ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup 2023: ಹೊನಲು ಬೆಳಕಿನಲ್ಲಿ ರೋಹಿತ್ ಪಡೆ ತಾಲೀಮು

Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿರುವ ಭಾರತಕ್ಕೆ ರೌಂಡ್ ರಾಬಿನ್ ಲೀಗ್‌ನಲ್ಲಿ ಒಂದು ಪಂದ್ಯ ಉಳಿದಿದೆ.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ತಂಡವು ಆಡಬೇಕಿದೆ. ಲೀಗ್ ಹಂತದಲ್ಲಿ ಸತತ ಎಂಟು ಪಂದ್ಯಗಳಲ್ಲಿಯೂ ಗೆದ್ದಿದೆ. ಉಳಿದಿರುವ ಇನ್ನೊಂದು ಪಂದ್ಯವನ್ನೂ ಜಯಿಸಿ ಅಜೇಯವಾಗುಳಿಯುವತ್ತ ಚಿತ್ತ ನೆಟ್ಟಿದೆ.

ಆದರೆ ನೆದರ್ಲೆಂಡ್ಸ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಿರುವ ಬಳಗದ ವಿರುದ್ಧ ಆಡಲು ಆತಿಥೇಯ ಆಟಗಾರರು ಅಭ್ಯಾಸವನ್ನು ಗಂಭೀರವಾಗಿಯೇ ಮಾಡುತ್ತಿದ್ದಾರೆ.

ಶುಕ್ರವಾರ ಹೊನಲು ಬೆಳಕಿನಲ್ಲಿ ತಂಡದ ಆಟಗಾರರು ಅಭ್ಯಾಸ ನಡೆಸಿದರು. ಸಂಜೆ 6.30ರ ಸುಮಾರಿಗೆ ಮೈದಾನಕ್ಕೆ ಬಂದ ತಂಡದಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದರು.

ಅವರು ನೆಟ್ಸ್‌ನಲ್ಲಿ ಎಡಗೈ ಸ್ಪಿನ್ನರ್‌ಗಳ ಎಸೆತಗಳನ್ನು ಎದುರಿಸಿದರು. ಭಾರತವು ನ.15ರಂದು ಮುಂಬೈನಲ್ಲಿ ನಡೆಯುವ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಕಿವೀಸ್ ತಂಡದಲ್ಲಿರುವ ಎಡಗೈ ಸ್ಪಿನ್ನರ್‌ಗಳನ್ನು ಎದುರಿಸುವ ತಯಾರಿಯನ್ನೂ ವಿರಾಟ್ ಇಲ್ಲಿ ಮಾಡಿದ್ದು ಸ್ಪಷ್ಟವಾಗಿತ್ತು. 

ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಮತ್ತು ಸೈಡ್‌ ಆರ್ಮ್ ಥ್ರೋ ಪರಿಣತರಿಂದ ವೇಗದ ಎಸೆತಗಳನ್ನೂ ಕೊಹ್ಲಿ ಎದುರಿಸಿದರು.  ಶುಭಮನ್ ಗಿಲ್, ಕೆ.ಎಲ್. ರಾಹುಲ್,  ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್ ಅವರೊಂದಿಗೆ ಫುಟ್‌ಬಾಲ್ ಕೂಡ ಆಡಿದರು.

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಪಿಚ್‌ನತ್ತ ಸಾಗಿ ಪರಿಶೀಲಿಸಿದರು. ರೋಹಿತ್ ಕೆಲಕಾಲ ನೆಟ್ಸ್‌ನಲ್ಲಿ ಬ್ಯಾಟಿಂಗ್ ಕೂಡ ಮಾಡಿದರು. ವೇಗಿಗಳಾದ ಮೊಹಮ್ಮದ್ ಶಮಿ, ಕನ್ನಡಿಗ ಪ್ರಸಿದ್ಧ ಕೃಷ್ಣ ಅವರೂ ಅಭ್ಯಾಸ ನಡೆಸಿದರು.

ಭಾನುವಾರದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಜಸ್‌ಪ್ರೀತ್ ಬೂಮ್ರಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಚ್ ಪಡೆ ಅಭ್ಯಾಸ: ಮಧ್ಯಾಹ್ನವೇ ಮೈದಾನಕ್ಕೆ ಬಂದಿದ್ದ ನೆದರ್ಲೆಂಡ್ಸ್ ತಂಡದ ಆಟಗಾರರು ಸಂಜೆ ಆರು ಗಂಟೆಯವರೆಗೂ ಅಭ್ಯಾಸ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT