ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup:ದೀಪಾವಳಿಗೆ ಜೋಡಿ ಶತಕ ಮೆರಗು! ತವರಲ್ಲಿ ಸೆಂಚುರಿ ಸಿಡಿಸಿದ ರಾಹುಲ್

ದೀಪಾವಳಿ ಸಂಭ್ರಮ ಇಮ್ಮಡಿಸಿದ ಶ್ರೇಯಸ್ ಅಯ್ಯರ್; ಅಜೇಯವಾಗುಳಿದ ಭಾರತ
Published 12 ನವೆಂಬರ್ 2023, 20:42 IST
Last Updated 12 ನವೆಂಬರ್ 2023, 20:42 IST
ಅಕ್ಷರ ಗಾತ್ರ

ಬೆಂಗಳೂರು: ನರಕ ಚತುರ್ದಶಿಯ ದಿನವಾದ ಭಾನುವಾರ ವಿರಾಟ್ ಕೊಹ್ಲಿ ‘ಶತಕಗಳ ಅರ್ಧಶತಕ’ ದಾಖಲೆ ಮಾಡಲಿಲ್ಲ. ಆದರೆ ಮೂವರು ಬ್ಯಾಟರ್‌ಗಳ ಅರ್ಧಶತಕ ಮತ್ತು ಎರಡು ಶತಕಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ದೊರೆಯಿತು.

ಅದರಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರ ಮಿಂಚಿನ ಶತಕವೂ ಒಂದಾಗಿತ್ತು. ಇದಲ್ಲದೇ ಆತಿಥೇಯ ಬಳಗದ ಒಂಬತ್ತು ಆಟಗಾರರ ಬೌಲಿಂಗ್ ನೋಡುವ ಅವಕಾಶವೂ ದೊರೆಯಿತು!

ಒಟ್ಟಾರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೀಪಾವಳಿ ಸಂಭ್ರಮಕ್ಕೆ ರಂಗೇರಿತು. ಪಂದ್ಯದಲ್ಲಿ ಒಟ್ಟು 19 ಸಿಕ್ಸರ್, 56 ಬೌಂಡರಿಗಳು ಪಟಾಕಿಗಳಂತೆ ಸಿಡಿದವು. ಮೊದಲೇ ನಿರೀಕ್ಷಿಸಿದಂತೆ ಭಾರತ ತಂಡವು 160 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತವು ಅಜೇಯವಾಗುಳಿಯಿತು. ಇನ್ನೆರಡು ದಿನಗಳ ನಂತರ ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ರೋಹಿತ್ ಶರ್ಮಾ ಬಳಗವು ಎದುರಿಸಲಿದೆ.

ಇಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟರ್‌ಗಳ ಸ್ವರ್ಗವಾಗಿರುವ ಪಿಚ್‌ನಲ್ಲಿ ತಂಡವು 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 410 ರನ್ ಗಳಿಸಿತು.

ಕ್ರೀಸ್‌ಗೆ ಬಂದ ಆರು ಬ್ಯಾಟರ್‌ಗಳಲ್ಲಿ ಐವರು ತಲಾ 50ಕ್ಕಿಂತ ಹೆಚ್ಚು ರನ್‌ಗಳನ್ನು ಹೊಡೆದರು. ಅದರಲ್ಲಿ ಸ್ಥಳೀಯ ಹೀರೊ ರಾಹುಲ್ 62 ಎಸೆತಗಳಲ್ಲಿ ಶತಕ ಹೊಡೆದರು. ಶ್ರೇಯಸ್ ಅಯ್ಯರ್ ಅಜೇಯ ಶತಕ (120; 94ಎ) ದಾಖಲಿಸಿದರು.

ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಕುಸಿಯಲಿಲ್ಲ 47.5 ಓವರ್‌ಗಳಲ್ಲಿ 250 ರನ್‌ ಗಳಿಸಿ ಆಲೌಟ್ ಆಯಿತು. ಲೀಗ್ ಹಂತದಲ್ಲಿ ಅನುಭವಿ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಭಾರತದ ಎದುರು ನೂರರ ಗಡಿಯನ್ನೂ ಮುಟ್ಟಿರಲಿಲ್ಲ. ಅವರಿಗಿಂತ ಡಚ್ ಪಡೆಯ ಬ್ಯಾಟರ್‌ಗಳು ಭಾರತದ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಅದರಲ್ಲಿ ತೇಜಾ ನಿಡಮಾನೂರು ಅರ್ಧಶತಕ ಕೂಡ ದಾಖಲಿಸಿದರು.

ತವರಿನಲ್ಲಿ ರಾಹುಲ್ ಸಂಭ್ರಮ

ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಅಜೇಯ 97 ರನ್ ಗಳಿಸಿದ್ದ ರಾಹುಲ್ ತಮ್ಮ ತವರಿನಂಗಳದಲ್ಲಿ ಶತಕ ದಾಖಲಿಸುವ ಅವಕಾಶ ಬಿಡಲಿಲ್ಲ. ತಾವು 89 ರನ್‌ ಗಳಿಸಿದ್ದ ಸಂದರ್ಭದಲ್ಲಿ ಸತತ ಎರಡು ಸಿಕ್ಸರ್ ಬಾರಿಸಿ ಶತಕದ ಗಡಿ ದಾಟಿದರು. ಅಲ್ಲದೇ ಶ್ರೇಯಸ್ ಜೊತಗೆ 208 ರನ್‌ಗಳ ಜೊತೆಯಾಟವಾಡಿದರು.

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಾಹುಲ್ ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ದಾಖಲಿಸಿದ ಎರಡನೇ ಆಟಗಾರನಾದರು. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (ಈಗ ತಂಡದ ಮುಖ್ಯ ಕೋಚ್) ಅಗ್ರಸ್ಥಾನದಲ್ಲಿದ್ದಾರೆ. ರಾಹುಲ್‌ಗಿಂತ ಮುನ್ನ ಶತಕ ಪೂರೈಸಿದ ಶ್ರೇಯಸ್ ಅಯ್ಯರ್ ತಂಡದ ಮೊತ್ತವು 400 ರನ್‌ಗಳ ಗಡಿ ದಾಟುವಂತೆ ನೋಡಿಕೊಂಡರು. ವಿಶ್ವಕಪ್ ಟೂರ್ನಿಯಲ್ಲಿ ಇದು ಅವರ ಪ್ರಥಮ ಶತಕವಾಗಿದೆ.

ಇನಿಂಗ್ಸ್‌ನಲ್ಲಿ ಇನ್ನೊಂದು ಎಸೆತ ಬಾಕಿ ಇದ್ದಾಗ ರಾಹುಲ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.

ಕೊಹ್ಲಿ–ಶ್ರೇಯಸ್ ಜೊತೆಯಾಟ

ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಗಳಿಸಿರುವ ವಿರಾಟ್ ಇಲ್ಲಿ 50ನೇಯದ್ದನ್ನು ಗಳಿಸುವ ನಿರೀಕ್ಷೆ ಮೂಡಿಸಿದ್ದರು.

ಅವರು 55 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದಾಗ ನಿರೀಕ್ಷೆ ಮತ್ತಷ್ಟು ಬಲವಾಯಿತು. ಆದರೆ 29ನೇ ಓವರ್‌ನಲ್ಲಿ ವ್ಯಾನ್ ಡೆರ್ ಮರ್ವೆ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಆದರೆ ಅವರು ಶ್ರೇಯಸ್ ಜೊತೆಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 71 ರನ್ ಸೇರಿಸಿದರು.

ಅಮೋಘ ಆರಂಭ

ನಾಯಕ ರೋಹಿತ್ ಶರ್ಮಾ ಅವರು ಶುಭಮನ್ ಗಿಲ್ ಜೊತೆಗೆ ಅಮೋಘ ಆರಂಭವನ್ನೂ ನೀಡಿದರು.

ಮೊದಲ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 100 ರನ್‌ಗಳನ್ನು ಸೇರಿಸಿದರು. ಆದರೆ ಇಬ್ಬರಿಗೂ ಶತಕ ಗಳಿಸುವ ಅವಕಾಶ ಇಲ್ಲಿತ್ತು.

ಆದರೆ ಗಿಲ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಬೌಂಡರಿಲೈನ್‌ನಲ್ಲಿದ್ದ ತೇಜಾ ನಿಡಮಾನುರಗೆ ಕ್ಯಾಚಿತ್ತರು. ಗಿಲ್ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ನಂತರ ರೋಹಿತ್ ಕೂಡ ಅರ್ಧಶತಕ ಗಳಿಸಿ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT