ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ಅಮೆರಿಕದ ಸಮೀರ್ ಬ್ಯಾನರ್ಜಿಗೆ ವಿಂಬಲ್ಡನ್ ಬಾಲಕರ ಸಿಂಗಲ್ಸ್ ಪ್ರಶಸ್ತಿ

Last Updated 11 ಜುಲೈ 2021, 15:35 IST
ಅಕ್ಷರ ಗಾತ್ರ

ಲಂಡನ್: ಭಾರತ ಮೂಲದ ಅಮೆರಿಕದ ಟೆನಿಸ್ ಆಟಗಾರ ಸಮೀರ್ ಬ್ಯಾನರ್ಜಿ, ವಿಂಬಲ್ಡನ್ ಬಾಲಕರ ವಿಭಾಗದ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿದ್ದಾರೆ.

ಭಾನುವಾರ ನಡೆದ ಜೂನಿಯರ್ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ವಿಕ್ಟರ್ ಲಿಲೊವ್ ವಿರುದ್ಧ 7-5, 6-3ರ ಅಂತರದಲ್ಲಿ ಜಯ ಗಳಿಸಿದರು.

ಗ್ರ್ಯಾನ್‌ಸ್ಲಾಮ್ ಜೂನಿಯರ್ ವಿಭಾಗದಲ್ಲಿ ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ 17ರ ಹರೆಯದ ಸಮೀರ್ ಬ್ಯಾನರ್ಜಿ, ನೆರೆದಿದ್ದವರನ್ನು ರಂಜಿಸಿದರು.

ಸಮೀರ್ ಬ್ಯಾನರ್ಜಿ ಹೆತ್ತವರು ಭಾರತದ ಮೂಲದವರಾಗಿದ್ದು, 1980ರಿಂದ ಅಮೆರಿಕದಲ್ಲಿ ನೆಲೆಸಿದ್ದರು.

ಇತ್ತೀಚೆಗಷ್ಟೇ ನಡೆದ ಫ್ರೆಂಚ್ ಓಪನ್‌ನಲ್ಲಿ 19ನೇ ರ‍್ಯಾಂಕ್‌ನ ಸಮೀರ್ ಬ್ಯಾನರ್ಜಿ, ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು.

ಇತ್ತೀಚಿನ ಕೆಲವು ವರ್ಷಗಳಲ್ಲಿ ಬಾಲಕರ ವಿಭಾಗದ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಭಾರತೀಯರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. 2009ರಲ್ಲಿ ಯೂಕಿ ಭಾಂಬ್ರಿ ಆಸ್ಟ್ರೇಲಿಯನ್ ಓಪನ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. 2015ರಲ್ಲಿ ಸುಮಿತ್ ನಗಾಲ್, ವಿಯೆಟ್ನಾದ ಲಿ ಹೋಂಗ್ ನಾಮ್ ಜೊತೆ ಸೇರಿ ವಿಂಬಲ್ಡನ್ ಬಾಲಕರ ಡಬಲ್ಸ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.

ರಾಮನಾಥನ್ ಕೃಷ್ಣನ್, ಬಾಲಕರ ವಿಭಾಗದಲ್ಲಿ ಗ್ರ್ಯಾನ್‍ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯರಾಗಿದ್ದಾರೆ. 1954ರಲ್ಲಿ ಅವರು ವಿಂಬಲ್ಡನ್ ಜೂನಿಯರ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.

ಬಳಿಕ ರಾಮನಾಥನ್ ಅವರ ಪುತ್ರ ರಮೇಶ್ ಕೃಷ್ಣನ್ 1970ರಲ್ಲಿ ವಿಂಬಲ್ಡನ್ ಜೂ. ಹಾಗೂ ಫ್ರೆಂಚ್ ಓಪನ್ ಜೂ. ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದರು.

1990ರಲ್ಲಿ ಲಿಯಾಂಡರ್ ಪೇಸ್ ವಿಂಬಲ್ಡನ್ ಜೂ. ಮತ್ತು ಫ್ರೆಂಚ್ ಓಪನ್ ಜೂ. ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದರು. ಅವರು ಆಸ್ಟ್ರೇಲಿಯನ್ ಓಪನ್‌ ಬಾಲಕರ ವಿಭಾಗದಲ್ಲಿ ರನ್ನರ್-ಅಪ್ ಕೂಡಾ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT