಗುತ್ತಿದ್ದಂತೆಯೇ ಸ್ವೆಟೆಕ್‌ ಗೆಲುವಿನ ಸಂಭ್ರಮ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT