ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮ್ಯಾಕ್ಸ್‌ವೆಲ್ ಆಟಕ್ಕೆ ಸ್ಟ್ಯಾಂಡ್‌ಗಳಲ್ಲಿ ಫೀಲ್ಡರ್‌ಗಳಿರಬೇಕಿತ್ತು: ಟ್ರಾಟ್

Published 8 ನವೆಂಬರ್ 2023, 14:39 IST
Last Updated 8 ನವೆಂಬರ್ 2023, 14:39 IST
ಅಕ್ಷರ ಗಾತ್ರ

ಮುಂಬೈ: ‘ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಆಟ ನೋಡುತ್ತಿದ್ದಾಗ ನಮ್ಮ ತಂಡದ ಫೀಲ್ಡರ್‌ಗಳನ್ನು ಪ್ರೇಕ್ಷಕರ ಸ್ಟ್ಯಾಂಡ್‌ಗಳಲ್ಲಿ ನಿಯೋಜಿಸಬೇಕೆಂಬ ಯೋಚನೆ ಬಂದಿತ್ತು’–

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಐತಿಹಾಸಿಕ ಇನಿಂಗ್ಸ್ ಆಡಿದ್ದ  ಮ್ಯಾಕ್ಸ್‌ವೆಲ್ ಅವರ ಆಟವನ್ನು ಅಫ್ಗಾನಿಸ್ತಾನ ತಂಡದ ಮುಖ್ಯ ಕೋಚ್ ಜೊನಾಥನ್  ಟ್ರಾಟ್ ಕೊಂಡಾಡಿದ್ದು ಹೀಗೆ.

ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫ್ಗಾನಿಸ್ತಾನವು ಒಡ್ಡಿದ್ದ 292 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡವು 91 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿತ್ತು. ಆದರೆ, ತೊಡೆಯ ಸ್ನಾಯುಸೆಳೆತ, ಬೆನ್ನುನೋವು ಅನುಭವಿಸಿದರೂ ಗ್ಲೆನ್ ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 201 ರನ್‌ ಗಳಿಸಿದರು. ಅದರೊಂದಿಗೆ ತಂಡವನ್ನೂ ಜಯದತ್ತ ಮುನ್ನಡೆಸಿದರು.  ಪ್ಯಾಟ್ ಕಮಿನ್ಸ್‌ (12; 68ಎಸೆತ) ಅವರೊಂದಿಗೆ ಮುರಿಯದ ಎಂಟನೇ ವಿಕೆಟ್ ಜೊತೆಯಾಟದಲ್ಲಿ 202 ರನ್‌ ಸೇರಿಸಿದರು. ಅವರ ವೀರಾವೇಷದ ಆಟವು ಏಕದಿನ ಕ್ರಿಕೆಟ್‌ನಲ್ಲಿ ‘ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್‌’ ಆಗಿ ದಾಖಲಾಯಿತು.

‘ಮ್ಯಾಕ್ಸ್‌ವೆಲ್ ಅವರಿಗೆ ಸಂಪೂರ್ಣ ಶ್ರೇಯ ಸಲ್ಲಬೇಕು. ದ್ವಿಶತಕ ಗಳಿಸಿದ ಅವರು ಆಟದ ವೈಖರಿ ಅಭೂತಪೂರ್ವವಾಗಿತ್ತು. ಅವರು ಹೊಡೆಯುತ್ತಿದ್ದ ರೀತಿಗೆ ಚೆಂಡು ಸ್ಟ್ಯಾಂಡ್‌ಗಳಿಗೆ ಹೋಗಿ ಬೀಳುತ್ತಿತ್ತು. ಆದರೆ, ಗ್ಯಾಲರಿಗಳಲ್ಲಿ ಫೀಲ್ಡರ್‌ ನಿಯೋಜನೆ ಸಾಧ್ಯವಿಲ್ಲವಲ್ಲ’ ಎಂದು ಶ್ಲಾಘಿಸಿದರು.

‘ನಮ್ಮ ತಂಡದ ಆಟಗಾರರಿಗೆ ಈ ಪಂದ್ಯವು ಒಂದು  ಉತ್ತಮ ಪಾಠವಾಗಲಿದೆ. ಪಂದ್ಯದ ಯಾವುದೇ ಹಂತದಲ್ಲಿಯೂ ಏಕಾಗ್ರತೆಯನ್ನು ಬಿಡಬಾರದು. 19 ಓವರ್‌ಗಳಲ್ಲಿಯೇ ಏಳು ವಿಕೆಟ್ ಹೋದ ಮೇಲೆಯೂ ಮುಂದಿನ ವಿಕೆಟ್‌ ಗಳಿಕೆಗೆ ಸಂಪೂರ್ಣ ಸಾಮರ್ಥ್ಯ ವಿನಿಯೋಗಿಸಬೇಕಿತ್ತು. ಕೇವಲ 70 ಓವರ್‌ಗಳಿಗೆ ಮಾತ್ರವಲ್ಲ ಪಂದ್ಯದ ಒಟ್ಟು 100 ಓವರ್‌ಗಳವರೆಗೂ ಆಟದ ಮೇಲಿನ ಹಿಡಿತವನ್ನು ಕಾಪಿಟ್ಟುಕೊಳ್ಳಲು ಹೋರಾಡಬೇಕು.  ಇಂತಹ ಅನುಭವಗಳಿಂದಲೇ ಯುವ ಆಟಗಾರರು ಕಲಿಯಬೇಕು. ಇದು ಅವರನ್ನು ಭವಿಷ್ಯದಲ್ಲಿ ಗಟ್ಟಿಗೊಳಿಸುತ್ತದೆ’ ಎಂದು ಟ್ರಾಟ್ ಹೇಳಿದರು.

‘ಮ್ಯಾಕ್ಸ್‌ವೆಲ್ ಅವರಿಗೆ ಎಂತಹ ಎಸೆತ ಹಾಕಿದರೂ ಹೊಡೆಯುತ್ತಿದ್ದರು. ವೇಗಿಗಳು ಸ್ವಿಂಗ್ ಮತ್ತು ವೇಗದಲ್ಲಿ ವ್ಯತ್ಯಾಸ ಮಾಡಿ ಹಾಕುತ್ತಿದ್ದರು. ಅವರು ಅಂತಹ ಎಸೆತಗಳನ್ನು ಹೊಡೆದರು. ಸ್ಪಿನ್ನರ್‌ಗಳು ಲೆಂಗ್ತ್ ಬದಲಿಸಿ ಹಾಕಿದ ಎಸೆತಗಳನ್ನೂ ಹೊಡೆದು ಹೊರಗಟ್ಟಿದರು. ಈ ಹಂತದಲ್ಲಿ ಅವರು ಕಾಲುಗಳ ನೋವಿನಿಂದ ಬಳಲಿದ್ದರು.  ಹೆಚ್ಚು ಯಾರ್ಕರ್‌ಗಳನ್ನು ಪ್ರಯೋಗಿಸಬೇಕಿತ್ತು’ ಎಂದರು.

ಮ್ಯಾಕ್ಸ್‌ವೆಲ್ ಅವರ ಅಮೋಘ ಆಟವನ್ನು ಹಲವು ದಿಗ್ಗಜ ಕ್ರಿಕೆಟಿಗರು ಗುಣಗಾನ ಮಾಡಿದ್ದಾರೆ. ಭಾರತದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಯಜುವೇಂದ್ರ ಚಾಹಲ್, ಪಾಕಿಸ್ತಾನ ಶೋಯಬ್ ಅಖ್ತರ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌, ಇಂಗ್ಲೆಂಡ್‌ನ ಮೈಕೆಲ್ ವಾನ್, ಶ್ರೀಲಂಕಾದ ಲಸಿತ ಮಾಲಿಂಗ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾರ್ವಕಾಲೀಕ ಶ್ರೇಷ್ಠ ಇನಿಂಗ್ಸ್: ಪ್ಯಾಟ್

’ಗ್ಲೆನ್ ಮ್ಯಾಕ್ಸ್‌ವೆಲ್ ಅವರದ್ದು ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್‌’ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬಣ್ಣಿಸಿದರು.

‘ ನಾನು ಕ್ರೀಸ್‌ನಲ್ಲಿದ್ದಾಗ ತಂಡದ ಮೊತ್ತವು 200ರ ಗಡಿ ದಾಟಿದರೆ ಸಾಕು. ನಂತರ ಫಲಿತಾಂಶ ಏನೇ ಆದರೂ ನೆಟ್‌ ರನ್‌ ರೇಟ್‌ ಸುಸ್ಥಿತಿಯಲ್ಲಿರುತ್ತದೆ ಎಂದು ಎಣಿಸಿದ್ದೆ. ಆದರೆ ಸದಾ ಗೆಲುವಿಗಾಗಿ ತುಡಿಯುವ ವಿಭಿನ್ನ ವ್ಯಕ್ತಿ ಮ್ಯಾಕ್ಸ್‌ವೆಲ್. ಅವರ ಯೋಚನೆ ಮತ್ತು ಯೋಜನೆ ಬೇರೆಯೇ ಇತ್ತು. ನಾನು ಔಟಾಗದೆ ಉಳಿದುಕೊಳ್ಳಲು ಪ್ರಯತ್ನಿಸಿದೆ. ಗ್ಲೆನ್ ತಂಡವನ್ನು ಜಯದತ್ತ ತೆಗೆದುಕೊಂಡು ಹೋದರು’ ಎಂದು ಕಮಿನ್ಸ್ ಹೇಳಿದರು.

‘ಪಾದಚಲನೆಯೇ ಇಲ್ಲದೇ ನಿಂತಲ್ಲಿಯೇ ಬೌಂಡರಿ ಸಿಕ್ಸರ್ ಹೊಡೆಯುವ ಇಂತಹ ಆಟ ಮ್ಯಾಕ್ಸ್‌ವೆಲ್ ಅವರಿಂದ ಮಾತ್ರ ಸಾಧ್ಯ. ರಿವರ್ಸ್ ಸ್ವೀಪ್ ಪ್ರಯೋಗವೂ ಅಸಾಧಾರಣ’ ಎಂದು ಶ್ಲಾಘಿಸಿದರು.

ಮಾಕ್ಸ್‌ ಆಟಕ್ಕೆ ಫಿಸಿಯೊ ಜೋನ್ಸ್‌ ಕಾಣಿಕೆ

ಮೈತುಂಬಾ ನೋವಿದ್ದರೂ ಗ್ಲೆನ್ ಮ್ಯಾಕ್ಸ್‌ವೆಲ್ ವಾಂಖೆಡೆ ಕ್ರೀಡಾಂಗಣದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಲು ಕಾರಣವಾಗಿದ್ದು ಆಸ್ಟ್ರೇಲಿಯಾ ತಂಡದ ಫಿಸಿಯೊಥೆರಪಿಸ್ಟ್ ನಿಕ್ ಜೋನ್ಸ್ ಅವರಂತೆ.

ಸ್ನಾಯುಸೆಳೆತ, ಬೆನ್ನುನೋವಿನಿಂದಾಗಿ ನಿಲ್ಲಲೂ ಪರದಾಡುತ್ತಿದ್ದ ಮ್ಯಾಕ್ಸ್‌ವೆಲ್ ಒಂದು ಹಂತದಲ್ಲಿ ಗಾಯಗೊಂಡು ನಿವೃತ್ತಿ ಪಡೆಯಲು ಯೋಚಿಸಿದ್ದರು. ಪ್ಯಾಟ್ ಕಮಿನ್ಸ್ ಕೂಡ ಈ ಬಗ್ಗೆ ಏನೂ ಪ್ರತಿಕ್ರಿಯಿಸಿರಲಿಲ್ಲ.

ಆಗಾಗ ನೋವು ವಿಪರೀತವಾಗಿ ನೆಲಕ್ಕೊರಗುತ್ತಿದ್ದ ಮ್ಯಾಕ್ಸ್‌ವೆಲ್‌ಗೆ ಉಪಚಾರ ನೀಡಲು ಧಾವಿಸುತ್ತಿದ್ದ ನಿಕ್ ಜೋನ್ಸ್‌ ಮನಸ್ಸು ಮಾತ್ರ ಮ್ಯಾಕ್ಸ್‌ವೆಲ್ ಆಡಲಿ ಎನ್ನುತ್ತಿತ್ತು. ಅದಕ್ಕಾಗಿಯೇ ಕೆಲವು ಸಲಹೆಗಳನ್ನು ನೀಡಿದರು.

‘ಒಂಟಿ, ಎರಡು ಓಟಗಳನ್ನು ಹೆಚ್ಚು ತೆಗೆದುಕೊಳ್ಳಬೇಡಿ. ನಿಂತಲ್ಲಿಯೇ ಆಡಿ, ಹೊಡೆತಗಳನ್ನಷ್ಟೇ ಪ್ರಯೋಗಿಸಿ. ಅದು ತಮ್ಮಿಂದ ಸಾಧ್ಯವಿದೆ’ ಎಂದು ನಿಕ್ ಹೇಳಿದ್ದರು.

ಈ ಸಲಹೆಗಳು ಫಲ ಕೊಟ್ಟವು. ಮ್ಯಾಕ್ಸ್‌ವೆಲ್ ಖಾತೆಗೆ ದ್ವಿಶತಕ ಮತ್ತು ಆಸ್ಟ್ರೇಲಿಯಾಕ್ಕೆ ಗೆಲುವು ಒಲಿದವು.

‘ಇದೇನೂ ಹೊಸದಲ್ಲ. ಈ ರೀತಿ ಬಹಳಷ್ಟು ಆಟಗಾರರಿಗೆ ಆಗುತ್ತದೆ. ಹೆಚ್ಚು ಓಡಿದಷ್ಟು ಕ್ರ್ಯಾಂಪ್ಸ್‌ ಹೆಚ್ಚುವ ಸಂಭವವಿರುತ್ತದೆ. ದೇಹದ ಉಷ್ಣತೆ ಮತ್ತು ಹೃದಯಬಡಿತಗಳನ್ನು ಸಮತೋಲಗೊಳಿಸಿ ನಿರ್ವಹಿಸಬೇಕು’ ಎಂದು ಜೋನ್ಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT