ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ – ಇಟಲಿ ‘ಅರ್ಹತಾ’ ಹಣಾಹಣಿ

ಡೇವಿಸ್ ಕಪ್‌ ಟೂರ್ನಿ: ಪ್ರಜ್ಞೇಶ್‌ ಗುಣೇಶ್ವರನ್‌, ರೋಹನ್‌ ಬೋಪಣ್ಣ ಮೇಲೆ ಆತಿಥೇಯರಿಗೆ ಭರವಸೆ
Last Updated 31 ಜನವರಿ 2019, 20:00 IST
ಅಕ್ಷರ ಗಾತ್ರ

ಕೋಲ್ಕತ್ತ: ಉತ್ತಮ ಲಯದಲ್ಲಿರುವ ಪ್ರಜ್ಞೇಶ್‌ ಗುಣೇಶ್ವರನ್‌ ಮೇಲೆ ಭರವಸೆ ಇರಿಸಿರುವ ಭಾರತ ತಂಡ ಡೇವಿಸ್ ಕಪ್‌ ವಿಶ್ವ ಗುಂಪಿನ ಅರ್ಹತೆಗಾಗಿ ಶುಕ್ರವಾರ ಮತ್ತು ಶನಿವಾರ ಇಟಲಿ ವಿರುದ್ಧ ಸೆಣಸಲಿದೆ. ತವರಿನ ಅಂಗಣದಲ್ಲಿ ಗೆದ್ದು ‘ಫೈನಲ್‌’ ಹಂತಕ್ಕೆ ತಲುಪುವ ವಿಶ್ವಾಸದಲ್ಲಿದೆ ಮಹೇಶ್‌ ಭೂಪತಿ ಬಳಗ.

‌ಗುರುವಾರ, ಹಣಾಹಣಿಯ ಡ್ರಾ ಪ್ರಕಟಿಸಲಾಗಿದ್ದು ಪ್ರವಾಸಿ ತಂಡ ದಿಟ್ಟ ನಡೆಯ ಮೂಲಕ ಭಾರತ ಪಾಳಯದಲ್ಲಿ ಅಚ್ಚರಿ ಮೂಡಿಸಿದೆ. ಆ ದೇಶದ ಅಗ್ರ ಕ್ರಮಾಂಕದ ಆಟಗಾರ ಮಾರ್ಕೊ ಚೆಂಚಿನಾಟೊ ಅವರನ್ನು ಸಿಂಗಲ್ಸ್ ವಿಭಾಗದಿಂದ ಕೈಬಿಡಲಾಗಿದೆ. ಸಿಂಗಲ್ಸ್‌ನಲ್ಲಿ ಆ್ಯಂಡ್ರೀಸ್ ಸೆಪ್ಪಿ ಮತ್ತು ಮ್ಯಾಟಿ ಬೆರೆಟಿನಿ ಸಿಂಗಲ್ಸ್ ವಿಭಾಗದಲ್ಲಿ ಕಣಕ್ಕೆ ಇಳಿಯಲಿದ್ದಾರೆ. 22 ವರ್ಷದ ಬೆರೆಟಿನಿ ಅವರಿಗೆ ಇದು ಚೊಚ್ಚಲ ಡೇವಿಸ್ ಕಪ್‌ ಟೂರ್ನಿ.

ಚೆಂಚಿನಾಟೊ, ಡಬಲ್ಸ್ ವಿಭಾಗದಲ್ಲಿ ಕಣಕ್ಕೆ ಇಳಿಯಲಿದ್ದಾರೆ. 2015ರ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ವಿಜೇತ ಸಿಮೋನ್‌ ಬೊಲೇಲಿ, ಚೆಂಚಿನಾಟೊಗೆ ಇಲ್ಲಿ ಜೊತೆಯಾಗಲಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್‌ ವಿರುದ್ಧ ಇಟಲಿ ಜೋಡಿ ಸೆಣಸಲಿದೆ.

ರಾಮ್‌ಕುಮಾರ್ ರಾಮನಾಥನ್‌, ವಿಶ್ವದ 37ನೇ ಕ್ರಮಾಂಕದ ಆಟಗಾರ ಸೆಪ್ಪಿ ಅವರನ್ನು ಎದುರಿಸುವುದರೊಂದಿಗೆ ಹಣಾಹಣಿ ಆರಂಭಗೊಳ್ಳಲಿದೆ. ಅರ್ಹತಾ ಸುತ್ತಿನಲ್ಲಿ ಗೆದ್ದ 12 ತಂಡಗಳು ಮ್ಯಾಡ್ರಿಡ್‌ನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಆಡಲಿವೆ.

ಭಾರತಕ್ಕೆ ಮೇಲುಗೈ: ಭಾರತ ಮತ್ತು ಇಟಲಿ ಈ ವರೆಗೆ ಒಟ್ಟು ಐದು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಐದು ಹಣಾಹಣಿಯಲ್ಲಿ ಭಾರತ ಗೆದ್ದಿದೆ. ಸೌತ್ ಕ್ಲಬ್‌, ಭಾರತದ ಅದೃಷ್ಟದ ತಾಣವಾಗಿದ್ದು 16 ವರ್ಷಗಳ ಬಳಿಕ ಇಲ್ಲಿ ತಂಡ ಕಣಕ್ಕೆ ಇಳಿಯಲಿದೆ. ಇಲ್ಲಿ ಈ ಹಿಂದೆ ನಡೆದ 10 ಹಣಾಹಣಿಗಳಲ್ಲಿ ಭಾರತ ಎಂಟನ್ನು ಗೆದ್ದಿದೆ. 1985ರ ವಿಶ್ವ ಗುಂಪಿನ ಮೊದಲ ಸುತ್ತಿನ ಹಣಾಹಣಿಯಲ್ಲಿ ಇಟಲಿಯನ್ನು ಇದೇ ಅಂಗಣದಲ್ಲಿ ಭಾರತ ಮಣಿಸಿತ್ತು.

ಡೇವಿಸ್ ಕಪ್‌ ಹಣಾಹಣಿಯ ಮಾದರಿಯಲ್ಲಿ ಬದಲಾವಣೆಗಳನ್ನು ಮಾಡಿರುವುದು ಭಾರತದ ವಿಶ್ವಾಸವನ್ನು ಹೆಚ್ಚಿಸಿದೆ.ಮೊದಲ ದಿನ ಎರಡು ಸಿಂಗಲ್ಸ್ ಪಂದ್ಯಗಳು ಮಾತ್ರ ನಡೆಯಲಿದ್ದು ಎರಡನೇ ದಿನ ಡಬಲ್ಸ್ ಹಾಗೂ ಎರಡು ರಿಟರ್ನ್ ಸಿಂಗಲ್ಸ್ ಪಂದ್ಯಗಳು ನಡೆಯಲಿವೆ. ಐದು ಸೆಟ್‌ಗಳ ಬದಲಿಗೆ ಮೂರು ಸೆಟ್‌ಗಳಿಗೆ ಪಂದ್ಯಗಳನ್ನು ಇಳಿಸಲಾಗಿದೆ.

ಮುಂದಿನ ಹಂತಕ್ಕೆ ಪ್ರವೇಶಿಸಬೇಕಾದರೆ ಭಾರತ ಇಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಗೆಲ್ಲಬೇಕು. ಎರಡೂ ದಿನ ಆಡಲಿರುವ ಪ್ರಜ್ಞೇಶ್ ಗುಣೇಶ್ವರನ್ ಮೇಲೆ ಭಾರತದ ನಿರೀಕ್ಷೆ ಹೆಚ್ಚಿದೆ. ವಿಶ್ವ ಗುಂಪಿನ ಪ್ಲೇ ಆಫ್‌ನಲ್ಲಿ ಭಾರತ 0–4ರಿಂದ ಸರ್ಬಿಯಾಗೆ ಮಣಿದಿರುವ ಕಾರಣ ಈಗ ಮಾಡು–ಮಡಿ ಪರಿಸ್ಥಿತಿಯಲ್ಲಿದೆ. ಗೆಲುವು ಸಾಧಿಸದೇ ಇದ್ದರೆ ನಾಯಕ ಮಹೇಶ್‌ ಭೂಪತಿ ಅವರ ಗುತ್ತಿಗೆಯನ್ನು ಪರಿಷ್ಕರಿಸಲಾಗುವುದಿಲ್ಲ ಎಂಬ ಸುದ್ದಿ ಹರಡಿರುವುದರಿಂದ ಅವರಿಗೆ ಈ ಹಣಾಹಣಿ ಸವಾಲಿನದ್ದು.

*
ಇದು ಆವೆಮಣ್ಣಿನ ಅಂಗಣವಲ್ಲ. ಆದರೂ ನಮಗೆ ಬೇಸರ ಇಲ್ಲ. ಮುಂದಿನ ಬಾರಿ ಭಾರತದ ವಿರುದ್ಧ ಆವೆಮಣ್ಣಿನ ಅಂಗಣದಲ್ಲಿ ಆಡುವ ಭರವಸೆ ಇದೆ.
-ಕೊರಾಡೊ ಬರಾಜುಟಿ, ಇಟಲಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT