ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KSLTA ಐಟಿಎಫ್‌ ಟೆನಿಸ್‌ ಟೂರ್ನಿ: ಮುಖ್ಯ ಸುತ್ತಿಗೆ ರಿಷಿ ರೆಡ್ಡಿ, ಆದಿಲ್‌

ಅರ್ಜುನ್‌ ಆಕರ್ಷಣೆ, ಶಶಿಕುಮಾರ್‌ಗೆ ಅಗ್ರಶ್ರೇಯಾಂಕ
Last Updated 14 ಮಾರ್ಚ್ 2022, 12:52 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಲಯ ಮುಂದುವರಿಸಿದ ಕರ್ನಾಟಕದ ರಿಷಿ ರೆಡ್ಡಿ ಮತ್ತು ಆದಿಲ್ ಕಲ್ಯಾಣಪುರ ಅವರು ಐಟಿಎಫ್‌ ಓಪನ್ ಟೆನಿಸ್‌ ಟೂರ್ನಿಯ ಮುಖ್ಯ ಸುತ್ತಿಗೆ ಲಗ್ಗೆಯಿಟ್ಟರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಅಂತಿಮ ಅರ್ಹತಾ ಸುತ್ತಿನಲ್ಲಿ ಸೋಮವಾರ ರಿಷಿ ರೆಡ್ಡಿ6-4, 6-1ರಿಂದ ರಂಜೀತ್ ವಿರಾಲಿ ಮುರುಗೇಶನ್ ಅವರನ್ನು ಪರಾಭವಗೊಳಿಸಿದರು.

ಮತ್ತೊಂದು ಜಿದ್ದಾಜಿದ್ದಿನ ಪಂದ್ಯದಲ್ಲಿ ಆದಿಲ್‌6-1, 2-6, 10-8ರಿಂದ ಲೋಹಿತಾಕ್ಷ ಬದರೀನಾಥ್ ಅವರ ಸವಾಲು ಮೀರಿದರು. ಒಂದು ಸೆಟ್‌ ಕಳೆದುಕೊಂಡರೂ ಎದೆಗುಂದದ ಕರ್ನಾಟಕದ ಆಟಗಾರ ಜಯದ ನಗೆ ಬೀರಿದರು. ಮಂಗಳವಾರ ಆರಂಭವಾಗುವ ಮುಖ್ಯ ಸುತ್ತಿನ ಮೊದಲ ಪಂದ್ಯದಲ್ಲಿ ರಿಷಿ ಅವರು, ಅರ್ಜುನ್ ಖಾಡೆ ಅವರನ್ನು ಎದುರಿಸಲಿದ್ದರೆ, ಆದಿಲ್ ಆಸ್ಟ್ರೇಲಿಯಾದ ಲೂಕಾ ಕ್ರೇನರ್ ವಿರುದ್ಧ ಆಡಲಿದ್ದಾರೆ.

ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಸೂರಜ್ ಪ್ರಬೋಧ್ ಎಡವಿದರು. ಪಾರಸ್‌ ದಹಿಯಾ ಎದುರು 0–6, 1–6ರಿಂದ ಅವರು ನಿರಾಸೆ ಅನುಭವಿಸಿದರು.

ಅರ್ಜುನ್ ಖಾಡೆ ಆಕರ್ಷಣೆ; ಮುಕುಂದ್‌ಗೆ ಅಗ್ರಶ್ರೇಯಾಂಕ: ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅರ್ಜುನ್ ಖಾಡೆ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದು, ಮುಕುಂದ್ ಶಶಿಕುಮಾರ್ ಅವರಿಗೆ ಅಗ್ರಶ್ರೇಯಾಂಕ ಲಭಿಸಿದೆ.

ಅರ್ಜುನ್‌ ಅವರು ಕಳೆದ ತಿಂಗಳು ಇಲ್ಲಿ ನಡೆದ ಬೆಂಗಳೂರು ಓಪನ್‌ನ ಡಬಲ್ಸ್ ವಿಭಾಗದಲ್ಲಿ ಕಿರೀಟ ಧರಿಸಿದ್ದರು. ಈ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಅವರು ಇಂಗ್ಲೆಂಡ್‌ನ ಜೂಲಿಯನ್ ಕ್ಯಾಶ್ ಜೊತೆಗೂಡಿ ಕಣಕ್ಕಿಳಿಯಲಿದ್ದು, ಅಗ್ರಶ್ರೇಯಾಂಕ ಪಡೆದಿದ್ದಾರೆ. ಈ ವಿಭಾಗದ ಕಣದಲ್ಲಿ ಡೇವಿಸ್‌ ಕಪ್ ಟೂರ್ನಿಯಲ್ಲಿ ಆಡಿರುವ ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಕೂಡ ಇದ್ದು, ಪ್ರಶಸ್ತಿಗೆ ಪೈಪೋಟಿ ನಡೆಸಲಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಸಿದ್ಧಾರ್ಥ್ ರಾವತ್‌ ಅವರಿಗೆ ಎರಡನೇ ಶ್ರೇಯಾಂಕ ನೀಡಲಾಗಿದೆ. ಲೂಕಾ ಕ್ರೇನರ್‌, ಭಾರತದ ಮನೀಷ್‌ ಸುರೇಶಕುಮಾರ್ ಅವರಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಶ್ರೇಯಾಂಕ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT