ಸೋಮವಾರ, ಮೇ 16, 2022
24 °C
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಬಾರ್ಟಿ ಜಯಭೇರಿ

ಎರಡನೇ ಸುತ್ತಿಗೆ ಮುನ್ನಡೆದ ನಡಾಲ್‌

ಎಪಿ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಅಮೋಘ ಆಟದ ಮೂಲಕ ಗಮನಸೆಳೆದ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ವಿಜೇತ ರಫೆಲ್ ನಡಾಲ್, ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಅವರು 6–3, 6–4, 6–1ರಿಂದ ಸರ್ಬಿಯದ ಲಾಸ್ಲೊ ಡೇರ್ ಅವರ ಸವಾಲು ಮೀರಿದರು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾ ಆ್ಯಷ್ಲೆ ಬಾರ್ಟಿ ಕೂಡ ಮೊದಲ ತಡೆ ದಾಟಿ ಮುನ್ನಡೆದರು.

ಟೂರ್ನಿಗೂ ಮೊದಲು ಬೆನ್ನು ನೋವಿನಿಂದ ಬಳಲಿದ್ದ ನಡಾಲ್‌, ಇಲ್ಲಿ ಅದೆಲ್ಲವನ್ನೂ ಮರೆಸುವ ಆಟವಾಡಿದರು. ರಾಡ್ ಲೇವರ್ ಅರೆನಾದಲ್ಲಿ 56ನೇ ಕ್ರಮಾಂಕದ ಲಾಸ್ಲೊ ಅವರಿಗೆ ಹೆಚ್ಚು ಸವಾಲೆನಿಸಲಿಲ್ಲ. ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಪೇನ್ ಆಟಗಾರ ನಡಾಲ್‌, ಈ ತಿಂಗಳಲ್ಲಿ ಮೊದಲ ಸ್ಪರ್ಧಾತ್ಮಕ ಪಂದ್ಯವಾಡಿದರು. ಎರಡು ತಾಸುಗಳೊಳಗೆ ಹಣಾಹಣಿ ಮುಗಿಯಿತು.

ಮುಂದಿನ ಪಂದ್ಯದಲ್ಲಿ ನಡಾಲ್‌, ಅಮೆರಿಕದ ಮೈಕೆಲ್‌ ಮೊಹ್ ಎದುರು ಆಡಲಿದ್ದಾರೆ. ಮೊದಲ ಸುತ್ತಿನ ಸೆಣಸಾಟದಲ್ಲಿ ಮೈಕೆಲ್‌ 7–6, 6–7, 3–6, 7–6, 7–5ರಿಂದ ವಿಕ್ಟರ್ ಟ್ರೋಯ್ಸಿ ಅವರನ್ನು ಮಣಿಸಿದರು.

ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಆ್ಯಷ್ಲೆ ಬಾರ್ಟಿ 6–0, 6–0ದಿಂದ ಮೊಂಟೆನೆಗ್ರೊದ ಡಂಕಾ ಕೊವಿನಿಚ್ ಎದುರು ಗೆದ್ದರು. ಹೋದ ವರ್ಷದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಬಾರ್ಟಿ ಅವರು ಅಮೆರಿಕದ ಸೋಫಿಯಾ ಕೆನಿನ್ ಎದುರು ಸೋತಿದ್ದರು. ಅಮೆರಿಕ ಓಪನ್ ಟೂರ್ನಿಯಲ್ಲಿ ಆಡಿರಲಿಲ್ಲ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೆವ್‌ 6–2, 6–2, 6–4ರಿಂದ ವಾಸೆಕ್‌ ಪಾಸ್ಪಿಸಿಲ್ ಎದುರು, ಆ್ಯಂಡ್ರೆ ರುಬ್ಲೆವ್ 6-3 6-3 6-4ರಿಂದ ಯಾನಿಕ್ ಹಾಂಫ್‌ಮನ್ ವಿರುದ್ಧ ಜಯಿಸಿ ಮುನ್ನಡೆದರು. ಸ್ಟೆಫಾನೊಸ್ ಸಿಸಿಪಸ್‌ 6–1, 6–2, 6–1ರಿಂದ ಫ್ರಾನ್ಸ್‌ನ ಗಿಲ್ಲೆ ಸಿಮೊನ್ ಎದುರು ಗೆದ್ದರು.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಸೋಫಿಯಾ ಕೆನಿನ್‌ 7–5, 6–4ರಿಂದ ಮ್ಯಾಡಿಸನ್ ಇಂಗ್ಲಿಸ್ ಎದುರು, ಸ್ಪೇನ್‌ನ ಗಾರ್ಬೈನ್ ಮುಗುರುಜಾ 6–4, 6–0ರಿಂದ ಮಾರ್ಗರಿಟಾ ಗ್ಯಾಸ್ಪರಿನ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.

ವಿಕ್ಟೋರಿಯಾಗೆ ಸೋಲು:  ಎರಡು ಬಾರಿಯ ಆಸ್ಟ್ರೇಲಿಯಾ ಓಪನ್ ಚಾಂಪಿಯನ್‌ ವಿಕ್ಟೋರಿಯಾ ಅಜರೆಂಕಾ 5–7, 4–6ರಿಂದ ಅಮೆರಿಕದ ಜೆಸ್ಸಿಕಾ ಪೆಗುಲಾ ಎದುರು ಸೋತರು. ಪಂದ್ಯದಲ್ಲಿ ಅಜರೆಂಕಾ ಉಸಿರಾಟದ ಸಮಸ್ಯೆಯಿಂದ ಬಳಲಿದರು.

ಸುಮಿತ್ ನಗಾಲ್ ಪರಾಭವ: ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಸುಮಿತ್ ನಗಾಲ್‌ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಅವರು 2–6, 5–7, 3–6ರಿಂದ ಲಿಥುವೇನಿಯಾದ ರಿಕಾರ್ಡಸ್‌ ಬೆರಂಕಿಸ್ ಎದುರು ಎಡವಿದರು. ಎರಡು ತಾಸು 10 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಪಂದ್ಯದ ಎರಡನೇ ಗೇಮ್‌ನಲ್ಲಿ ಮಾತ್ರ ನಗಾಲ್ ಸ್ವಲ್ಪ ಪ್ರತಿರೋಧ ತೋರಿದರು.ಉಳಿದಂತೆ ರಕಾರ್ಡಸ್ ಪಾರಮ್ಯ ಮೆರೆದರು.

ಸದ್ಯ ಡಬಲ್ಸ್ ವಿಭಾಗದಲ್ಲಿ ಆಡಲಿರುವ ರೋಹನ್ ಬೋಪ‍ಣ್ಣ ದಿವಿಜ್ ಶರಣ್ ಮತ್ತು ಅಂಕಿತಾ ರೈನಾ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು