ಶನಿವಾರ, ಜುಲೈ 2, 2022
25 °C
ಕೆಎಸ್‌ಎಲ್‌ಟಿಎ ಎಸ್‌ಕೆಎಂಇ ಐಟಿಎಫ್‌ ಟೆನಿಸ್ ಟೂರ್ನಿ: ಸಿದ್ಧಾರ್ಥ್ ರಾವತ್ ರನ್ನರ್ ಅಪ್

ಅರ್ಜುನ್ ಖಾಡೆ ’ಡಬಲ್‌‘ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದ ಅರ್ಜುನ್ ಖಾಡೆ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಎಸ್‌ಕೆಎಂಇ ಸಹಯೋಗದಲ್ಲಿ ಆಯೋಜಿಸಿದ್ದ ಐಟಿಎಫ್‌ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತದವರೇ ಆದ ಸಿದ್ಧಾರ್ಥ್ ರಾವತ್ ಎದುರು ಅರ್ಜುನ್ 6-3, 3-6, 6-1ರಲ್ಲಿ ಗೆಲುವು ಸಾಧಿಸಿದರು.

ಕಳೆದ ವಾರ ಭೋಪಾಲ್‌ನಲ್ಲಿ ನಡೆದಿದ್ದ ಐಟಿಎಫ್ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ಅರ್ಜುನ್ ಶನಿವಾರ ನಡೆದ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಬ್ರಿಟನ್‌ನ ಜೂಲಿಯನ್ ಕ್ಯಾಶ್ ಜೊತೆಗೂಡಿ ಜಯ ಸಾಧಿಸಿದ್ದರು. ಭೋಪಾಲ್‌ನಲ್ಲಿ ನಡೆದಿದ್ದ ಐಟಿಎಫ್ ಫೈನಲ್‌ನಲ್ಲೂ ಅವರು ಸಿದ್ಧಾರ್ಥ್ ರಾವತ್ ಎದುರು ಗೆದ್ದಿದ್ದರು. 

28 ವರ್ಷದ, 5ನೇ ಶ್ರೇಯಾಂಕದ ಆಟಗಾರ ಅರ್ಜುನ್ ಪಂದ್ಯದ ಅರಂಭದಲ್ಲೇ 3–0ಯಿಂದ ಮುನ್ನಡೆ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್ ಗಳಿಸಿದ ಅವರು ನಂತರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಒತ್ತಡಕ್ಕೆ ಸಿಲುಕಿದ 2ನೇ ಶ್ರೆಯಾಂಕದ ಸಿದ್ಧಾರ್ಥ್‌ ತಪ್ಪುಗಳನ್ನು ಎಸಗುತ್ತ ಪಾಯಿಂಟ್‌ಗಳನ್ನು ಕಳೆದುಕೊಂಡರು. ಕೇವಲ ಮೂರು ಗೇಮ್‌ಗಳನ್ನು ಬಿಟ್ಟುಕೊಟ್ಟು ಅರ್ಜುನ್ ಮೊದಲ ಗೇಮ್ ಗೆದ್ದುಕೊಂಡರು.  

‘ಇಂಥ ಪಂದ್ಯಗಳಲ್ಲಿ ಮೊದಲ ಸೆಟ್ ಗೆದ್ದು ಭರವಸೆ ಮೂಡಿಸಿಕೊಳ್ಳುವುದು ಅತಿ ಅಗತ್ಯ’ ಎಂದು ಪಂದ್ಯದ ನಂತರ ಹೇಳಿದ ಅವರು ಎರಡನೇ ಸೆಟ್ ಕಳೆದುಕೊಂಡರು. ಎರಡನೇ ಸೆಟ್‌ನ ಆರಂಭದಲ್ಲಿ ಇಬ್ಬರೂ ಸಮಬಲದ ಹೋರಾಟ ಮಾಡಿದರು. 3–3ರಲ್ಲಿ ಪಂದ್ಯ ಸಮ ಆದಾಗ ಪ್ರೇಕ್ಷಕರ ಕುತೂಹಲ ಹೆಚ್ಚಿತು. ಅರ್ಜುನ್ ಅವರ ಕೆಟ್ಟ ಹೊಡೆತವೊಂದು ಸೆಟ್‌ನ ಗತಿಯನ್ನೇ ಬದಲಿಸಿತು. ಆರು ಮತ್ತು ಎಂಟನೇ ಗೇಮ್‌ನಲ್ಲಿ ಗೇಮ್‌ಗಳಲ್ಲಿ ಎದುರಾಳಿಯ ಸರ್ವ್ ಮುರಿದ ಸಿದ್ಧಾರ್ಥ್‌ ಸೆಟ್ ಮೇಲೆ ಹಿಡಿದ ಬಲಪಡಿಸಿದರು.  

ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಅರ್ಜುನ್ ಮತ್ತೆ ಮೋಹಕ ಆಟಕ್ಕೆ ಅಣಿಯಾದರು. ಅರಂಭದಲ್ಲೇ 3–0ಯಿಂದ ಮುನ್ನಡೆದು ಭರವಸೆ ಮೂಡಿಸಿಕೊಂಡ ಅವರು ನಂತರ ನಾಗಾಲೋಟದ ಮೂಲಕ ಸೆಟ್ ಮತ್ತು ಪಂದ್ಯ ಗೆದ್ದುಕೊಂಡರು. ಅರ್ಜುನ್‌ಗೆ 15 ಮತ್ತು ಸಿದ್ಧಾರ್ಥ್‌ಗೆ 8 ಎಟಿಪಿ ಪಾಯಿಂಟ್‌ಗಳು ಈ ಟೂರ್ನಿಯಲ್ಲಿ ಲಭಿಸಿದವು.

*
ಬೆಂಗಳೂರಿನಲ್ಲಿ ಆಡುವುದೆಂದರೆ ನನಗೆ ತುಂಬ ಇಷ್ಟ. ಎರಡು ವಾರಗಳಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದಿರುವುದು ಅತ್ಯಂತ ಖುಷಿಯ ವಿಷಯ.
–ಅರ್ಜುನ್ ಖಾಡೆ ಪ್ರಶಸ್ತಿ ವಿಜೇತ ಆಟಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು