ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದಲೇ ಟೆನಿಸ್‌ ಆಡ್ತಾರೆ ಘಟಾನುಘಟಿಗಳು!

ಆನ್‌ಲೈನ್‌ ಟೂರ್ನಿ ನಡೆಸಲು ಮುಂದಾದ ಮ್ಯಾಡ್ರಿಡ್‌ ಓಪನ್‌ ಸಂಘಟಕರು
Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮುಂಬೈ: ಶರವೇಗದ ಸರ್ವ್‌ ಹಾಗೂ ಬಲಿಷ್ಠ ರಿಟರ್ನ್‌ಗಳ ಮೂಲಕ ಮೈದಾನದಲ್ಲಿ ಮಿಂಚು ಹರಿಸುತ್ತಿದ್ದ ಟೆನಿಸ್‌ ಆಟಗಾರರು ಈಗ ಮತ್ತೆ ರ‍್ಯಾಕೆಟ್‌ ಹಿಡಿಯಲಿದ್ದಾರೆ.

ಕೊರೊನಾ ವೈರಾಣುವಿನ ಭೀತಿಯಿಂದ ಸ್ವಯಂ ಪ್ರತ್ಯೇಕ ವಾಸದ ಮೊರೆ ಹೋಗಿರುವ ಘಟಾನುಘಟಿ ಕ್ರೀಡಾಪಟುಗಳು ಮನೆಯಿಂದಲೇ ಟೆನಿಸ್‌ ಪಂದ್ಯಗಳನ್ನು ಆಡಿ ₹1.22 ಕೋಟಿ ಬಹುಮಾನ ಜೇಬಿಗಿಳಿಸಲಿದ್ದಾರೆ!

ಕೋವಿಡ್‌ನಿಂದಾಗಿ ಟೆನಿಸ್‌ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇದರಿಂದ ಕೆಳ ಹಂತದ ಕ್ರೀಡಾಪಟುಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇವರಿಗೆ ನೆರವಾಗಲು ಮ್ಯಾಡ್ರಿಡ್‌ ಓಪನ್‌ ಟೂರ್ನಿಯ ಸಂಘಟಕರು ಆನ್‌ಲೈನ್ ಟೆನಿಸ್‌ ಟೂರ್ನಿ ಆಯೋಜಿಸಲು ನಿರ್ಧರಿಸಿದ್ದಾರೆ.

₹62.59 ಕೋಟಿ ಬಹುಮಾನ ಮೊತ್ತದ ಮ್ಯಾಡ್ರಿಡ್‌ ಓಪನ್‌ ಮಾಸ್ಟರ್ಸ್‌ ಟೂರ್ನಿಯು ಮೇ ತಿಂಗಳಿನಲ್ಲಿ ನಡೆಯಬೇಕಿತ್ತು. ಕೊರೊನಾ ಸೋಂಕಿನ ಬಿಕ್ಕಟ್ಟಿನಿಂದಾಗಿ ಇದನ್ನು ರದ್ದು ಮಾಡಲಾಗಿತ್ತು.

‘ಟೂರ್ನಿಗಳು ರದ್ದಾಗಿರುವುದರಿಂದ ಕೆಳ ಹಂತದ ಕ್ರೀಡಾಪಟುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವು ಒದಗಿಸುವುದು ನಮ್ಮ ಕರ್ತವ್ಯ. ಹೀಗಾಗಿ ಏಪ್ರಿಲ್‌ 27ರಿಂದ 30ರವರೆಗೆ ಮ್ಯೂಚುವಾ ಮ್ಯಾಡ್ರಿಡ್‌ ಓಪನ್‌ ಆನ್‌ಲೈನ್‌ ಟೆನಿಸ್‌ ಟೂರ್ನಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಎಟಿಪಿ ಟೂರ್‌, ಪ್ರಕಟಣೆಯಲ್ಲಿ ಹೇಳಿದೆ.

‘ಟೂರ್ನಿಯಲ್ಲಿ ತಲಾ 16 ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ ತಲಾ ₹1.22 ಕೋಟಿ ಬಹುಮಾನ ಸಿಗಲಿದೆ. ಈ ಮೊತ್ತದ ಪೈಕಿ ಎಷ್ಟು ದೇಣಿಗೆ ನೀಡಬೇಕು (ಕೆಳ ಹಂತದ ಆಟಗಾರರಿಗೆ) ಎಂಬುದನ್ನು ವಿಜೇತರೇ ನಿರ್ಧರಿಸಲಿದ್ದಾರೆ’ ಎಂದು ಮ್ಯಾಡ್ರಿಡ್‌ ಓಪನ್‌ ನಿರ್ದೇಶಕ ಫೆಲಿಸಿಯಾನೊ ಲೊಪೆಜ್‌, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕ್ರೀಡಾಪಟುಗಳು ಮನೆಯಿಂದಲೇ ಆಟ ಆಡಲಿದ್ದಾರೆ. ಟೂರ್ನಿಯಲ್ಲಿ ಪಾಲ್ಗೊಳ್ಳುವವರ ಹೆಸರನ್ನು ಶೀಘ್ರವೇ ಬಹಿರಂಗಪಡಿಸುತ್ತೇವೆ. ಕೇವಲ ಮನರಂಜನೆಯೇ ಟೂರ್ನಿಯ ಉದ್ದೇಶವಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವುದೂ ನಮ್ಮ ಗುರಿ’ ಎಂದಿದ್ದಾರೆ.

‘ಮುಂದಿನ ದಿನಗಳಲ್ಲಿ ಸಹಾಯಾರ್ಥ ಆನ್‌ಲೈನ್‌ ಟೆನಿಸ್‌ ಪಂದ್ಯಗಳನ್ನು ಆಯೋಜಿಸುವ ಮೂಲಕ ದೇಣಿಗೆ ಸಂಗ್ರಹಿಸುವ ಆಲೋಚನೆಯೂ ಇದೆ’ ಎಂದು ಡಬ್ಲ್ಯುಟಿಎ ಸಿಇಒ ಸ್ಟೀವ್‌ ಸಿಮನ್ಸ್‌ ಹೇಳಿದ್ದಾರೆ.

ಕ್ರೀಡಾ ಲೋಕದ ಮೇಲೂ ಕೊರೊನಾ ಕಾರ್ಮೋಡ ಕವಿದಿರುವುದರಿಂದ ಲಾ ಲಿಗಾ ಫುಟ್‌ಬಾಲ್‌ ಟೂರ್ನಿ ಹಾಗೂ ಫಾರ್ಮುಲಾ ಒನ್‌ ಮೋಟರ್‌ ರೇಸ್‌ನ ಆಯೋಜಕರು ಇತ್ತೀಚೆಗೆ ಆನ್‌ಲೈನ್‌ ಟೂರ್ನಿ ಮತ್ತು ರೇಸ್‌ಗಳನ್ನು ನಡೆಸಿ ಯಶಸ್ವಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT