ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಗಾ ಸ್ವಾಟೆಕ್‌ಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ

Last Updated 10 ಅಕ್ಟೋಬರ್ 2020, 18:29 IST
ಅಕ್ಷರ ಗಾತ್ರ

ಪ್ಯಾರಿಸ್: ವರ್ಷದ ಎರಡನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದ ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ ಅಮೋಘ ಆಟವಾಡಿದ ಪೋಲೆಂಡ್‌ನ ಐಕಾ ಸ್ವಾಟೆಕ್ ಅವರು ಫ್ರೆಂಚ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ 19 ವರ್ಷದ ಐಗಾ 6–4, 6–1ರಲ್ಲಿ ಸೋಫಿಯಾ ಅವರನ್ನು ಮಣಿಸಿದರು. ಈ ಮೂಲಕ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಸಂಭ್ರಮದ ಹೊಳೆಯಲ್ಲಿ ಮಿಂದರು.

ಶ್ರೇಯಾಂಕ ರಹಿತ, ವಿಶ್ವ ಕ್ರಮಾಂಕದಲ್ಲಿ 54ನೇ ಸ್ಥಾನದಲ್ಲಿರುವ ಸ್ವಾಟೆಕ್ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಪೋಲೆಂಡ್‌ನ ಮೊದಲ ಟೆನಿಸ್ ಪಟು ಎನಿಸಿಕೊಂಡರು.

ವರ್ಷಾರಂಭದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಸೋಫಿಯಾ ಶನಿವಾರ ಮೊದಲ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದ್ದರು. ಎರಡನೇ ಸೆಟ್‌ನ ಮೊದಲ ಗೇಮ್‌ ಗೆದ್ದು ಭರವಸೆ ಮೂಡಿಸಿದ್ದರು. ಆದರೆ ಕೊನೆಯ ಆರು ಗೇಮ್‌ಗಳನ್ನು ತಮ್ಮದಾಗಿಸಿಕೊಂಡ ಸ್ವಾಟೆಕ್, ಮ್ಯಾಚ್‌ ಪಾಯಿಂಟ್ ಗಳಿಸುತ್ತಿದ್ದಂತೆ ಬಲಗೈಯನ್ನು ಬಾಯಿ ಮೇಲಿರಿಸಿ ಜೋರಾಗಿ ಸದ್ದು ಮಾಡಿದರು; ತಲೆಯನ್ನು ಅತ್ತಿತ್ತ ಅಲ್ಲಾಡಿಸಿ ಸಂತಸ ವ್ಯಕ್ತಪಡಿಸಿದರು.

’ಅತ್ಯಂತ ರೋಮಾಂಚಕ ಕ್ಷಣ ಇದು. ಎರಡು ವರ್ಷಗಳ ಹಿಂದೆ ಜೂನಿಯರ್ ಗ್ರ್ಯಾನ್‌ಸ್ಲಾಂ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿದ್ದೆ. ಈಗ ಇಲ್ಲಿದ್ದೇನೆ, ಫ್ರೆಂಚ್ ಓಪನ್ ಟೂರ್ನಿಯ ಚಾಂಪಿಯನ್ ಆಗಿದ್ದೇನೆ’ ಎಂದು ಅವರು ಹೇಳಿದರು.

ಚಾಂಪಿಯನ್ ಆಗುವುದರೊಂದಿಗೆ ಐಗಾ ಸ್ವಾಟೆಕ್ ಕೆಲವು ಮೈಲುಗಲ್ಲುಗಳನ್ನೂ ಸ್ಥಾಪಿಸಿದರು. ಫ್ರೆಂಚ್ ಓಪನ್ ಟೂರ್ನಿಯ ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದ ಹದಿಹರೆಯದ ಎರಡನೇ ಆಟಗಾರ್ತಿಯಾಗಿದ್ದಾರೆ. 1997ರಲ್ಲಿ ಇವಾ ಮಜೋಳಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಜಸ್ಟಿನ್ ಹೆನಿನ್ ನಂತರ ಒಂದು ಸೆಟ್ ಕೂಡ ಬಿಟ್ಟುಕೊಡದೆ ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆದ ಮೊದಲ ಆಟಗಾರ್ತಿ ಸ್ವಾಟೆಕ್. 2007ರಲ್ಲಿ ಹೆನಿನ್ ಈ ಸಾಧನೆ ಮಾಡಿದ್ದರು. ಸ್ವಾಟೆಕ್ ಪ್ರಶಸ್ತಿಯ ಹಾದಿಯಲ್ಲಿ 2018ರ ಚಾಂಪಿಯನ್ ಸಿಮೋನಾ ಹಲೆಪ್‌ ಮತ್ತು 2019ರ ರನ್ನರ್ ಅಪ್ ಮರ್ಕೆಟಾ ವೊಂಡೊರೊಸೊವಾ ಎದುರು ಗೆದ್ದಿದ್ದರು. ಇಬ್ಬರನ್ನೂ 6–1, 6–2ರಲ್ಲಿ ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT