ಶನಿವಾರ, ಜುಲೈ 2, 2022
25 °C

ಬೆಂಗಳೂರು ಓಪನ್-2 ಎಟಿಪಿ ಚಾಲೆಂಜರ್‌: ಡಬಲ್ಸ್‌ನಲ್ಲಿ ಪ್ರಜ್ವಲ್–ನಿಕಿ ಕ್ವಾರ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ ಮತ್ತು ಮ್ಯಾಕ್ಸ್‌ ಪರ್ಸಲ್ ಅವರು ಬೆಂಗಳೂರು ಓಪನ್–2 ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಅಮೋಘ ಆಟವಾಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಅಲೆಕ್ಸಾಂಡರ್ ಮತ್ತು ಆರನೇ ಶ್ರೇಯಾಂಕದ ಮ್ಯಾಕ್ಸ್ ಪರ್ಸಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಬ್ರಿಟನ್‌ನ ಜೇ ಕ್ಲಾರ್ಕ್ ಎದುರಿನ ಪಂದ್ಯದಲ್ಲಿ ಅಲೆಕ್ಸಾಂಡರ್ 6-1, 6-3ರಲ್ಲಿ ಜಯ ಗಳಿಸಿದರೆ ತಮ್ಮದೇ ದೇಶದ ಮಾರ್ಕ್ ಪೊಲ್ಮನ್ಸ್‌ ಎದುರಿನ ಹಣಾಹಣಿಯಲ್ಲಿ ಮ್ಯಾಕ್ಸ್‌ 7-6 (7), 4-6, 6-2ರಲ್ಲಿ ಗೆಲುವು ಸಾಧಿಸಿದರು.  

ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ಮ್ಯಾಕ್ಸ್ ಇಲ್ಲಿ ಮೊದಲ ಸುತ್ತಿನಲ್ಲಿ ಜೇಸನ್ ಕುಬ್ಲೆರ್ ಎದುರು ಗೆದ್ದು ಗಮನ ಸೆಳೆದಿದ್ದರು. ಬುಧವಾರ ಪೊಲ್ಮನ್ಸ್ ಅವರಿಂದ ತೀವ್ರ ಪೈಪೋಟಿ ಎದುರಿಸಿದ ಅವರು ಪ್ರತಿ ಹಂತದಲ್ಲೂ ಪಟ್ಟುಬಿಡದೆ ಆಟವಾಡಿ ಗೆಲುವಿನತ್ತ ಹೆಜ್ಜೆ ಹಾಕಿದರು. 

ಮೊದಲ ಸೆಟ್‌ನಲ್ಲಿ 2–4ರ ಹಿನ್ನಡೆಯಿಂದ ಚೇತರಿಸಿಕೊಂಡ ಅವರು ನಂತರ ಸತತ ನಾಲ್ಕು ಗೇಮ್‌ಗಳನ್ನು ಗೆದ್ದುಕೊಂಡರು. ಆದರೆ ಅಂತಿಮ ಹಂತದಲ್ಲಿ ತಿರುಗೇಟು ನೀಡಿದ ಎದುರಾಳಿ ಆಟಗಾರ ಅವರ ಸರ್ವ್ ಬ್ರೇಕ್ ಮಾಡಿ ಸೆಟ್‌ ಅನ್ನು ಟೈಬ್ರೇಕರ್‌ನತ್ತ ಕೊಂಡೊಯ್ದರು. ಎರಡನೇ ಸೆಟ್‌ನಲ್ಲಿ ಪೊಲ್ಮನ್ಸ್ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಭರ್ಜರಿ ಹೊಡೆತಗಳ ಮೂಲಕ ಮ್ಯಾಕ್ಸ್‌ ಮಿಂಚಿದರು. ಆರಂಭದಲ್ಲಿ 3–0ಯಿಂದ ಮುನ್ನಡೆದಿದ್ದಾಗ ಪೊಲ್ಮನ್ಸ್ ಎರಡು ಗೇಮ್‌ಗಳನ್ನು ಗೆದ್ದು ಆತಂಕ ಸೃಷ್ಟಿಸಿದರು. ಆದರೆ ಮ್ಯಾಕ್ಸ್‌ ಎದೆಗುಂದದೆ ಆಡಿ ಪಂದ್ಯ ಗೆದ್ದುಕೊಂಡರು.  

ವುಕಿಚ್ ಪಂದ್ಯದುದ್ದಕ್ಕೂ ಆಧಿಪತ್ಯ ಸ್ಥಾಪಿಸಿದರು. ಮೊದಲ ಸೆಟ್‌ನ ಆರಂಭದಲ್ಲಿ 5–1ರ ಮುನ್ನಡೆ ಸಾಧಿಸಿದ ಅವರು ನಂತರ ಯಾವ ಹಂತದಲ್ಲೂ ಹಿಂತಿರುಗಿ ನೋಡಲಿಲ್ಲ. 

ಪ್ರಜ್ವಲ್ ದೇವ್‌–ನಿಕಿ ಮುನ್ನಡೆ

ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದ ಭಾರತದ ಎಸ್‌.ಡಿ.ಪ್ರಜ್ವಲ್ ದೇವ್ ಮತ್ತು ನಿಕಿ ಪೂಣಚ್ಚ ತಮಗಿಂತಲೂ ಹೆಚ್ಚಿನ ರ‍್ಯಾಂಕ್ ಹೊಂದಿರುವ ಕೆನಡಾದ ಸ್ವೀವನ್‌ ಡೀಜ್ ಮತ್ತು ಜಪಾನ್‌ನ ರಿಯೊ ನೊಗುಚಿ ವಿರುದ್ಧ 6-2, 6-4ರಲ್ಲಿ ಗೆದ್ದು ಡಬಲ್ಸ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಅರ್ಜುನ್ ಖಾಡೆ ಮತ್ತು ಆಸ್ಟ್ರೇಲಿಯಾದ ಅಲೆಕ್ಸಾಂಡರ್ ಎರ್ಲರ್ ಜೋಡಿ ರಷ್ಯಾದ ಬೋಗ್ದನ್ ಬಾರ್ಬೊವ್ ಮತ್ತು ಜೆಕ್ ಗಣರಾಜ್ಯದ ಡೊಮೊನಿಕ್ ಪಾಲನ್ ವಿರುದ್ಧ 6-0, 6-3ರಲ್ಲಿ ಗೆದ್ದರು. ಸಾಕೇತ್ ಮೈನೇನಿ ಮತ್ತು ರಾಮ್‌ಕುಮಾರ್ ರಾಮನಾಥನ್ ಭಾರತದವರೇ ಆದ ಯೂಕಿ ಭಾಂಬ್ರಿ ದಿವಿಜ್ ಶರಣ್ ವಿರುದ್ಧ  6-1, 7-5ರಲ್ಲಿ ಗೆಲುವು ಸಾಧಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು