ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟರ್‌ಬೈಕ್‌ ರೇಸಿಂಗ್‌ನಲ್ಲಿ ಬತ್ತದ ‘ಉಲ್ಲಾಸ’

Last Updated 2 ಏಪ್ರಿಲ್ 2021, 15:09 IST
ಅಕ್ಷರ ಗಾತ್ರ

ಸ್ಪರ್ಧೆಯೊಂದರಲ್ಲಿ ಅಪಘಾತಕ್ಕೀಡಾಗಿ ವೃತ್ತಿಜೀವನ ಮುಗಿದುಹೋಗುವ ಆತಂಕದ ಕಾರ್ಮೋಡ ಕವಿದಾಗ ಛಲ ಕಳೆದುಕೊಳ್ಳಲಿಲ್ಲ. ಆರು ತಿಂಗಳ ಸುದೀರ್ಘ ಬಿಡುವು ಅವರ ಆಸಕ್ತಿ, ಆತ್ಮವಿಶ್ವಾಸವನ್ನು ಕುಗ್ಗಿಸಲಿಲ್ಲ. ಇಂತಹ ಸಕಾರಾತ್ಮಕ ಚಿಂತನೆಗಳೊಂದಿಗೆ ಮೋಟರ್‌ಬೈಕ್ ರೇಸಿಂಗ್‌ನಲ್ಲಿ ಮುನ್ನುಗ್ಗುತ್ತಿರುವ ಯುವ ಪ್ರತಿಭೆ, ಬೆಂಗಳೂರಿನ ಉಲ್ಲಾಸ್ ಸಂತೃಪ್ತ್‌ ನಂದ. ಪದಾರ್ಪಣೆ ಮಾಡಿದ ಎರಡು ವರ್ಷಗಳಲ್ಲಿ ನಾಲ್ಕು ಬಾರಿ ‘ಪೋಡಿಯಂ ಫಿನಿಶ್’ ಮಾಡಿರುವ ಅವರು ಅದರಲ್ಲಿ ಮೂರರಲ್ಲಿ ಅಗ್ರಸ್ಥಾನ ಗಳಿಸಿದರೆ ಒಂದರಲ್ಲಿ ರನ್ನರ್‌ಅಪ್ ಆಗಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಬೈಕ್ ರೇಸರ್‌ಗಳಲ್ಲಿ ಒಬ್ಬರಾದ ವ್ಯಾಲೆಂಟಿನೊ ರೊಸ್ಸಿ ಅವರನ್ನು ಆದರ್ಶವಾಗಿಟ್ಟುಕೊಂಡ ಉಲ್ಲಾಸ್‌ಗೆ ಬೈಕ್ ಚಾಲನೆಯೆಂದರೆ ವಿಶೇಷ ಒಲವು. ಎಸ್ಸೆಸ್ಸೆಲ್ಸಿ ಮುಗಿಸಿದ ಬಳಿಕ ಮಗನ ಆಸಕ್ತಿಯನ್ನು ಗುರುತಿಸಿದ ಅಪ್ಪ ಅರುಣ್‌, ಹೊಂಡಾ ಸಿಬಿಆರ್ 100 ಬೈಕ್ ತಂದುಕೊಟ್ಟರು. ಇದರೊಂದಿಗೆ ಅಭ್ಯಾಸ ನಡೆಸಿದ ಉಲ್ಲಾಸ್‌, ಹಲವು ಬಾರಿ ಬಿದ್ದು ಗಾಯ ಮಾಡಿಕೊಂಡಿದ್ದುಂಟು. ಆದರೆ ಅದೇ ವೇಳೆಗೆ ಅವರ ಚಾಲನಾ ಕೌಶಲಗಳು ವೃದ್ಧಿಸತೊಡಗಿದವು.

ಪ್ರತಿ ಭಾನುವಾರ ಬೆಳಗಿನ ಜಾವ 200 ಕಿ.ಮೀ. ಬೈಕ್ ಚಾಲನೆ ಮೂಲಕ ತಾಲೀಮು ನಡೆಸತೊಡಗಿದ ಉಲ್ಲಾಸ್ ಹಂತಹಂತವಾಗಿ ಪ್ರಗತಿ ಸಾಧಿಸತೊಡಗಿದರು. ಉಲ್ಲಾಸ್‌ಗೆ ಪರಿಣತ ಕೋಚ್‌ ಅವರಿಂದ ತರಬೇತಿ ಕೊಡಿಸುವಂತೆ ಹಲವರ ಸಲಹೆಯನ್ನು ಪರಿಗಣಿಸಿದ ತಂದೆ, 2018ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸ್ಪರ್ಧೆಯೊಂದಕ್ಕೆ ಕರೆದೊಯ್ದರು. ಇಲ್ಲಿ ಪರಿಚಯವಾದವರೇ ಅನುಭವಿ ರೇಸರ್ ರಜನಿ ಕೃಷ್ಣ. ಹಲವು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಜಯಿಸಿರುವ ರಜನಿ ಅವರು, ‘ರಜನಿ ಅಕಾಡೆಮಿ ಆಫ್‌ ಕಾಂಪಿಟೇಟಿವ್ ರೇಸಿಂಗ್‌’ (ಆರ್‌ಎಸಿಆರ್‌) ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಉಲ್ಲಾಸ್ ಅವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡ ರಜನಿ, ಚಾಲನಾ ಕೌಶಲಗಳ ಬಗ್ಗೆ ಹೆಚ್ಚು ಅರಿತುಕೊಳ್ಳಲು 300 ಸಿಸಿ ವಿಭಾಗದಲ್ಲಿ ತಾಲೀಮು ನಡೆಸುವಂತೆ ಸೂಚಿಸಿದರು. ಅವರನ್ನು ಮಲೇಷ್ಯಾಕ್ಕೂ ಕರೆದೊಯ್ದು ಪ್ರತಿಭೆಗೆ ನೀರೆರೆದರು.

ಬೈಕ್‌ ರೇಸ್‌ ಮೇಲಿನ ತೀವ್ರ ವ್ಯಾಮೋಹವು 22 ವರ್ಷದ ಉಲ್ಲಾಸ್‌ ಅವರನ್ನು ಡಿಪ್ಲೊಮಾ ಪದವಿ ತೊರೆಯುವಂತೆ ಮಾಡಿತು.

ಅಪಘಾತ: 2018ರಲ್ಲಿ ಚೆನ್ನೈನಲ್ಲಿ ನಡೆದ ಒನ್ ಮೇಕ್ ಯಮಹಾ ರೇಸ್‌ನಲ್ಲಿ ಬೈಕ್ ಅಪಘಾತಕ್ಕೀಡಾದಾಗ ತೀವ್ರ ಗಾಯಗೊಂಡ ಉಲ್ಲಾಸ್ ಆರು ತಿಂಗಳು ವಿಶ್ರಾಂತಿಗೆ ಮೊರೆಹೋಗಬೇಕಾಯಿತು. ಫಿಜಿಯೊಥೆರಪಿಯ ಬಳಿಕ ದೇಹದ ತೂಕ ವಿಪರೀತ ಹೆಚ್ಚಾಗಿತ್ತು. ಈ ಹಂತದಲ್ಲಿ ತೂಕ ಕಡಿಮೆಗೊಳಿಸಲೇಬೇಕಿತ್ತು. 88 ಕೆಜಿ ತೂಕವನ್ನು 56 ಕೆಜಿಗೆ ಇಳಿಸಿದ ಅವರು ಅದರಲ್ಲಿ ಯಶಸ್ಸೂ ಸಾಧಿಸಿದರು.

2019ರಲ್ಲಿ ಟಿವಿಎಸ್‌ ಒನ್ ಮೇಕ್ ಚಾಂಪಿಯನ್‌ಷಿಪ್‌ನಲ್ಲಿ ಉಲ್ಲಾಸ್‌ 200 ಸಿಸಿ ವಿಭಾಗದಲ್ಲಿ ಕಣಕ್ಕಿಳಿದರು. 2020ರಲ್ಲಿ ಮದ್ರಾಸ್‌ ಮೋಟಾರ್‌ ಸ್ಪೋರ್ಟ್ಸ್ ಕ್ಲಬ್‌ನಲ್ಲಿ (ಎಂಎಂಎಸ್‌ಸಿ) ನಡೆದ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ನ ಐದು ರೇಸ್‌ಗಳಲ್ಲಿ ವಿಜಯ ಪತಾಕೆ ಹಾರಿಸಿದರು.

‘ಇದುವರೆಗೆ ನನ್ನ ಪೋಷಕರೇ ನಾನು ಸ್ಪರ್ಧಿಸಿದ ರೇಸ್‌ಗಳ ಖರ್ಚು–ವೆಚ್ಚ ನೋಡಿಕೊಂಡಿದ್ದಾರೆ. ಸೀನಿಯರ್ ಸರ್ಕೀಟ್‌ನಲ್ಲಿ ಉತ್ತಮ ಸಾಧನೆ ತೋರುವ ಗುರಿಯಿಟ್ಟುಕೊಂಡಿದ್ದು, ಪ್ರಾಯೋಜಕರ ನಿರೀಕ್ಷೆಯಲ್ಲಿದ್ದೇನೆ. ಪ್ರಾಯೋಜಕತ್ವ ಸಿಕ್ಕರೆ ನನ್ನ ಜವಾಬ್ದಾರಿಯೂ ಹೆಚ್ಚುತ್ತದೆ. ಇನ್ನಷ್ಟು ಉತ್ತಮ ಸಾಮರ್ಥ್ಯ ತೋರಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಉಲ್ಲಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT