ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್: ಸಾಕೇ‌ತ್ ಮೈನೇನಿಗೆ ವೈಲ್ಡ್ ಕಾರ್ಡ್ ಪ್ರವೇಶ

ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ: ಮೂವರ ಪರಿಗಣನೆ
Last Updated 3 ಫೆಬ್ರುವರಿ 2022, 13:18 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಸಾಕೇ‌ತ್ ಮೈನೇನಿ ಅವರಿಗೆ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ.

ಇದೇ ಏಳರಂದು ಆರಂಭವಾಗಲಿರುವ ಟೂರ್ನಿಯ ಮುಖ್ಯ ಸುತ್ತಿಗೆ ಮೂರು ವೈಲ್ಡ್ ಕಾರ್ಡ್ ಪ್ರವೇಶಗಳನ್ನು ನೀಡಲಾಗಿದೆ. ಉಳಿದೆರಡು ವೈಲ್ಡ್ ಕಾರ್ಡ್‌ಗಳ ವಿವರಗಳನ್ನು ಶುಕ್ರವಾರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ನ 2018ರ ಆವೃತ್ತಿಯಲ್ಲೂ ಸಾಕೇತ್ ಅವರು ವೈಲ್ಡ್ ಕಾರ್ಡ್ ಪ್ರವೇಶ ಪಡೆದುಕೊಂಡಿದ್ದರು. ಆ ವರ್ಷ ಫೈನಲ್‌ ಪ್ರವೇಶಿಸಿದ್ದರು. ಪ್ರಜ್ಞೇಶ್ ಗುಣೇಶ್ವರನ್ ಎದುರು ಸೋತು ರನ್ನರ್ ಅಪ್ ಆಗಿದ್ದರು.

‘ಎರಡು ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚು ಟೂರ್ನಿಗಳು ನಡೆಯಲಿಲ್ಲ. ಹೀಗಾಗಿ ಈ ಅವಧಿ ಇಲ್ಲಿನ ಟೆನಿಸ್ ಪಟುಗಳಿಗೆ ಸವಾಲಿನದ್ದಾಗಿತ್ತು. ಪ್ರತಿಕೂಲ ಸನ್ನಿವೇಶದಲ್ಲೂ ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆಯವರು ಅನೇಕ ಟೂರ್ನಿಗಳನ್ನು ಆಯೋಜಿಸಿರುವುದು ವೈಯಕ್ತಿಕವಾಗಿ ನನಗೆ ಖುಷಿ ತಂದಿದೆ. ಭಾರತದಲ್ಲಿ ಯಾವುದೇ ಟೂರ್ನಿ ನಡೆದರೂ ನನ್ನಂಥ ಅನೇಕ ಆಟಗಾರರಿಗೆ ಸಂಬಂಧಿಸಿ ಬೋನಸ್‌ ಇದ್ದಂತೆ’ ಎಂದು ಸಾಕೇತ್ ಹೇಳಿದರು.

ಅವರು ಸದ್ಯ ಪುಣೆಯಲ್ಲಿ ಮಹಾರಾಷ್ಟ್ರ ಓಪನ್ ಎಟಿಪಿ 250 ಟೂರ್ನಿಯಲ್ಲಿ ಆಡುತ್ತಿದ್ದಾರೆ.

‘ಮುಖ್ಯ ಸುತ್ತಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡುವಾಗ ನನ್ನ ಹೆಸರು ಪರಿಗಣಿಸಿದ್ದಕ್ಕೆ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಲು ಇಷ್ಟಪಡುತ್ತೇನೆ. ಬೆಂಗಳೂರಿನಲ್ಲಿ ಅನೇಕ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದೇನೆ. ವೃತ್ತಿಬದುಕಿನಲ್ಲಿ ಕೆಲವು ಉತ್ತಮ ಫಲಿತಾಂಶಗಳನ್ನೂ ಕಂಡಿದ್ದೇನೆ. ಹೀಗಾಗಿ ಬೆಂಗಳೂರು ಓಪನ್‌ ಟೂರ್ನಿಯಲ್ಲಿ ಆಡಲು ಉತ್ಸುಕನಾಗಿದ್ದೇನೆ. ವೈಲ್ಡ್ ಕಾರ್ಡ್ ಪ್ರವೇಶದ ಅನುಕೂಲವನ್ನು ಪಡೆದುಕೊಂಡು ಉತ್ತಮ ಸಾಮರ್ಥ್ಯ ತೋರಲು ಪ್ರಯತ್ನಿಸುವೆ’ ಎಂದು 34 ವರ್ಷದ ಸಾಕೇತ್ ಭರವಸೆಯಿಂದ ನುಡಿದರು.

2016ರಲ್ಲಿ ಜೀವನಶ್ರೇಷ್ಠ 113ನೇ ರ‍್ಯಾಂಕಿಂಗ್ ಗಳಿಸಿಕೊಂಡಿದ್ದ ಸಾಕೇತ್‌ ಈಗ 561ನೇ ಸ್ಥಾನದಲ್ಲಿದ್ದಾರೆ. ಚಾಲೆಂಜರ್ ಟೂರ್ನಿಗಳಲ್ಲಿ ಎರಡು ಸಿಂಗಲ್ಸ್ ಮತ್ತು ಆರು ಡಬಲ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

‘ಡೇವಿಸ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಕೇತ್‌ 2018ರಲ್ಲಿ ಫೈನಲ್ ಪ್ರವೇಶಿಸಿದ್ದರು. ದೇಶದ ಯುವ ಟೆನಿಸ್ ಪಟುಗಳಿಗೆ ಆದರ್ಶವಾಗಿರುವ ಅವರು ಈ ಬಾರಿ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಇದೆ’ ಎಂದು ಟೂರ್ನಿಯ ನಿರ್ದೇಶಕ ಸುನಿಲ್ ಯಜಮಾನ್ ಹೇಳಿದರು.

ರಾಜ್ಯ ಪ್ರವಾಸೋದ್ಯಮ ಇಲಾಖೆ, ಎಸಿಟಿ ಫೈಬರ್‌ನೆಟ್ ಮತ್ತು ಜೆಎಸ್‌ಡಬ್ಯು ಮುಖ್ಯ ಪ್ರಾಯೋಜಕತ್ವವನ್ನು ಹೊಂದಿರುವ ಟೂರ್ನಿಗೆ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಮತ್ತು ರಾಮ್‌ಕುಮಾರ್ ರಾಮನಾಥನ್ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಅರ್ಹತಾ ಸುತ್ತಿನ ಪಂದ್ಯಗಳು ಆರರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT