ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023: ಚೇಸಿಂಗ್ ವೇಳೆ ಮೊದಲ ದ್ವಿಶತಕ; ಹಲವು ದಾಖಲೆ ಬರೆದ ಮ್ಯಾಕ್ಸ್‌ವೆಲ್

Published 8 ನವೆಂಬರ್ 2023, 2:44 IST
Last Updated 8 ನವೆಂಬರ್ 2023, 2:44 IST
ಅಕ್ಷರ ಗಾತ್ರ

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲಿಸಿದ ಅವಿಸ್ಮರಣೀಯ ದ್ವಿಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಅಫ್ಗಾನಿಸ್ತಾನ ವಿರುದ್ಧ ಮೂರು ವಿಕೆಟ್‌ಗಳ ಅಂತರದ ರೋಚಕ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಚೇಸಿಂಗ್ ವೇಳೆ ದಾಖಲಾದ ಮೊದಲ ದ್ವಿಶತಕ ಇದಾಗಿದ್ದು, ವೈಟ್ ಬಾಲ್ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಇದು ಎಂದು ಕ್ರಿಕೆಟ್ ದಿಗ್ಗಜರು ಗುಣಗಾನ ಮಾಡಿದ್ದಾರೆ.

ಬೆನ್ನು ನೋವು, ಸ್ನಾಯು ಸೆಳೆತವನ್ನು ಲೆಕ್ಕಿಸದೇ ಹೋರಾಟ ಮಾಡಿದ ಮ್ಯಾಕ್ಸ್‌ವೆಲ್, ವಾಂಖೆಡೆ ಮೈದಾನದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. ಅಲ್ಲದೆ ನಾಯಕ ಕಮಿನ್ಸ್‌ ಜತೆ ಮುರಿಯದ ಎಂಟನೇ ವಿಕೆಟ್‌ಗೆ 170 ಎಸೆತಗಳಲ್ಲಿ 202 ರನ್‌ ಸೇರಿಸಿದರು. ಈ ಪೈಕಿ ಕಮಿನ್ಸ್ 12 ರನ್‌ ಮಾತ್ರ ಗಳಿಸಿದ್ದರು.

128 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 21 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ ಅಜೇಯ 201 ರನ್ ಗಳಿಸಿದರು. ಆ ಮೂಲಕ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಈ ಕುರಿತು ಪಟ್ಟಿ ಇಲ್ಲಿದೆ.

ಸ್ನಾಯು ಸೆಳೆತಕ್ಕೊಳಗಾದ ಗ್ಲೆನ್ ಮ್ಯಾಕ್ಸ್‌ವೆಲ್

ಸ್ನಾಯು ಸೆಳೆತಕ್ಕೊಳಗಾದ ಗ್ಲೆನ್ ಮ್ಯಾಕ್ಸ್‌ವೆಲ್

(ರಾಯಿಟರ್ಸ್ ಚಿತ್ರ)

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಆಸೀಸ್ ಬ್ಯಾಟರ್...

ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ದ್ವಿಶತಕ ಗಳಿಸಿದ ಆಸ್ಟ್ರೇಲಿಯಾದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಭಾಜನರಾಗಿದ್ದಾರೆ. 2011ರಲ್ಲಿ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಶೇನ್ ವಾಟ್ಸನ್ ಅಜೇಯ 185 ರನ್ ಗಳಿಸಿರುವುದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಒಟ್ಟಾರೆಯಾಗಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ 11ನೇ ದೃಷ್ಟಾಂತ ಇದಾಗಿದೆ.

ಚೇಸಿಂಗ್ ವೇಳೆ ದ್ವಿಶತಕ ಸಾಧನೆ...

ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್ ವೇಳೆ ದ್ವಿಶತಕ ಗಳಿಸಿದ ಮೊದಲ ಬ್ಯಾಟರ್ ಎಂಬ ಖ್ಯಾತಿಗೆ ಮ್ಯಾಕ್ಸ್‌ವೆಲ್ ಪಾತ್ರರಾಗಿದ್ದಾರೆ. 2021ರಲ್ಲಿ ಪಾಕಿಸ್ತಾನದ ಫಖಾರ್ ಜಮಾನ್, ದಕ್ಷಿಣ ಆಫ್ರಿಕಾ ವಿರುದ್ಧ 193 ರನ್ ಗಳಿಸಿದ್ದರು. ಈ ದಾಖಲೆಯನ್ನು ಮ್ಯಾಕ್ಸ್‌ವೆಲ್ ಮುರಿದರು.

ಆರನೇ ಕ್ರಮಾಂಕದಲ್ಲಿ ಬಂದು ದ್ವಿಶತಕ ಸಾಧನೆ...

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಮ್ಯಾಕ್ಸ್‌ವೆಲ್ ದ್ವಿಶತಕ ಗಳಿಸಿರುವುದು ವಿಶೇಷವೆನಿಸಿದೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕನಲ್ಲದ ಬ್ಯಾಟರ್ ಎನಿಸಿದರು. ಜಿಂಬಾಬ್ವೆಯ ಚಾರ್ಲ್ಸ್ ಕಾವೆಂಟ್ರಿ 194 ರನ್ ಗಳಿಸಿರುವುದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ದ್ವಿಶತಕ ಗಳಿಸಿದ ಮ್ಯಾಕ್ಸ್‌ವೆಲ್ ಸಂಭ್ರಮ

ದ್ವಿಶತಕ ಗಳಿಸಿದ ಮ್ಯಾಕ್ಸ್‌ವೆಲ್ ಸಂಭ್ರಮ

(ಪಿಟಿಐ ಚಿತ್ರ)

ಏಕದಿನ ವಿಶ್ವಕಪ್‌ನಲ್ಲಿ ಮೂರನೇ ದ್ವಿಶತಕ...

ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ದ್ವಿಶತಕ ಗಳಿಸಿದ ಮೂರನೇ ಬ್ಯಾಟರ್ ಎನಿಸಿದರು. 2015ರಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್, ಜಿಂಬಾಬ್ವೆ ವಿರುದ್ಧ (215) ಮತ್ತು 2015ರಲ್ಲೇ ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ ವೆಸ್ಟ್‌ಇಂಡೀಸ್ ವಿರುದ್ಧ ದ್ವಿಶತಕ (237) ಸಾಧನೆ ಮಾಡಿದ್ದರು.

ದಾಖಲೆಯ ಜೊತೆಯಾಟ...

ಮುರಿಯದ ಎಂಟನೇ ವಿಕೆಟ್‌ಗೆ ನಾಯಕ ಪ್ಯಾಟ್ ಕಮಿನ್ಸ್‌ ಜತೆ ಮ್ಯಾಕ್ಸ್‌ವೆಲ್, 170 ಎಸೆತಗಳಲ್ಲಿ 202 ರನ್‌‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇದು ಏಳು ಅಥವಾ ಅದಕ್ಕಿಂತಲೂ ಕೆಳಗಿನ ವಿಕೆಟ್‌ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ. 2015ರಲ್ಲಿ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಮತ್ತು ಅದಿಲ್ ರಶೀದ್ ಏಳನೇ ವಿಕೆಟ್‌ಗೆ 177 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಎರಡನೇ ವೇಗದ ದ್ವಿಶತಕ ಸಾಧನೆ...

ಮ್ಯಾಕ್ಸ್‌ವೆಲ್ ದ್ವಿಶತಕ 128 ಎಸೆತಗಳಲ್ಲಿ ದಾಖಲಾಯಿತು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ವೇಗದ ದ್ವಿಶತಕ ಗಳಿಸಿದ ದಾಖಲೆಗೆ ಭಾಜನರಾದರು. ಏಕದಿನ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ಗಳಿಸಿದ ದಾಖಲೆ ಭಾರತದ ಇಶಾನ್ ಕಿಶನ್ (126 ಎಸೆತ) ಹೆಸರಲ್ಲಿದೆ.

ರೋಹಿತ್ ಹಿಂಬಾಲಿಸಿದ ಮ್ಯಾಕ್ಸ್‌ವೆಲ್...

ಅಫ್ಗಾನಿಸ್ತಾನ ವಿರುದ್ಧ 10 ಸಿಕ್ಸರ್ ಸಿಡಿಸಿದ ಮ್ಯಾಕ್ಸ್‌ವೆಲ್, ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ (49), ಭಾರತದ ರೋಹಿತ್ ಶರ್ಮಾ (45) ನಂತರದ ಸ್ಥಾನದಲ್ಲಿ ಮ್ಯಾಕ್ಸ್‌ವೆಲ್ (43) ಇದ್ದಾರೆ.

ಮ್ಯಾಕ್ಸ್‌ವೆಲ್‌ಗೆ ಸಹ ಆಟಗಾರರ ಅಭಿನಂದನೆ

ಮ್ಯಾಕ್ಸ್‌ವೆಲ್‌ಗೆ ಸಹ ಆಟಗಾರರ ಅಭಿನಂದನೆ

(ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT