ಸೋಮವಾರ, ಜನವರಿ 24, 2022
29 °C
ನೊವಾಕ್‌ ಜೊಕೊವಿಚ್ ಇರುವ ಹೋಟೆಲ್‌ನಲ್ಲೇ ಉಳಿದುಕೊಂಡಿರುವ ಆಟಗಾರ್ತಿ

ಆಸ್ಟ್ರೇಲಿಯನ್ ಓಪನ್: ರೆನಾಟ ಒರಕೋವಗೂ ನಿರ್ಬಂಧ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಚ್‌ ಅವರನ್ನು ‘ಗೃಹಬಂಧನ’ದಲ್ಲಿರಿಸಿದ ಬೆನ್ನಲ್ಲೇ ಜೆಕ್ ಗಣರಾಜ್ಯದ ಮಹಿಳಾ ಟೆನಿಸ್ ಪಟು ರೆನಾಟ ವೊರಕೋವ ಅವರನ್ನು ಕೂಡ ಆಸ್ಟ್ರೇಲಿಯಾ ವಶಕ್ಕೆ ಪಡೆದಿರುವುದು ವರದಿಯಾಗಿದೆ. ಇದೇ 17ರಿಂದ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಬಂದಿದ್ದ ವೊರಕೋವ ಅವರನ್ನು ಶುಕ್ರವಾರ ವಶಕ್ಕೆ ಪಡೆದು ಜೊಕೊವಿಚ್‌ ಇರುವ ಹೋಟೆಲ್‌ನಲ್ಲೇ ಇರಿಸಲಾಗಿದೆ.

38 ವರ್ಷದ ಆಟಗಾರ್ತಿಯನ್ನು ಆಸ್ಟ್ರೇಲಿಯಾದ ಗಡಿ ರಕ್ಷಣಾ ಪಡೆಯ ಅಧಿಕಾರಿಗಳು ವಶಕ್ಕೆ ಪಡೆದು ಮೆಲ್ಬರ್ನ್‌ನ ಪಾರ್ಕ್ ಹೋಟೆಲ್ ಕಟ್ಟಡದೊಳಗೆ ಕರೆದುಕೊಂಡು ಹೋಗಿರುವ ಚಿತ್ರಗಳು ಮತ್ತು ವಿಡಿಯೊಗಳು ಬಹಿರಂಗವಾಗಿವೆ. ಅವರು ಕೂಡ ಲಸಿಕೆ ಹಾಕಿಸಿಕೊಳ್ಳದೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದ್ದು ತವರಿಗೆ ಮರಳುವಂತೆ ಸೂಚಿಸಲಾಗಿದೆ. ಅವರು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಗೆ ಪ್ರವೇಶಿಸಿದ್ದರು. 

ನೊವಾಕ್‌ಗೆ ‘ಫ್ರೆಂಚ್‌’ನಲ್ಲಿ ಅವಕಾಶ

ಫ್ರೆಂಚ್ ಓಪನ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್‌ ಆಡಲು ಅಡ್ಡಿ ಇಲ್ಲ ಎಂದು ಫ್ರಾನ್ಸ್‌ನ ಕ್ರೀಡಾ ಸಚಿವ ರೊಕ್ಸಾನ ಮರಾಸಿನೊ ತಿಳಿಸಿದ್ದಾರೆ. ಲಸಿಕೆ ನಿಯಮ ಉಲ್ಲಂಘಿಸಿದ್ದ ಕಾರಣ ಜೊಕೊವಿಚ್ ಅವರ ವಿಸಾ ತಡೆಹಿಡಿದಿರುವ ಆಸ್ಟ್ರೇಲಿಯಾದ ಅಧಿಕಾರಿಗಳು ಹೋಟೆಲ್ ಕೊಠಡಿಯಲ್ಲಿ ಇರಿಸಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇಲ್ಲ.    

‘ಆಯೋಜಕರು ಕೋವಿಡ್‌–19ರ ಹಿನ್ನೆಲೆಯಲ್ಲಿ ಕೆಲವು ಆರೋಗ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಆದರೂ ನೊವಾಕ್ ಜೊಕೊವಿಚ್ ಅವರಂಥ ಶ್ರೇಷ್ಠ ಆಟಗಾರರ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಆಸ್ಟ್ರೇಲಿಯಾದಲ್ಲಿ ಇರುವಂಥ ನಿರ್ಬಂಧಗಳು ಫ್ರಾನ್ಸ್‌ನಲ್ಲಿ ಇಲ್ಲ’ ಎಂದು ಸಚಿವರು ತಿಳಿಸಿದ್ದಾರೆ.

ಆಟಗಾರರ ಮೇಲಿನ ನಿಷೇಧ ತೆರವು

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಕೆಟ್ ಆಟಗಾರರ ಮೇಲೆ ಹೇರಿದ್ದ ನಿಷೇಧವನ್ನು ಶ್ರೀಲಂಕಾ ಶುಕ್ರವಾರ ವಾಪಸ್ ತೆಗೆದುಕೊಂಡಿದೆ. ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ನಿಯಮ ಉಲ್ಲಂಘಿಸಿದ್ದ ಉಪನಾಯಕ ಕುಶಾಲ್ ಮೆಂಡಿಸ್‌, ಆರಂಭಿಕ ಬ್ಯಾಟರ್‌ ಧನುಷ್ಕ ಗುಣತಿಲಕ ಹಾಗೂ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿತ್ತು. ಇದೀಗ ಆರೇ ತಿಂಗಳಲ್ಲಿ ಅದನ್ನು ತೆರವುಗೊಳಿಸಲಾಗಿದೆ. ಜಿಂಬಾಬ್ವೆ ಎದುರಿನ ಏಕದಿನ ಸರಣಿಗಾಗಿ ತಂಡದ ಆಯ್ಕೆಗೆ ಈ ಮೂವರು ಲಭ್ಯ ಇರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು