ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಓಪನ್ ಟೆನಿಸ್ ಟೂರ್ನಿ: ನೊವಾಕ್ ಜೊಕೊವಿಚ್‌ ಕನಸು ಭಗ್ನ

ಅಮೆರಿಕ ಓಪನ್‌: ಸರ್ಬಿಯಾ ಆಟಗಾರನಿಗೆ ಸೋಲುಣಿಸಿದ ಪಾಪಿರಿನ್‌
Published 31 ಆಗಸ್ಟ್ 2024, 22:30 IST
Last Updated 31 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ನೊವಾಕ್ ಜೊಕೊವಿಚ್‌ ಕನಸು ಶುಕ್ರವಾರ ರಾತ್ರಿ ನುಚ್ಚುನೂರಾಯಿತು. ಎರಡನೇ ಶ್ರೇಯಾಂಕದ ಜೊಕೊವಿಚ್‌, ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ 28ನೇ ಶ್ರೇಯಾಂಕದ ಅಲೆಕ್ಸೈ ಪಾಪಿರಿನ್ ಎದುರು ಸೋಲನುಭವಿಸಿದರು.

ಫ್ಲಷಿಂಗ್‌ ಮಿಡೊದಲ್ಲಿ ಮೂರನೇ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್ (ಸ್ಪೇನ್‌) ಅವರು ಬೊಟಿಕ್‌ ಫನ್‌ಡ ಶಾನ್‌ಸೋಪ್ ಅವರೆದುರು ನೇರ ಸೆಟ್‌ಗಳ ಆಘಾತ ಅನುಭವಿಸಿದ ಮಾರನೇ ದಿನವೇ, ಇನ್ನೊಬ್ಬ ಸೂಪರ್‌ಸ್ಟಾರ್, ಹಾಲಿ ಚಾಂಪಿಯನ್ ಜೊಕೊವಿಚ್ ಕೂಡ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

25 ವರ್ಷ ವಯಸ್ಸಿನ ಪಾಪಿರಿನ್ 6–4, 6–4, 2–6, 6–4 ರಿಂದ ಜಯಗಳಿಸಿದರು. ಆಸ್ಟ್ರೇಲಿಯಾದ ಈ ಆಟಗಾರ, 18 ವರ್ಷಗಳಲ್ಲೇ ಮೊದಲ ಬಾರಿ ಜೊಕೊವಿಚ್‌ ಅವರ ಅತಿ ವೇಗದ ನಿರ್ಗಮನಕ್ಕೆ ಕಾರಣರಾದರು. 2017ರಲ್ಲಿ ಸರ್ಬಿಯಾದ ಮಹಾನ್ ಆಟಗಾರ ಎರಡನೇ ಸುತ್ತಿನಲ್ಲಿ ಹೊರಬಿ ದ್ದಿದ್ದರು. ವಿಶೇಷವೆಂದರೆ ಆ ವರ್ಷವೂ ಜೊಕೊವಿಚ್‌ ಒಂದೂ ಗ್ರ್ಯಾನ್‌ಸ್ಲಾಮ್‌ ಗೆಲ್ಲಲು ಆಗಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಚಿನ್ನ ಗೆದ್ದುದೊಂದೇ ಅವರ ಪಾಲಿಗೆ ಈ ವರ್ಷದ ಮಹತ್ವದ ಪ್ರಶಸ್ತಿಯೆನಿಸಿತು.

37 ವರ್ಷ ವಯಸ್ಸಿನ ಜೊಕೊವಿಚ್ ಅವರು ಈ ಹಿಂದೆ ಮೂರು ಬಾರಿ– ಈ ವರ್ಷದ ಆಸ್ಟ್ರೇಲಿಯಾ ಓಪನ್ ಮತ್ತು ವಿಂಬಲ್ಡನ್‌ ಸೇರಿ– ಪಾಪಿರಿನ್ ಅವರನ್ನು ಮಣಿಸಿದ್ದರು.

ಆದರೆ ಶುಕ್ರವಾರದ ಪಂದ್ಯದಲ್ಲಿ ಅವರು ಸರ್ವ್‌ಗಳಲ್ಲೂ ವಿಫಲರಾದರು. ಟೆನಿಸ್‌ ಜೀವನದಲ್ಲೇ ಅತಿ ಹೆಚ್ಚು 14 ಡಬಲ್‌ ಫಾಲ್ಟ್‌ಗಳನ್ನು ಮಾಡಿದರು.

ಮೊದಲ ಎರಡು ಸುತ್ತಿನ ಪಂದ್ಯ ಸೇರಿಸಿದರೆ ಅವರಿಂದ 32 ಡಬಲ್‌ ಫಾಲ್ಟ್‌ಗಳಾಗಿವೆ.ಜೊತೆಗೆ 49 ತಪ್ಪುಗಳಿಗೆ ಕಾರಣರಾದರು.

‘ಇದು ನನ್ನ ಪಾಲಿನ ಅತ್ಯಂತ ಕೆಟ್ಟ ಆಟ’ ಎಂದು ಜೊಕೊವಿಚ್‌ ಪ್ರತಿಕ್ರಿಯಿಸಿದರು. ‘ಲಯ, ಸ್ಥಿರತೆ, ಸರ್ವ್‌, ಹೊಡೆತಗಳು– ಎಲ್ಲವೂ ಕೈಕೊಟ್ಟವು’ ಎಂದು ಬೇಸರ ವ್ಯಕ್ತಪಡಿಸಿದರು.

ಪಾಪಿರಿನ್ ಮುಂದಿನ ಸುತ್ತಿನಲ್ಲಿ ಫ್ರಾನ್ಸೆಸ್‌ ಟಿಯಾಫೊ ಅವರನ್ನು ಎದುರಿಸಲಿದ್ದಾರೆ. ಅಮೆರಿಕದ ಟಿಯಾಫೊ, ಆರ್ಥರ್‌ ಆ್ಯಷ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 4–6, 7–5, 6–7 (5–7), 6–4, 6–3 ರಿಂದ ಸ್ವದೇಶದ ಬೆನ್‌ ಶೆಲ್ಟನ್‌ ಅವರನ್ನು ಮಣಿಸಿದರು.

ರುಬ್ಲೆವ್‌ ಮುನ್ನಡೆ: ವಿಶ್ವದ ಆರನೇ ಕ್ರಮಾಂಕದ ಆಟಗಾರ ಆ್ಯಂಡ್ರಿ ರುಬ್ಲೆವ್‌ ಮೂರನೇ ಸುತ್ತಿನಲ್ಲಿ ಝೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು 6–3, 7–5, 6–4 ರಿಂದ ಸೋಲಿಸಿದರು. ಎರಡು ಸೆಟ್‌ಗಳ ಹಿನ್ನಡೆಯಿಂದ ಚೇತರಿಸಿಕೊಂಡ ಎಂಟನೇ ಶ್ರೇಯಾಂಕದ ನಾರ್ವೆಯ ಆಟಗಾರ ಕ್ಯಾಸ್ಪರ್‌ ರುಡ್‌, 19 ವರ್ಷ ವಯಸ್ಸಿನ ಶಾಂಗ್‌ ಜುನ್‌ಚೆಂಗ್‌ (ಚೀನಾ) ಅವರನ್ನು 6–7 (1–7), 3–6, 6–0, 6–3, 6–1 ರಿಂದ ಸೋಲಿಸಿದರು.

ಪಾವೊಲಿನಿ ಮುನ್ನಡೆ: ಜಾಸ್ಮಿನ್ ಪಾವೊಲಿನಿ ಮಹಿಳೆಯರ ಸಿಂಗಲ್ಸ್‌ ನಾಲ್ಕನೇ ಸುತ್ತು ಪ್ರವೇಶಿಸಿದರು. ಶನಿವಾರ ನಡೆದ ಪಂದ್ಯದಲ್ಲಿ 30ನೇ ಶ್ರೇಯಾಂಕದ ಯೂಲಿಯಾ ಪುತಿಂಟ್ಸೆವಾ ವಿರುದ್ಧ 6-3, 6-4ರಿಂದ ಜಯ ಗಳಿಸಿದರು.

ಅಮೆರಿಕದ ಜೆಸ್ಸಿಕಾ ಪೆಗುಲಾ ಅವರು ಸ್ಪೇನ್‌ನ ಜೆಸ್ಸಿಕಾ ಬೌಜಾಸ್ ಮನೈರೊ ಅವರನ್ನು 6-3, 6-3 ಸೆಟ್‌ಗಳಿಂದ ಸೋಲಿಸಿದರು. ಬೌಜಾಸ್ ಮನೈರೊ ವಿಂಬಲ್ಡನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ ಅವರನ್ನು ಮಣಿಸುವ ಮೂಲಕ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT