ಶನಿವಾರ, ಅಕ್ಟೋಬರ್ 24, 2020
18 °C
ಕೆನಡಾದ ಯುವ ಆಟಗಾರ್ತಿ ಲೆಯ್ಲಾ ಫರ್ನಾಂಡಸ್‌ಗೆ ಗೆಲುವು

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಮೂರನೇ ಸುತ್ತಿಗೆ ಲೆಯ್ಲಾ, ಓಸ್ತಪೆಂಕೊ

ಎಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಅಮೆರಿಕದ ಆಟಗಾರ್ತಿ, ನಾಲ್ಕನೇ ಶ್ರೇಯಾಂಕದ ಸೋಫಿಯಾ ಕೆನಿನ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದರು. ಮಾಜಿ ಚಾಂಪಿಯನ್ ಜೆಲೆನಾ ಓಸ್ತಪೆಂಕೊ ಮತ್ತು ಯುವ ಆಟಗಾರ್ತಿ ಲೆಯ್ಲಾ ಫರ್ನಾಂಡಸ್ ಕೂಡ ಮೂರನೇ ಸುತ್ತು ಪ್ರವೇಶಿಸಿದರು.

ಕೋರ್ಟ್ ಫಿಲಿಪ್ ಚಾಟ್ರಿಯರ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಸೋಫಿಯಾ 3–6, 6–3, 6–2ರಲ್ಲಿ ರೊಮೇನಿಯಾದ ಅನಾ ಬೊಗ್ದಾನ್ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಸೋಫಿಯಾ ಎರಡನೇ ಸೆಟ್ ತಮ್ಮದಾಗಿಸಿಕೊಂಡಿದ್ದರು. 21 ವರ್ಷದ ಆಟಗಾರ್ತಿ ಮೂರನೇ ಸೆಟ್‌ನಲ್ಲಿ 5–1ರ ಮುನ್ನಡೆ ಗಳಿಸಿದ್ದಾಗ ಮೂರು ಬಾರಿ ಮ್ಯಾಚ್ ಪಾಯಿಂಟ್‌ಗಳನ್ನು ಕಳೆದುಕೊಂಡರು. ಒಂದು ಗೇಮ್‌ ಬಿಟ್ಟುಕೊಟ್ಟರೂ ಕೊನೆಗೆ ಸೆಟ್ ಮತ್ತು ಪಂದ್ಯ ಗೆದ್ದು ನಗೆ ಸೂಸಿದರು.

’ಆರಂಭದಲ್ಲಿ ಲಯ ಕಂಡುಕೊಳ್ಳಲು ಪ್ರಯಾಸಪಟ್ಟೆ. ಎದುರಾಳಿ ಚೆನ್ನಾಗಿ ಆಡುತ್ತಿರುವುದರಿಂದ ಹೆಚ್ಚು ಶ್ರಮ ಹಾಕಿದರೆ ಮಾತ್ರ ಗೆಲುವು ದಕ್ಕಬಹುದು ಎಂದು ಗೊತ್ತಿತ್ತು. ಅದಕ್ಕೆ ತಕ್ಕಂತೆ ಆಡಿದೆ‘ ಎಂದು ಪಂದ್ಯದ ನಂತರ ಸೋಫಿಯಾ ಹೇಳಿದರು.

ಎರಡನೇ ಶ್ರೇಯಾಂಕದ, ಜೆಕ್ ಗಣರಾಜ್ಯದ ಆಟಗಾರ್ತಿ ಕರೋಲಿನಾ ‌ಪ್ಲಿಸ್ಕೋವಾ ಅವರನ್ನು 6–4, 6–2ರಲ್ಲಿ ಮಣಿಸಿ ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ ಮುಂದಿನ ಹಂತಕ್ಕೆ ಲಗ್ಗೆ ಇರಿಸಿದರು. 2017ರಲ್ಲಿ ರೋಲೆಂಡ್ ಗ್ಯಾರೋಸ್‌ನಲ್ಲಿ ಅವರು ಪ್ರಶಸ್ತಿ ಗಳಿಸಿದ್ದರು. ಅದು ಅವರು ವೃತ್ತಿಜೀವನದ ಗರಿಷ್ಠ ಸಾಧನೆಯಾಗಿತ್ತು.

ಮಹಿಳೆಯರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಎರಡು ಬಾರಿಯ ವಿಂಬಲ್ಡನ್ ವಿಜೇತೆ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 6–3, 6–3ರಲ್ಲಿ ಕೆನಡಾದ ಜಾಸ್ಮಿನ್ ಪೌಲಿನಿ ಎದುರು ಗೆಲುವು ಸಾಧಿಸಿದರು. ಏಳನೇ ಶ್ರೇಯಾಂಕಿತೆ ಕ್ವಿಟೋವಾ ಇಲ್ಲಿ 2012ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

ಎಂಟನೇ ಶ್ರೇಯಾಂಕಿತೆ ಅರಿನಾ ಸಬಲೆಂಕಾ 7-6 (6), 6-0ರಲ್ಲಿ ದಾರಿಯಾ ಕಸಕಿನಾ ಎದುರು ಜಯ ಗಳಿಸಿದರು. ಅಮೆರಿಕಾದ ಡ್ಯಾನಿಲಿ ಕಾಲಿನ್ಸ್ 6–2, 6–3ರಲ್ಲಿ ಗೆದ್ದು ಡೆನ್ಮಾರ್ಕ್‌ನ ಯುವ ಆಟಗಾರ್ತಿ ಕ್ಲಾರಾ ಟೌಸನ್ ಅವರ ಕನಸನ್ನು ನುಚ್ಚುನೂರು ಮಾಡಿದರು.

ಲೆಯ್ಲಾ ಫರ್ನಾಂಡಸ್‌ಗೆ ಗೆಲುವು

18 ವರ್ಷದ, ಕೆನಡಾ ಆಟಗಾರ್ತಿ ಲೆಯ್ಲಾ ಆ್ಯನಿ ಫರ್ನಾಂಡಸ್ ಅವರು ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರಲ್ಲಿ ಇದೇ ಮೊದಲ ಬಾರಿ ಮೂರನೇ ಸುತ್ತು ಪ್ರವೇಶಿಸಿದರು. ಅನುಭವಿ ಆಟಗಾರ್ತಿ ಪೊಲೊನಾ ಹರ್ಕಾಗ್ ಎದುರು ಅವರು 6-4, 3-6, 6-1ರಲ್ಲಿ ಗೆಲುವು ಸಾಧಿಸಿದರು.

ದಿವಿಜ್ ಶರಣ್ ಜೋಡಿಗೆ ಸೋಲು

ಭಾರತದ ದಿವಿಜ್ ಶರಣ್ ಮತ್ತು ದಕ್ಷಿಣ ಕೊರಿಯಾದ ಕ್ವೋನ್ ಸೂನ್ ವೂ ಜೋಡಿ ಪುರುಷರ ಡಬಲ್ಸ್ ವಿಭಾಗದಿಂದ ಹೊರಬಿದ್ದರು. ಶ್ರೇಯಾಂಕರಹಿತರಾದ ದಿವಿಜ್–ಕ್ವೋನ್ ಅವರನ್ನು 16ನೇ ಶ್ರೇಯಾಂಕದ ಕ್ರೊವೇಷ್ಯಾ–ಅಮೆರಿಕ ಜೋಡಿ ಫ್ರಾಂಕೊ ಕುಗರ್–ಆಸ್ಟಿನ್ ಕ್ರಜಿಸೆಕ್ 2-6, 6-4, 4-6ರಲ್ಲಿ ಸೋಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು