ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಸೆಮಿಫೈನಲ್‌ಗೆ ಟಿಯಾಫೊ, ಟೇಲರ್‌

ಅರಿನಾ ಸಬಲೆಂಕಾ, ಎಮ್ಮಾ ನವೊರೊ ಮುನ್ನಡೆ
Published 5 ಸೆಪ್ಟೆಂಬರ್ 2024, 4:36 IST
Last Updated 5 ಸೆಪ್ಟೆಂಬರ್ 2024, 4:36 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಆತಿಥೇಯ ದೇಶದ ಫ್ರಾನ್ಸಿಸ್ ಟಿಯಾಫೊ ಮತ್ತು ಟೇಲರ್ ಫ್ರಿಟ್ಜ್ ಅವರು ಮಂಗಳವಾರ ತಡರಾತ್ರಿ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದರು.

ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ಈ ಇಬ್ಬರು ‘ಸ್ನೇಹಿತರು’ ಮುಖಾಮುಖಿಯಾಗಲಿದ್ದು, ಈ ಮೂಲಕ ಸ್ವದೇಶದ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ 18 ವರ್ಷಗಳ ನಂತರ ಮೊದಲ ಬಾರಿಗೆ ತವರಿನ ಆಟಗಾರನೊಬ್ಬ ಪ್ರಶಸ್ತಿ ಸುತ್ತು ಪ್ರವೇಶಿಸುವುದು ಖಾತರಿಯಾಯಿತು.

20ನೇ ಶ್ರೇಯಾಂಕದ ಟಿಯಾಫೊ ಅವರಿಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಒಂಬತ್ತನೇ ಶ್ರೇಯಾಂಕದ ಗ್ರಿಗೊರ್ ಡಿಮಿಟ್ರೋವ್ (ಬಲ್ಗೇರಿಯಾ) ಎದುರಾಳಿಯಾಗಿದ್ದರು. ಅಮೆರಿಕದ ಆಟಗಾರ 6-3, 6-7 (5), 6-3, 4-1ರಿಂದ ಮುನ್ನೆಡೆಯಲ್ಲಿದ್ದಾಗ ಗ್ರಿಗೊರ್ ಗಾಯಗೊಂಡು ಹಿಂದೆ ಸರಿದರು. ಹೀಗಾಗಿ, 26 ವರ್ಷ ವಯಸ್ಸಿನ ಟಿಯಾಫೊ ಅವರು ಮೂರು ವರ್ಷಗಳಲ್ಲಿ ಎರಡನೇ ಬಾರಿ ನಾಲ್ಕರ ಘಟ್ಟಕ್ಕೆ ಮುನ್ನಡೆದರು.

ಜ್ವೆರೇವ್‌ಗೆ ಆಘಾತ: ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ 26 ವರ್ಷ ವಯಸ್ಸಿನ ಫ್ರಿಟ್ಜ್‌ 7-6 (2), 3-6, 6-4, 7-6 (3) ರಿಂದ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೇವ್‌ಗೆ ಆಘಾತ ನೀಡಿದರು. ಈ ಗೆಲುವಿನೊಂದಿಗೆ 12ನೇ ಶ್ರೇಯಾಂಕದ ಆಟಗಾರ ಫ್ರಿಟ್ಜ್‌ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಮೊದಲ ಬಾರಿ ಸೆಮಿಫೈನಲ್‌ ಹಂತ ತಲುಪಿದರು.

ಕ್ಯಾಲಿಫೋರ್ನಿಯಾದ 26 ವರ್ಷ ವಯಸ್ಸಿನ ಫ್ರಿಟ್ಜ್ ಅವರು ಟಿಯಾಫೊ ವಿರುದ್ಧ 6–1ರ ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ.

2003ರಲ್ಲಿ ಆ್ಯಂಡಿ ರಾಡಿಕ್‌ ಅವರು ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ನಂತರ ತವರಿನ ಯಾವುದೇ ಆಟಗಾರ ಇಲ್ಲಿ ಚಾಂಪಿಯನ್‌ ಆಗಿಲ್ಲ. ರಾಡಿಕ್ ಅವರೇ ಫೈನಲ್‌ ತಲುಪಿದ ಅಮೆರಿಕದ ಕೊನೆಯ ಆಟಗಾರನಾಗಿದ್ದಾರೆ. ಅವರು 2006ರಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ವಿರುದ್ಧ ಸೋತಿದ್ದರು.

ಇತರ ಕ್ವಾರ್ಟರ್‌ ಫೈನಲ್‌ಗಳಲ್ಲಿ ಅಗ್ರ ಶ್ರೇಯಾಂಕದ ಯಾನಿಕ್‌ ಸಿನ್ನರ್‌ ಮತ್ತು ಐದನೇ ಶ್ರೇಯಾಂಕದ ಡೇನಿಯಲ್‌ ಮೆಡ್ವೆಡೇವ್‌; ಹತ್ತನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್ ಮತ್ತು 25ನೇ ಶ್ರೇಯಾಂಕದ ಜ್ಯಾಕ್ ಡ್ರೇಪರ್ ಮುಖಾಮುಖಿಯಾಗುತ್ತಿದ್ದಾರೆ.

ಸಬಲೆಂಕಾ ಸೆಮಿಗೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಅರಿನಾ ಸಬಲೆಂಕಾ ಮತ್ತು 13ನೇ ಶ್ರೇಯಾಂಕದ ಎಮ್ಮಾ ನವೊರೊ ಸೆಮಿಫೈನಲ್‌ಗೆ ಮುನ್ನಡೆದರು.

ಬೆಲಾರಸ್‌ನ 26 ವರ್ಷ ವಯಸ್ಸಿನ ಸಬಲೆಂಕಾ 6–1, 6–2ರಿಂದ ಒಲಿಂಪಿಕ್‌ ಚಾಂಪಿಯನ್‌, ಏಳನೇ ಶ್ರೇಯಾಂಕದ ಝೆಂಗ್ ಕಿನ್ವೆನ್ (ಚೀನಾ) ಅವರನ್ನು ನಿರಾಯಾಸವಾಗಿ ಹಿಮ್ಮೆಟ್ಟಿಸಿದರು. ಅವರು ಮುಂದಿನ ಸುತ್ತಿನಲ್ಲಿ ಅಮೆರಿಕದ ನವೊರೊ ಅವರನ್ನು ಎದುರಿಸಲಿದ್ದಾರೆ.

ನವಾರೊ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ 6-2, 7-5ರಿಂದ 26ನೇ ಶ್ರೇಯಾಂಕದ ಪೌಲಾ ಬಡೋಸಾ (ಸ್ಪೇನ್‌) ಅವರನ್ನು ಸೋಲಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.  

ಬೋಪಣ್ಣ– ಅಲ್ದಿಲಾ ಜೋಡಿಗೆ ಸೋಲು

ಭಾರತದ ಅನುಭವಿ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಇಂಡೊನೇಷ್ಯಾದ ಅಲ್ದಿಲಾ ಸುಟ್ಜಿಯಾದಿ ಅವರನ್ನು ಒಳಗೊಂಡ ಮಿಶ್ರ ಡಬಲ್ಸ್ ತಂಡ ಅಮೆರಿಕ ಓಪನ್‌ ಸೆಮಿಫೈನಲ್‌ ನಲ್ಲಿ ಹೊರಬಿತ್ತು.

ಅಮೆರಿಕದ ಡೊನಾಲ್ಡ್‌ ಯಂಗ್‌ ಮತ್ತು ಟೇಲರ್‌ ಟೌನ್ಸೆಂಡ್‌ ಜೋಡಿ ಮಂಗಳವಾರ ಒಂದೂವರೆ ಗಂಟೆ ನಡೆದ ಪಂದ್ಯದಲ್ಲಿ ಬೋಪಣ್ಣ– ಅಲ್ದಿಲಾ ಜೋಡಿಯನ್ನು 6–3, 6–4 ರಿಂದ ಸೋಲಿಸಿ ಫೈನಲ್ ತಲುಪಿತು.

44 ವರ್ಷದ ಬೋಪಣ್ಣ ಈಗಾಗಲೇ ಪುರುಷರ ಡಬಲ್ಸ್‌ನಲ್ಲಿ ಸೋತಿದ್ದಾರೆ. ಡಬಲ್ಸ್‌ನಲ್ಲಿ ಆಡಿದ್ದ ಭಾರತದ ಇತರ ಆಟಗಾರರೂ ಯುಕಿ ಭಾಂಬ್ರಿ, ಶ್ರೀರಾಮ್‌ ಬಾಲಾಜಿ ಕೂಡ ವಿವಿಧ ಹಂತಗಳಲ್ಲಿ ಸೋಲನುಭವಿಸಿದ್ದಾರೆ. ಸಿಂಗಲ್ಸ್‌ನಲ್ಲಿ ಸುಮಿತ್‌ ನಗಾಲ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT