ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup | ಫೈನಲ್‌ನಲ್ಲೂ ಅರ್ಧಶತಕ: ಹಲವು ದಾಖಲೆ ಬರೆದ ಕಿಂಗ್ ಕೊಹ್ಲಿ

Published 19 ನವೆಂಬರ್ 2023, 10:54 IST
Last Updated 19 ನವೆಂಬರ್ 2023, 10:54 IST
ಅಕ್ಷರ ಗಾತ್ರ

ಅಹಮದಾಬಾದ್‌: ಭಾರತ ಕ್ರಿಕೆಟ್‌ ತಂಡದ 'ರನ್‌ ಮಷಿನ್‌' ಖ್ಯಾತಿಯ ವಿರಾಟ್‌ ಕೊಹ್ಲಿ, ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಹೆಚ್ಚು ಬಾರಿ 50ಕ್ಕಿಂತ ಅಧಿಕ ರನ್‌ ಗಳಿಸಿದ ವಿಶ್ವ ದಾಖಲೆ ಬರೆದರು.

2023ರ ವಿಶ್ವಕಪ್‌ನಲ್ಲಿ 11 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ 9 ಬಾರಿ 50ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ. ಭಾರತದವರೇ ಆದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ 2003ರಲ್ಲಿ ಮತ್ತು ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ 2019ರಲ್ಲಿ 8 ಬಾರಿ ಈ ಸಾಧನೆ ಮಾಡಿದ್ದರು.

ಸೆಮಿಫೈನಲ್‌, ಫೈನಲ್‌ನಲ್ಲಿ ಅರ್ಧಶತಕ
ಫೈನಲ್‌ನಲ್ಲಿ ಆಡುತ್ತಿರುವ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಟ್ರಾವಿಡ್ ಹೆಡ್‌, ವಿಶ್ವಕಪ್‌ ಟೂರ್ನಿಯೊಂದರ ಸೆಮಿಫೈನಲ್‌, ಫೈನಲ್‌ನಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟರ್‌ಗಳೆನಿಸಿದರು.

ಇಂಗ್ಲೆಂಡ್‌ನ ಮೈಕ್‌ ಬ್ರೆರ್ಲೇ (1979), ಆಸ್ಟ್ರೇಲಿಯಾದ ಡೇವಿಡ್‌ ಬೂನ್‌ (1987), ಪಾಕಿಸ್ತಾನದ ಜಾವೆದ್‌ ಮಿಯಾಂದಾದ್‌ (1992), ಶ್ರೀಲಂಕಾದ ಅರವಿಂದ ಡಿ ಸಿಲ್ವಾ (1996), ನ್ಯೂಜಿಲೆಂಡ್‌ನ ಗ್ರಾಂಟ್‌ ಎಲ್ಲಿಯಟ್‌ (2015) ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌ (2015) ಈ ಹಿಂದೆ ಈ ಸಾಧನೆ ಮಾಡಿದ್ದರು.

ಸತತ 5 ಇನಿಂಗ್ಸ್‌ಗಳಲ್ಲಿ 50+ ರನ್‌
ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಮೂರು ಸಲ ಮಾತ್ರವೇ ಬ್ಯಾಟರ್‌ಗಳು ಸತತ ಐದು ಇನಿಂಗ್ಸ್‌ಗಳಲ್ಲಿ 50 ಪ್ಲಸ್‌ ರನ್‌ ಗಳಿಸಿದ್ದಾರೆ. ಈ ಸಾಧನೆಯನ್ನು ಕೊಹ್ಲಿಯೇ ಎರಡು ಸಲ (2019 ಹಾಗೂ ಪ್ರಸ್ತುತ ಟೂರ್ನಿಯಲ್ಲಿ) ಮಾಡಿರುವುದು ವಿಶೇಷ. ಸ್ಟೀವ್ ಸ್ಮಿತ್‌ 2015ರಲ್ಲಿ ಈ ಸಾಧನೆ ಮಾಡಿದ್ದರು.

ಒಂದೇ ವಿಶ್ವಕಪ್‌ನಲ್ಲಿ ಅಧಿಕ ರನ್‌
ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದನ್ನು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿಯೂ ಮಿಂಚಿರುವ ಕೊಹ್ಲಿ ಬರೋಬ್ಬರಿ 765 ರನ್‌ ಗಳಿಸಿದ್ದಾರೆ. ಆ ಮೂಲಕ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಸಚಿನ್‌ ತೆಂಡೂಲ್ಕರ್‌ 2003ರಲ್ಲಿ 673 ರನ್‌ ಗಳಿಸಿದ್ದರು.

ಇನಿಂಗ್ಸ್‌ ಬೆಳೆಸುವ ಹೊಣೆ ಹೊತ್ತ ರಾಹುಲ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ 35 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 173 ರನ್ ಗಳಿಸಿದೆ.

ನಾಯಕ ರೋಹಿತ್‌ ಶರ್ಮಾ (47), ಶುಭಮನ್‌ ಗಿಲ್‌ (4), ವಿರಾಟ್‌ ಕೊಹ್ಲಿ (54) ಶ್ರೇಯಸ್‌ ಅಯ್ಯರ್‌ (4) ಔಟಾಗಿದ್ದಾರೆ.

ರಾಹುಲ್‌ 86 ಎಸೆತಗಳಲ್ಲಿ 50 ರನ್‌ ಬಾರಿಸಿರುವ ಕೆ.ಎಲ್.ರಾಹುಲ್‌ ಮತ್ತು 9 ರನ್‌ ಗಳಿಸಿರುವ ರವೀಂದ್ರ ಜಡೇಜ ಇನಿಂಗ್ಸ್‌ ಬೆಳೆಸುವ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT