ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಪ್ರಶಸ್ತಿ ಸುತ್ತಿಗೆ ಜೊಕೊವಿಚ್‌

ಡಬಲ್ಸ್‌ನಲ್ಲಿ ಫೈನಲ್‌ಗೆ ಸಾನಿಯಾ–ಹಿಂಗಿಸ್‌
Last Updated 30 ಜನವರಿ 2020, 18:10 IST
ಅಕ್ಷರ ಗಾತ್ರ

ಮಿಯಾಮಿ (ರಾಯಿಟರ್ಸ್‌/ ಎಎಫ್‌ಪಿ): ಅಮೋಘ ಆಟ ಮುಂದುವರಿಸಿರುವ ವಿಶ್ವದ ಅಗ್ರಮಾನ್ಯ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಶುಕ್ರವಾರ ನಡೆದ ಪುರುಷರ ವಿಭಾಗದ ಸೆಮಿಫೈನಲ್‌ ಹೋರಾಟದಲ್ಲಿ ಎಂಟು ಬಾರಿ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಜೊಕೊವಿಚ್‌ 7–6, 6–2ರಲ್ಲಿ ಅಮೆರಿಕದ ಜಾನ್‌ ಇಸ್ನರ್‌ ಅವರನ್ನು ಪರಾಭವಗೊಳಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಹೊಂದಿರುವ ಜೊಕೊವಿಚ್‌ಗೆ ಮೊದಲ ಸೆಟ್‌ನ ಆರಂಭದಿಂದಲೇ ಇಸ್ನರ್‌ ಪ್ರಬಲ ಪೈಪೋಟಿ ಒಡ್ಡಿದರು. ಸೊಗಸಾದ ಸರ್ವ್‌ಗಳ ಮೂಲಕ ಜೊಕೊವಿಚ್‌ ಅವರನ್ನು ತಬ್ಬಿಬ್ಬುಗೊಳಿಸಿದ ಇಸ್ನರ್‌ ಆರಂಭದಲ್ಲೇ ಪಾಯಿಂಟ್‌ ಗಳಿಸಿ ಮುನ್ನಡೆ ಗಳಿಸಿದರು. ಬಳಿಕ ಜೊಕೊವಿಚ್‌ ಲಯ ಕಂಡುಕೊಂಡರು. ಅವರ ರ್‍ಯಾಕೆಟ್‌ನಿಂದ ಹೊರಹೊಮ್ಮಿದ ಬಲಿಷ್ಠ ಸ್ಮ್ಯಾಷ್‌ ಮತ್ತು ರಿಟರ್ನ್‌ಗಳಿಗೆ ಇಸ್ನರ್‌ ನಿರುತ್ತರರಾದರು.

ಮೊದಲ ಗೇಮ್‌ನ ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಜೊಕೊವಿಚ್‌ ಎರಡನೇ ಗೇಮ್‌ನ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಿದರು. ಸತತವಾಗಿ ಪಾಯಿಂಟ್ಸ್‌ ಕಲೆಹಾಕುತ್ತಾ ಸಾಗಿದ ಅವರು 10 ಏಸ್‌ಗಳನ್ನು ಸಿಡಿಸಿದರು. ಈ ಮೂಲಕ ಪಂದ್ಯ ಗೆದ್ದು ಸಂಭ್ರಮಿಸಿದರು.

ಫೈನಲ್‌ಗೆ ಮರ್ರೆ: ಇನ್ನೊಂದು ಸೆಮಿಫೈನಲ್‌ ಹೋರಾಟದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ 6–4, 6–4ರ ನೇರ ಸೆಟ್‌ಗಳಿಂದ ಜೆಕ್‌ ಗಣರಾಜ್ಯದ ಥಾಮಸ್‌ ಬರ್ಡಿಕ್‌ ವಿರುದ್ಧ ಜಯಭೇರಿ ಮೊಳಗಿಸಿದರು.

ಫೈನಲ್‌ಗೆ ಸಾನಿಯಾ ಜೋಡಿ: ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೆಮಿಫೈನಲ್‌ ಹಣಾಹಣಿಯಲ್ಲಿ ಭಾರತ–ಸ್ವಿಸ್‌ ಜೋಡಿ 6–2, 6–4ರಲ್ಲಿ ಇಲ್ಲಿ ಏಳನೇ ಶ್ರೇಯಾಂಕ ಹೊಂದಿರುವ ಟೈಮಿಯಾ ಬಾಬೊಸ್‌ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಚ್‌ ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಸಾನಿಯಾ ಮತ್ತು ಹಿಂಗಿಸ್‌ ಜೋಡಿ ಹೊಂದಾಣಿಕೆಯ ಆಟ ಆಡುವ ಮೂಲಕ ನಿರಂತರವಾಗಿ ಪಾಯಿಂಟ್‌ ಕಲೆಹಾಕುತ್ತಾ ಸಾಗಿತು. ಇದರಿಂದಾಗಿ ಎದುರಾಳಿ ಜೋಡಿ ಸಹಜವಾಗಿಯೇ ಒತ್ತಡಕ್ಕೆ ಒಳಗಾಯಿತು.
ಇದನ್ನು ಅರಿತು ಇನ್ನಷ್ಟು ಚುರುಕಾಗಿ ಆಡಿದ ಭಾರತ–ಸ್ವಿಸ್‌ ಜೋಡಿ ಪಂದ್ಯ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಫೈನಲ್‌ನಲ್ಲಿ ಸಾನಿಯಾ ಮತ್ತು ಹಿಂಗಿಸ್‌ ಅವರು ಎಕ್ತರೀನಾ ಮಕರೋವಾ ಮತ್ತು ಎಲೆನಾ ವೆಸ್ನಿನಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ನಾಲ್ಕರ ಘಟ್ಟದ ಹೋರಾಟದಲ್ಲಿ ಮಕರೋವಾ ಮತ್ತು ವೆಸ್ನಿನಾ 6–4, 6–2ರಲ್ಲಿ ಆ್ಯಂಡ್ರೆಯಿ ಲಾವಕೊವಾ ಮತ್ತು ಲೂಸಿ ಹ್ರ್ಯಾಂಡೆಕಾ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT