ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಎಂಟರ ಘಟ್ಟಕ್ಕೆ ಪೆಟ್ರಾ ಕ್ವಿಟೊವಾ

ಅಲೆಕ್ಸಾಂಡರ್ ಜ್ವೆರೆವ್‌ ಪರಾಭವ
Last Updated 5 ಅಕ್ಟೋಬರ್ 2020, 13:46 IST
ಅಕ್ಷರ ಗಾತ್ರ

ಪ್ಯಾರಿಸ್‌ (ರಾಯಿಟರ್ಸ್): ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೊವಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಅವರು 6–2, 6–4ರಿಂದ ಚೀನಾದ ಜಾಂಗ್‌ ಶುವಾಯಿ ಅವರ ಸವಾಲು ಮೀರಿದರು. ಈ ಗೆಲುವಿನ ಮೂಲಕ ಎಂಟು ವರ್ಷಗಳ ಬಳಿಕ ಅವರು ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

ಪ್ರಮುಖ ಆಟಗಾರ್ತಿಯರು ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದ್ದು, ಏಳನೇ ಶ್ರೇಯಾಂಕಿತೆ ಕ್ವಿಟೊವಾ ಅವರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಸುವರ್ಣ ಅವಕಾಶವಿದೆ. ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು ಜರ್ಮನಿಯ ಲೌರಾ ಸಿಗ್ಮಂಡ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ.

30 ವರ್ಷದ ಕ್ವಿಟೊವಾ 2012ರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದರು.

ಪಂದ್ಯದ ಆರಂಭದಿಂದಲೇ ಕ್ವಿಟೊವಾ, ಬೇಸಲೈನ್‌ನಲ್ಲಿ ಪಾರಮ್ಯ ಮೆರೆದರು. ಫಿಲಿಪ್‌ ಚಾಟ್ರಿಯರ್‌ ಅಂಗಣದಲ್ಲಿ 15 ನಿಮಿಷಗಳಲ್ಲೇ ಮೊದಲ ಸೆಟ್‌ನಲ್ಲಿ 4–0 ಮುನ್ನಡೆ ಸಾಧಿಸಿದರು.

ತಮ್ಮ 33 ಪ್ರಯತ್ನಗಳಲ್ಲಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಮೊದಲ ಬಾರಿ ನಾಲ್ಕನೇ ಸುತ್ತು ಪ್ರವೇಶಿಸಿದ್ದ ಜಾಂಗ್‌, ಕ್ವಿಟೊವಾ ಎಸಗಿದ ಲೋಪಗಳ ಲಾಭ ಪಡೆಯಲು ಯತ್ನಿಸಿದರು. ಆದರೆ ಯಶಸ್ಸು ಸಿಗಲಿಲ್ಲ. ಮೊದಲ ಸೆಟ್‌ನ ಅಂತ್ಯಕ್ಕೆ ಜಾಂಗ್‌ ವೈದ್ಯಕೀಯ ವಿರಾಮ ಪಡೆದರು. ಕ್ವಿಟೊವಾ ಚಳಿಗೆ ನಡುಗಿದರು.

ಎರೆಡನೇ ಸೆಟ್‌ನಲ್ಲಿ ಕ್ವಿಟೊವಾ ಅವರು 5–2 ಮುನ್ನಡೆಯಲ್ಲಿದ್ದರು. ಜಾಂಗ್‌ ಸತತ ಎರಡು ನೇರ ಗೇಮ್‌ಗಳನ್ನು ಗೆದ್ದುಕೊಂಡರು. ಆದರೆ ಎಚ್ಚೆತ್ತುಕೊಂಡ ಕ್ವಿಟೊವಾ ತಮ್ಮ ಜಾಣ್ಮೆಯ ಆಟದ ಮೂಲಕ ಸೆಟ್‌ ಹಾಗೂ ಪಂದ್ಯ ಗೆದ್ದುಕೊಂಡರು.

ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ಫೈನಲ್‌ಗೆ ಸಿಗ್ಮಂಡ್‌: ಶ್ರೇಯಾಂಕರಹಿತ ಆಟಗಾರ್ತಿ ಲೌರಾ ಸಿಗ್ಮಂಡ್‌ 7–5, 6–2ರಿಂದ ಸ್ಪೇನ್‌ನ ಪೌಲಾ ಬಡೋಸಾ ಅವರನ್ನು ಮಣಿಸಿ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಎಂಟರಘಟ್ಟಕ್ಕೆ ಕಾಲಿಟ್ಟರು.

ಫ್ರೆಂಚ್‌ ಓಪನ್‌ ಟೂರ್ನಿಯ ಮಾಜಿ ಜೂನಿಯರ್‌ ಚಾಂಪಿಯನ್‌ ಆಗಿರುವ ಬಡೋಸಾ, ಕಳೆದ ಪಂದ್ಯದಲ್ಲಿ ಎಲೆನಾ ಒಸ್ತಾಪೆಂಕೊ ಅವರಿಗೆ ಸೋಲುಣಿಸಿದ್ದರು. ಒಸ್ತಾಪೆಂಕೊ 2017ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು.

ಮಹಿಳಾ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಇತರ ಪಂದ್ಯಗಳಲ್ಲಿ ಶುಕ್ರವಾರ ಎಲಿನಾ ಸ್ವಿಟೊಲಿನಾ ಅವರು 6–1, 6–3ರಿಂದ ಕರೋಲಿನ್‌ ಗಾರ್ಸಿಯಾ ಎದುರು, ನಾದಿಯಾ ಪೊದೊರೊಸ್ಕಾ 2–6, 6–2, 6–3ರಿಂದ ಬಾರ್ಬೊರಾ ಕ್ರೆಜ್‌ಸಿಕೊವಾ ವಿರುದ್ಧ ಗೆದ್ದು ಎಂಟರಘಟ್ಟ ಪ್ರವೇಶಿಸಿದರು.

ಜ್ವರೆವ್‌ಗೆ ಸೋಲು: ಭರವಸೆ ಮೂಡಿಸಿದ್ದ ಜರ್ಮನಿಯ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು. ಇಟಲಿಯ ಜಾನಿಕ್‌ ಸಿನ್ನರ್‌ ಎದುರು 6–3, 6–3, 4–6, 6–3ರಿಂದ ಸೋತು ನಿರ್ಗಮಿಸಿದರು. ಜಾನಿಕ್‌ ಕ್ವಾರ್ಟರ್‌ಫೈನಲ್‌ ತಲುಪಿದರು. ಮತ್ತೊಂದು ಪಂದ್ಯದಲ್ಲಿ ಡೊಮಿನಿಕ್‌ ಥೀಮ್‌ 6–4, 6–4, 5–7, 3–6, 6–3ರಿಂದ ಹ್ಯುಗೊ ಗಾಸ್ಟನ್‌ ವಿರುದ್ಧಗೆದ್ದು ಎಂಟರಘಟ್ಟ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT