ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನ ಪೋರಿ ಎಮಾ ರಡುಕಾನು ಟೆನಿಸ್‌ನ ಯುವರಾಣಿ

ಅಮೆರಿಕ ಓಪನ್: ಲೇಲಾ ಮಣಿಸಿ ದಾಖಲೆ ಬರೆದ ಎಮಾ ರಡುಕಾನು
Last Updated 12 ಸೆಪ್ಟೆಂಬರ್ 2021, 17:42 IST
ಅಕ್ಷರ ಗಾತ್ರ

ಲಂಡನ್/ನ್ಯೂಯಾರ್ಕ್ (ಎಎಫ್‌ಪಿ/ರಾಯಿಟರ್ಸ್‌): ಬ್ರಿಟನ್‌ನಾದ್ಯಂತ ಭಾನುವಾರ ಖುಷಿಯ ಅಲೆ. 18ರ ಹರೆಯದ ಎಮಾ ರಡುಕಾನು ಅವರು ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಪ್ರಶಸ್ತಿ ಗೆದ್ದು ದಾಖಲೆ ಬರೆದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯ ಚುಕ್ಕಾಣಿ ಹಿಡಿಯಲು ರಾಣಿ, ಎರಡನೇ ಎಲಿಜಬೆತ್ ಅವರೇ ಮುಂದಾಗಿದ್ದರು.

ನ್ಯೂಯಾರ್ಕ್‌ನಲ್ಲಿ ಶನಿವಾರ ರಾತ್ರಿ ನಡೆದ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಎಮಾ ರಡುಕಾನು ತಮಗಿಂತ ಒಂದು ವರ್ಷ ದೊಡ್ಡವರಾದ ಕೆನಡಾದ ಲೇಲಾ ಫರ್ನಾಂಡಸ್ ಅವರನ್ನು 6–4, 6–3ರಲ್ಲಿ ಮಣಿಸಿದ್ದರು. ಈ ಮೂಲಕ ಇತಿಹಾಸ ಬರೆದಿದ್ದರು.

1977ರ ವಿಂಬಲ್ಡನ್‌ ಟೂರ್ನಿಯ ಚಾಂಪಿಯನ್ ಆದ ವರ್ಜೀನಿಯಾ ವೇಡ್ ಅವರ ನಂತರ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಪ್ರಶಸ್ತಿ ಗಳಿಸಿದ ಬ್ರಿಟನ್‌ನ ಮೊದಲ ಮಹಿಳೆ ರಡುಕಾನು. ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಅರ್ಹತಾ ಸುತ್ತಿನಲ್ಲಿ ಆಡಿ ಪ್ರಶಸ್ತಿ ಗಳಿಸಿದ ಮೊದಲ ಟೆನಿಸ್ ಪಟು ಎಂಬ ಹೆಗ್ಗಳಿಕೆಯೂ ರಡುಕಾನು ಅವರದಾಯಿತು.

ಬ್ರಿಟನ್‌ನ ಪತ್ರಿಕೆಗಳ ಮುಖಪುಟಗಳಲ್ಲಿ ಭಾನುವಾರ ರಡುಕಾನು ಅವರ ಚಿತ್ರಗಳೇ ರಾರಾಜಿಸಿದವು. ಮ್ಯಾಂಚೆಸ್ಟರ್ ಯುನೈಟೆಡ್ ಪರ ಎರಡು ಗೋಲುಗಳನ್ನು ಗಳಿಸಿದ ಯುವೆಂಟಸ್ ಮಾಜಿ ಆಟಗಾರ ಕ್ರಿಸ್ಟಿಯಾನೊ ಅವರನ್ನು ಹಿಂದಿಕ್ಕಿ ರಡುಕಾನು ಮುಖಪುಟಗಳಲ್ಲಿ ಸ್ಥಾನ ಗಳಿಸಿದ್ದರು.

ಪತ್ರಿಕೆಗಳಲ್ಲಿ ವೈವಿಧ್ಯಮಯ ಶೀರ್ಷಿಕೆಗಳು ಕೂಡ ಗಮನ ಸೆಳೆದವು. ಸಾಮಾಜಿಕ ತಾಣಗಳಲ್ಲಿ ರಡುಕಾನು ಸಂಚಲನ ಮೂಡಿಸಿದ್ದಾರೆ. ವಿವಿಧ ದೇಶಗಳ ಹೆಸರಾಂತ ಟೆನಿಸ್ ಪಟುಗಳು ಕೂಡ ರಡುಕಾನು ಅವರನ್ನು ಅಭಿನಂದಿಸಿದ್ದಾರೆ.

‘ಇಷ್ಟು ಸಣ್ಣ ವಯಸ್ಸಿನಲ್ಲಿ ಇಂಥ ಸಾಧನೆ ಮಾಡಿದ್ದು ನಿಮ್ಮ ಕಠಿಣ ಪರಿಶ್ರಮ ಮತ್ತು ಅರ್ಪಣಾ ಭಾವಕ್ಕೆ ಸಂದ ಫಲ. ನಿಮಗೆ ನನ್ನ ಅಭಿನಂದನೆಗಳು’ ಎಂದು ರಾಣಿ ಎಲಿಜಬೆತ್ ಹೇಳಿದ್ದಾರೆ.

ಪ್ರಧಾನಿ ಬೋರಿಸ್ ಜಾನ್ಸನ್ ‘ಎಂಥ ಅಮೋಘ ಪಂದ್ಯ...ಎಮಾ ನಿಮಗೆ ಅಭಿನಂದನೆಯ ಮಾಲೆಯನ್ನು ಅರ್ಪಿಸುತ್ತಿದ್ದೇನೆ. ದಿಟ್ಟ ಆಟದ ಮೂಲಕ ಪ್ರಸಸ್ತಿ ಗೆದ್ದುಕೊಂಡಿದ್ದೀರಾ. ಆ ಮೂಲಕ ನಮಗೆಲ್ಲ ಹೆಮ್ಮೆ ತಂದಿದ್ದೀರಾ’ ಎಂದು ಟ್ವೀಟ್ ಮಾಡಿದ್ದಾರೆ.

ಉದ್ವೇಗದಿಂದ ಶಾಂತಚಿತ್ತದತ್ತ...

ರಡುಕಾನು, ಜುಲೈನಲ್ಲಿ ನಡೆದ ವಿಂಬಲ್ಡನ್ ಟೂರ್ನಿಯಲ್ಲೂ ಪಾಲ್ಗೊಂಡಿದ್ದರು. ಆದರೆ ಉದ್ವೇಗವನ್ನು ತಡೆಯಲಾರದೆ ನಾಲ್ಕನೇ ಸುತ್ತಿನ ಅರ್ಧದಲ್ಲೇ ನಿವೃತ್ತಿ ಘೋಷಿಸಿ ಹೊರನಡೆದಿದ್ದರು. ಆದರೆ ಅಮೆರಿಕ ಓಪನ್‌ನ ಆರಂಭದಿಂದಲೇ ಶಾಂತಚಿತ್ತದಿಂದ ಆಡಿ ಪ್ರಬಲ ಎದುರಾಳಿಗಳನ್ನು ಮಣಿಸಿದ್ದರು.

ರಡುಕಾನು ಜನಿಸಿದ್ದು ಕೆನಡಾದಲ್ಲಿ. ಅವರ ತಂದೆ ರೊಮೇನಿಯಾ ಪ್ರಜೆ ಮತ್ತು ತಾಯಿ ಚೀನಾದವರು. ರಡುಕಾನು ಅವರಿಗೆ ಎರಡು ವರ್ಷ ಪ್ರಾಯವಾಗಿದ್ದ ಸಂದರ್ಭದಲ್ಲಿ ಪಾಲಕರು ಇಂಗ್ಲೆಂಡ್‌ಗೆ ತೆರಳಿದ್ದರು. ದಕ್ಷಿಣ ಲಂಡನ್‌ನ ಹೊರವಲಯದಲ್ಲಿ ವಾಸವಾಗಿದ್ದರು. ಚೀನಾದ ಪತ್ರಿಕೆಗಳಲ್ಲೂ ರಡುಕಾನು ಸಾಧನೆಯನ್ನು ಕೊಂಡಾಡಿ ಸುದ್ದಿಗಳು ಪ್ರಕಟವಾಗಿವೆ. ಸಣ್ಣ ವಯಸ್ಸಿನಲ್ಲಿ ಚೀನಾಗೆ ಭೇಟಿ ನೀಡಿದ್ದ ಚಿತ್ರಗಳು ಪತ್ರಿಕೆಗಳಲ್ಲಿ ರಾರಾಜಿಸಿವೆ.

ಅಮೆರಿಕ ಓಪನ್ ಟೆನಿಸ್‌ ಟೂರ್ನಿಗೆ ಬಣ್ಣ ತುಂಬಿದ ಯುವ ತಾರೆಯರು

ಫಿಟ್‌ನೆಸ್‌ ಸಮಸ್ಯೆಯಿಂದಾಗಿ ಸೆರೆನಾ ವಿಲಿಯಮ್ಸ್ ದೂರ ಸರಿದಾಗ ಮತ್ತು ಮೂರನೇ ಸುತ್ತಿನಲ್ಲಿ ನವೊಮಿ ಒಸಾಕ ಹಾಗೂ ಆ್ಯಶ್ಲಿ ಬಾರ್ಟಿ ಹೊರಬಿದ್ದಾಗ ಈ ಬಾರಿಯ ಟೂರ್ನಿ ಮೇಲೆ ಟೆನಿಸ್ ಪ್ರಿಯರು ಅಸಕ್ತಿಯನ್ನೇ ಕಳೆದುಕೊಂಡಿದ್ದರು. ಆದರೆ ಯುವ ತಾರೆಯರಾದ ಎಮಾ ರಡುಕಾನು ಮತ್ತು ಲೆಯ್ಲಾ ಫರ್ನಾಂಡಸ್ ಆರಂಭದಿಂದಲೇ ಗಮನಾರ್ಹ ಆಟವಾಡುತ್ತ ಟೂರ್ನಿಗೆ ಬಣ್ಣ ತುಂಬಿದರು.

2002ರಲ್ಲಿ ಎರಡು ತಿಂಗಳ ಅಂತರದಲ್ಲಿ ಜನಿಸಿದ ಲೆಯ್ಲಾ ಮತ್ತು ಎಮಾ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದರು. ಫೈನಲ್ ಪಂದ್ಯ ವೀಕ್ಷಿಸಲು ಆರ್ಥರ್ ಆ್ಯಶೆ ಕ್ರೀಡಾಂಗಣದಲ್ಲಿ 23,000 ಪ್ರೇಕ್ಷಕರು ತುಂಬಿದ್ದರು. ಅದಕ್ಕಿಂತ ಎಷ್ಟೋ ಪಟ್ಟು ಕ್ರೀಡಾಪ್ರಿಯರು ಯುವ ಆಟಗಾರ್ತಿಯರ ಹಣಾಹಣಿಯಲ್ಲಿ ಜಯಿಸುವವರು ಯಾರು ಎಂಬ ಕುತೂಹಲದಿಂದ ಜಗತ್ತಿನಾದ್ಯಂತ ಪಂದ್ಯ ವೀಕ್ಷಿಸುತ್ತಿದ್ದರು.

ಈ ತಿಂಗಳಲ್ಲಿ 40ನೇ ವಯಸ್ಸಿಗೆ ಕಾಲಿಡಲಿರುವ ಸೆರೆನಾ ವಿಲಿಯಮ್ಸ್ ಎರಡು ದಶಕಗಳಿಂದ ಅಮೆರಿಕ ಓಪನ್‌ ಟೂರ್ನಿಯಲ್ಲಿ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರು ಕಣಕ್ಕೆ ಇಳಿಯುವುದಿಲ್ಲ ಎಂದು ಘೋಷಿಸಿದಾಗ ಪ್ರೇಕ್ಷಕರು ನಿರಾಸೆಗೆ ಒಳಗಾಗಿದ್ದರು.

ಆದರೆ ಎರಡು ಬಾರಿ ಅಮೆರಿಕ ಓಪನ್‌ ಚಾಂಪಿಯನ್ ಆಗಿದ್ದ ನವೊಮಿ ಒಸಾಕ ಅವರನ್ನು ಲೆಯ್ಲಾ ಮೂರನೇ ಸುತ್ತಿನಲ್ಲಿ ಮಣಿಸಿದ್ದರು. 2019ರ ಅಮೆರಿಕ ಓಪನ್ ಚಾಂಪಿಯನ್‌ ಬಿಯಾಂಕ ಆ್ಯಂಡ್ರುಸ್ಕು ಮತ್ತು 2020ರ ಫ್ರೆಂಚ್ ಓಪನ್ ವಿಜೇತೆ ಇಗಾ ಸ್ವಾಟೆಕ್ ಅವರು ಚಾಂಪಿಯನ್ ಪಟ್ಟಕ್ಕೇರುವಾಗ ಅವರಿಗೆ 19 ವರ್ಷ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT