ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

World Cup | 200 ರನ್ ಗಳಿಸಿದರೆ ಸಾಕು ಎಂದುಕೊಂಡಿದ್ದೆ: ಆಸಿಸ್ ನಾಯಕ ಕಮಿನ್ಸ್

Published 8 ನವೆಂಬರ್ 2023, 11:19 IST
Last Updated 8 ನವೆಂಬರ್ 2023, 11:19 IST
ಅಕ್ಷರ ಗಾತ್ರ

ಮುಂಬೈ: ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಅಮೋಘ ಜಯ ಗಳಿಸಿದ ಕುರಿತಂತೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಮಾತನಾಡಿದ್ದಾರೆ. ಅಫ್ಗಾನಿಸ್ತಾನ ಎದುರು ಕನಿಷ್ಠ 200 ರನ್‌ ಗಳಿಸಿ, ನೆಟ್‌ ರನ್‌ರೇಟ್‌ ಅನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದರ ಬಗ್ಗೆ ಎಂದು ಯೋಚಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಗನ್‌ ಪಡೆ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 291 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 91 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಮ್ಯಾಕ್ಸ್‌ವೆಲ್ ಮತ್ತು ಕಮಿನ್ಸ್‌ ದ್ವಿಶತಕದ ಜೊತೆಯಾಟವಾಡಿ ತಮ್ಮ ತಂಡಕ್ಕೆ ಮೂರು ವಿಕೆಟ್‌ ಅಂತರದ ಗೆಲುವು ತಂದುಕೊಟ್ಟರು.

ಮ್ಯಾಕ್ಸ್‌ವೆಲ್‌ ಕೇವಲ 128 ಎಸೆತಗಳಲ್ಲಿ ಅಜೇಯ 201 ರನ್‌ ಗಳಿಸಿ ಮಿಂಚಿದ್ದರು. ಅವರ ಆಟದ ಬಲದಿಂದ ಆಸ್ಟ್ರೇಲಿಯಾ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಕಮಿನ್ಸ್, ಮ್ಯಾಕ್ಸ್‌ವೆಲ್‌ ಅವರ ಇನಿಂಗ್ಸ್‌ ಅನ್ನು 'ಏಕದಿನ ಕ್ರಿಕೆಟ್‌ನ ಶ್ರೇಷ್ಠ ಇನಿಂಗ್ಸ್‌' ಎಂದು ಬಣ್ಣಿಸಿದ್ದಾರೆ.

'ನಾವು 200 ರನ್‌ ಆದರೂ ಗಳಿಸಿದರೆ, ಸೆಮಿಫೈನಲ್‌ ತಲುಪಲು ನಮ್ಮ ತಂಡದ ರನ್‌ರೇಟ್‌ ಸುಸ್ಥಿತಿಯಲ್ಲಿ ಉಳಿಯುತ್ತದೆ ಎಂದು ಭಾವಿಸಿದ್ದೆ. ಮ್ಯಾಕ್ಸ್‌ವೆಲ್‌ 100 ರನ್ ಗಳಿಸಿದಾಗ, ನಾವು ಇನ್ನು 120 ರನ್‌ ಗಳಿಸಬೇಕು ಅಷ್ಟೇ ಎಂದುಕೊಂಡೆ. ಆದರೆ, ಆಗಲೂ ಇದು ಅಸಾಧ್ಯವೆಂದೇ ಅನಿಸಿತ್ತು' ಎಂದು ಅವರು ಹೇಳಿದ್ದಾರೆ.

'ನನ್ನ ಪ್ರಕಾರ ಮ್ಯಾಕ್ಸ್‌ವೆಲ್‌ ವಿಭಿನ್ನ ಆಟಗಾರ. ಆತ ಯಾವಾಗಲೂ ಗೆಲುವಿಗಾಗಿ ತುಡಿಯುತ್ತಿರುತ್ತಾನೆ ಎನಿಸುತ್ತದೆ. ನಾನು 200 ರನ್‌ ಗಳಿಸಿದರೆ ಸಾಕು ಎಂದುಕೊಳ್ಳುತ್ತಿದ್ದಾಗ, ಆತ ಗೆಲುವಿನ ಹಾದಿ ಸಿದ್ಧಪಡಿಸುತ್ತಿದ್ದ. ನಾನು ಔಟಾಗದೆ ಉಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ' ಎಂದಿದ್ದಾರೆ.

'ನಾನು ಕ್ರೀಸ್‌ಗೆ ಇಳಿದಾಗ, ನಮಗೆ ಸವಾಲಾಗಬಲ್ಲ ಅದ್ಭುತ ಸ್ಪಿನ್ನರ್‌ಗಳಿದ್ದಾರೆ. ಚೆಂಡು ಈಗಲೂ ತಿರುವು ಪಡೆದುಕೊಳ್ಳುತ್ತಿದ್ದು, ಚೆನ್ನಾಗಿ ಬೌಲಿಂಗ್‌ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆವು. ನಾನು ಕ್ರೀಸ್‌ಗೆ ಅಂಟಿಕೊಂಡು ನಿಂತರೆ, ಮ್ಯಾಕ್ಸ್‌ವೆಲ್‌ ಲೀಲಾಜಾಲವಾಗಿ ರನ್‌ ಗಳಿಸಿದ. ಸಮಯ ಕಳೆದಂತೆ ಈ ಪಿಚ್‌ನಲ್ಲಿ ರನ್ ಗಳಿಸುವುದು ಸುಲಭವಾಗುತ್ತದೆ ಎಂಬುದು ಗೊತ್ತಿತ್ತು' ಎಂದು ಹೇಳಿದ್ದಾರೆ.

ಕೀಲು, ಸ್ನಾಯು ಸೆಳೆತದ ನಡುವೆಯೂ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ ಮ್ಯಾಕ್ಸ್‌ವೆಲ್‌, ಆಗಾಗ್ಗೆ ಚಿಕಿತ್ಸೆ ಪಡೆಯುತ್ತಲೇ ಇನಿಂಗ್ಸ್‌ ಕಟ್ಟಿದರು. ಮ್ಯಾಕ್ಸ್‌ವೆಲ್‌ ಮತ್ತು ಕಮಿನ್ಸ್‌ ಮುರಿಯದ ಎಂಟನೇ ವಿಕೆಟ್‌ಗೆ 170 ಎಸೆತಗಳಲ್ಲಿ 202 ರನ್‌ ಸೇರಿಸಿದರು. ಇದರಲ್ಲಿ ಕಮಿನ್ಸ್‌ ಪಾಲು 12 ರನ್‌ ಮಾತ್ರ. ಆದರೆ, ಅದಕ್ಕಾಗಿ ಅವರು ವಿಕೆಟ್‌ ಒಪ್ಪಿಸದೆ 68 ಎಸೆತಗಳನ್ನು ಎದುರಿಸಿದರು.

'ಈ ಇನಿಂಗ್ಸ್‌ ಕೇವಲ ಏಕವ್ಯಕ್ತಿ ಪ್ರದರ್ಶನವಾಗಿತ್ತು. ಮ್ಯಾಕ್ಸ್‌ವೆಲ್‌, ತುಂಬಾ ಸುಲಭ ಎಂಬಂತೆ ಬ್ಯಾಟ್‌ ಬೀಸಿದರು. ನಾನು ಇನ್ನೊಂದು ತುದಿಯಲ್ಲಿ (ನಾನ್‌ಸ್ಟ್ರೈಕರ್‌ ಎಂಡ್‌ನಲ್ಲಿ) ನಿಂತೆ. ಎಲ್ಲಿಗೆ ಚೆಂಡನ್ನು ಬಾರಿಸಿ ರನ್‌ ಗಳಿಸಬೇಕು ಎಂಬುದರ ಬಗ್ಗೆ ಚಿಂತಿಸಲೇ ಇಲ್ಲ. ಆತ ಪ್ರತಿಬಾರಿಯೂ ಚೆಂಡನ್ನು ಬೌಂಡರಿಗೆ ಅಟ್ಟುತ್ತಿದ್ದ' ಎಂದು ಮ್ಯಾಕ್ಸ್‌ವೆಲ್‌ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಚ್ಚೇನು ಚಿಂತಿಸದೆ ಯೋಜನೆಯಂತೆ ಆಡಿದ್ದು, ತಮ್ಮ ತಂಡಕ್ಕೆ ಜಯ ತಂದುಕೊಟ್ಟಿತು ಎಂದಿರುವ ಪ್ಯಾಟ್‌, ಮ್ಯಾಕ್ಸ್‌ವೆಲ್‌ ಅಸಾಧಾರಣ ಆಟಗಾರ. ಇಂತಹ ಆಟ ಅವರಿಂದ ಮಾತ್ರವೇ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಪಾದ ಚಲನೆಯೇ ಇಲ್ಲದೆ ನಿಂತಲ್ಲೇ ಸಿಕ್ಸರ್‌ಗಳನ್ನು ಬಾರಿಸಿದ, ರಿವರ್ಸ್‌ ಸ್ವೀಪ್‌ ಮೂಲಕವೂ ಚೆಂಡನ್ನು ಬೌಂಡರಿಗಟ್ಟಿದ ಮ್ಯಾಕ್ಸ್‌ವೆಲ್‌ ಅಸಾಮಾನ್ಯ ಆಟಗಾರ. ಚೆಂಡನ್ನು ಮೈದಾನದ ಸುತ್ತಲೂ ಬಾರಿಸಿದ. ತುಂಬಾ ಸರಳ ಎನಿಸುಂತೆ ಬ್ಯಾಟಿಂಗ್‌ ಮಾಡಿದ. ಹಾಗೆ ಆಡುವಾಗ ಬೌಲರ್‌ಗಳಿಗೂ ಹೆಚ್ಚಿನ ಆಯ್ಕೆಗಳಿರುವುದಿಲ್ಲ' ಎಂದಿದ್ದಾರೆ.

ಸೆಮಿ ತಲುಪಿದ ಆಸ್ಟ್ರೇಲಿಯಾ
ಟೂರ್ನಿಯಲ್ಲಿ ಈವರೆಗೆ 8 ಪಂದ್ಯಗಳಲ್ಲಿ ಆಡಿರುವ ಆಸ್ಟ್ರೇಲಿಯಾ 6ರಲ್ಲಿ ಗೆದ್ದು 12 ಪಾಯಿಂಟ್‌ಗಳೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದೆ. ಕೊನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ನಾಕೌಟ್‌ಗೆ ಲಗ್ಗೆ ಇಟ್ಟಿವೆ.

ಉಳಿದ ಇನ್ನೊಂದು ಸ್ಥಾನಕ್ಕಾಗಿ, ನ್ಯೂಜಿಲೆಂಡ್‌, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಪೈಪೋಟಿ ನಡೆಸುತ್ತಿವೆ. ಎಂಟೆಂಟು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಈ ತಂಡಗಳು ತಲಾ ನಾಲ್ಕರಲ್ಲಿ ಜಯ ಸಾಧಿಸಿವೆ.

ಪಾಯಿಂಟ್‌ ಪಟ್ಟಿಯಲ್ಲಿ 1 ಹಾಗೂ 4ನೇ ಸ್ಥಾನಗಳಲ್ಲಿ ಉಳಿಯುವ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ, 2 ಹಾಗೂ 3ನೇ ಸ್ಥಾನಗಳಲ್ಲಿ ಉಳಿಯುವ ತಂಡಗಳು ಎರಡನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಪಂದ್ಯ ಗೆದ್ದ ಸಂಭ್ರಮದಲ್ಲಿ ಪ್ಯಾಟ್‌ ಕಮಿನ್ಸ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌

ಪಂದ್ಯ ಗೆದ್ದ ಸಂಭ್ರಮದಲ್ಲಿ ಪ್ಯಾಟ್‌ ಕಮಿನ್ಸ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌

ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT