ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಯಾಮಿ ಓಪನ್ ಟೆನಿಸ್ ಟೂರ್ನಿ: ಫೆಡರರ್‌ಗೆ 101ನೇ ಪ್ರಶಸ್ತಿ ಗರಿ

ಅಮೆರಿಕದ ಜಾನ್ ಇಸ್ನರ್‌ಗೆ ನಿರಾಸೆ
Last Updated 1 ಏಪ್ರಿಲ್ 2019, 20:14 IST
ಅಕ್ಷರ ಗಾತ್ರ

ಮಿಯಾಮಿ: ಪ್ರಶಸ್ತಿಗಳ ‘ಶತಕ’ ಗಳಿಸಿ ಇತ್ತೀಚೆಗೆ ಸುದ್ದಿಯಾಗಿದ್ದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಭಾನುವಾರ ರಾತ್ರಿ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಂಡರು. 101ನೇ ಪ್ರಶಸ್ತಿಗೆ ಮುತ್ತಿಕ್ಕಿದರು.

ಇಲ್ಲಿ ಮುಕ್ತಾಯಗೊಂಡ ಮಿಯಾಮಿ ಓಪನ್ ಟೂರ್ನಿಯ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಜಾನ್ ಇಸ್ನೇರ್ ಅವರನ್ನು ಫೆಡರರ್‌ 6–1, 6–4ರಿಂದ ಮಣಿಸಿದರು. ಕಳೆದ ಎರಡು ವರ್ಷ ಆವೆಮಣ್ಣಿನ ಅಂಗಣಕ್ಕೆ ಇಳಿಯದೇ ಇದ್ದ ಫೆಡರರ್‌ ಮಿಯಾಮಿ ಓಪನ್‌ನಲ್ಲಿ ಆರಂಭದಿಂದಲೇ ಎದುರಾಳಿಗಳ ಮೇಲೆ ಆಧಿಪತ್ಯ ಸ್ಥಾಪಿಸಿದ್ದರು.

ಏಸ್‌ ಪರಿಣಿತ ಅಮೆರಿಕದ ಆಟಗಾರ ಇಸ್ನರ್‌ಗೆ ಫೈನಲ್‌ನಲ್ಲಿ ನಿರಾಸೆ ಮೂಡಿಸಿದರು. ಕಾಲಿನ ಪಾದದಲ್ಲಿ ನೋವು ಕಾಣಿಸಿಕೊಂಡಿದ್ದ ಇಸ್ನರ್‌ ಕೇವಲ 63 ನಿಮಿಷಗಳಲ್ಲಿ ಸ್ವಿಸ್ ಆಟಗಾರನ ಮುಂದೆ ಮಂಡಿ ಯೂರಿದರು.

ಮಾರ್ಚ್‌ನಲ್ಲಿ ನಡೆದಿದ್ದ ಇಂಡಿಯಾನ ವೆಲ್ಸ್‌ನಲ್ಲಿ ನಿರಾಸೆ ಕಂಡಿದ್ದ ಫೆಡರರ್‌ ಭಾನುವಾರ ರಾತ್ರಿಯ ಪಂದ್ಯದ ಮೊದಲ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದು ಸಂಭ್ರಮಿಸಿದರು. ನಂತರ ವಿಶ್ವಾಸದಿಂದಲೇ ಆಡಿದರು. ಹೀಗಾಗಿ ಎದುರಾಳಿಗೆ ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳಲು ಆಗಲಿಲ್ಲ.

ಫೆಡರರ್‌ಗೆ ನಾಲ್ಕನೇ ಸ್ಥಾನ, ಹಲೆಪ್‌ಗೆ ನಿರಾಸೆ
ಪ್ಯಾರಿಸ್‌: ಮಿಯಾಮಿ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದ ಫೆಡರರ್‌ ಸೋಮವಾರ ಬಿಡುಗಡೆಗೊಂಡಿರುವ ಎಟಿಪಿ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಗ್ರೀಸ್‌ನ ಸ್ಟೆಫನೋಸ್‌ ಸಿಸಿಪಸ್‌ ಜೀವನಶ್ರೇಷ್ಠ ಎಂಟನೇ ಸ್ಥಾನಕ್ಕೇರಿದ್ದು ಕೆನಡಾದ ಡೆನಿಸ್ ಶಪಲೊವ್‌ ಇದೇ ಮೊದಲ ಬಾರಿ ಅಗ್ರ 20ರ ಒಳಗೆ ಸ್ಥಾನ ಗಳಿಸಿದ್ದಾರೆ.ಸರ್ಬಿಯಾದ ನೊವಾಕ್ ಜೊಕೊವಿಚ್‌, ಸ್ಪೇನ್‌ನ ರಫೆಲ್ ನಡಾಲ್‌ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಹಲೆಪ್‌ಗೆ ನಿರಾಸೆ: ರುಮೇನಿಯಾದ ಸಿಮೋನ ಹಲೆಪ್‌ ಅಗ್ರಸ್ಥಾನವನ್ನು ಕಳೆದುಕೊಂಡಿದ್ದು ಜಪಾನ್‌ನ ನವೊಮಿ ಒಸಾಕ ಮಹಿಳಾ ವಿಭಾಗದ ಹೊಸ ರಾಣಿಯಾಗಿ ಮೆರೆದಿದ್ದಾರೆ. ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವ, ಕರೊಲಿನಾ ಪ್ಲಿಸ್ಕೋವ ಮತ್ತು ಜರ್ಮನಿಯ ಏಂಜಲಿಕ್ ಕೆರ್ಬರ್‌ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT