ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಿಬಾಬಾ: ಜಾಕ್‌ ಮಾ ನಿವೃತ್ತಿ

55ನೇ ವಯಸ್ಸಿನಲ್ಲಿ ಪದತ್ಯಾಗ ಮಾಡಿದ ಚೀನಾದ ಕಾರ್ಪೊರೇಟ್‌ ದಿಗ್ಗಜ
Last Updated 10 ಸೆಪ್ಟೆಂಬರ್ 2019, 20:12 IST
ಅಕ್ಷರ ಗಾತ್ರ

ಬೀಜಿಂಗ್‌:ಇ–ಕಾಮರ್ಸ್‌ನ ಜಾಗತಿಕ ದೈತ್ಯ ಕಂಪನಿಯಾಗಿರುವ ಚೀನಾದ ಅಲಿಬಾಬಾ ಸಮೂಹದ ಸ್ಥಾಪಕರಾದ ಕೋಟ್ಯಧಿಪತಿ ಜಾಕ್‌ ಮಾ, ಈ ಮೊದಲೇ ಘೋಷಿಸಿದಂತೆ ಮಂಗಳವಾರ ಸೇವಾ ನಿವೃತ್ತರಾಗಿದ್ದಾರೆ.

ಕಮ್ಯುನಿಷ್ಟ ಸರ್ಕಾರ ಇರುವ ಚೀನಾದಲ್ಲಿನ ಆನ್‌ಲೈನ್‌ ರಿಟೇಲ್‌ ವಹಿವಾಟಿನ ಉತ್ಕರ್ಷಕ್ಕೆ ಇವರು ಕಾರಣರಾಗಿದ್ದರು.ತೀವ್ರಗತಿಯಲ್ಲಿ ಬದಲಾಗುತ್ತಿರುವ ಈ ವಹಿವಾಟು ಸದ್ಯಕ್ಕೆ ಅಮೆರಿಕ ಮತ್ತು ಚೀನಾ ವಾಣಿಜ್ಯ ಸಮರದ ಕಾರಣಕ್ಕೆ ಅನಿಶ್ಚಿತತೆ ಎದುರಿಸುತ್ತಿರುವ ಸಂದರ್ಭದಲ್ಲಿ ಪದತ್ಯಾಗ ಮಾಡುತ್ತಿದ್ದಾರೆ.

ಬಡಕುಟುಂಬದಲ್ಲಿ ಜನಿಸಿದ್ದ ಇವರು, ಚೀನಾದ ಅತ್ಯಂತ ಗೌರವಾನ್ವಿತ ಉದ್ಯಮಿಯಾಗಿದ್ದರು. ₹ 2.73 ಲಕ್ಷ ಕೋಟಿ ಸಂಪತ್ತಿನ ಒಡೆಯರಾಗಿದ್ದ ಇವರನ್ನು ಫೋರ್ಬ್ಸ್‌ ನಿಯತಕಾಲಿಕೆಯು ಕಳೆದ ವರ್ಷ ಚೀನಾದ ಅತ್ಯಂತ ಸಿರಿವಂತ ಉದ್ಯಮಿ ಎಂದು ಗುರುತಿಸಿತ್ತು.

ಚೀನಾದ ಸಿರಿವಂತರಲ್ಲಿ ಒಬ್ಬರಾಗಿರುವ ಜಾಕ್‌ ಮಾ, ತಮ್ಮ 55ನೆ ಜನ್ಮದಿನಾಚರಣೆ ದಿನ ಸೇವೆಯಿಂದ ನಿವೃತ್ತರಾಗುವುದಾಗಿ ವರ್ಷದ ಹಿಂದೆಯೇ ಹಠಾತ್ತಾಗಿ ಪ್ರಕಟಿಸಿದ್ದರು. ವಿಶ್ವದ ಎರಡನೆ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದಲ್ಲಿ ಈ ನಿರ್ಧಾರವು ಸಂಚಲನ ಮೂಡಿಸಿತ್ತು. ನಿವೃತ್ತಿ ನಂತರವೂ ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕರಾಗಿ ಇವರು ಮುಂದುವರಿಯಲಿದ್ದಾರೆ.

ಉತ್ತರಾಧಿಕಾರಿ: ಸಂಸ್ಥೆಯ ಸಿಇಒ ಡೇನಿಯಲ್‌ ಜಾಂಗ್‌ ಅವರು ತಮ್ಮ ಉತ್ತರಾಧಿಕಾರಿಯಾಗಲಿದ್ದಾರೆ ಎಂದೂ ಮಾ, ವರ್ಷದ ಹಿಂದೆಯೇ ಬಹಿರಂಗಪಡಿಸಿದ್ದರು.

ಇಂಗ್ಲಿಷ್‌ ಶಿಕ್ಷಕರಾಗಿದ್ದ ಇವರು ಚೀನಾದ ರಫ್ತುದಾರರನ್ನು ಅಮೆರಿಕದ ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ 1999ರಲ್ಲಿ ಅಲಿಬಾಬಾ ಕಂಪನಿ ಸ್ಥಾಪಿಸಿದ್ದರು. ಆನಂತರ ಚೀನಾದ ಬೆಳೆಯುತ್ತಿದ್ದ ಗ್ರಾಹಕರ ಮಾರುಕಟ್ಟೆಗೆ ಕಂಪನಿಯು ತನ್ನ ಸೇವೆ ವಿಸ್ತರಿಸಿತ್ತು. ಆನ್‌ಲೈನ್‌ ಬ್ಯಾಂಕಿಂಗ್‌, ಮನರಂಜನೆ, ಕ್ಲೌಡ್ ಕಂಪ್ಯೂಟಿಂಗ್ ವಹಿವಾಟು ಆರಂಭಿಸಿತ್ತು.

ವರಮಾನ ಹೆಚ್ಚಳ: ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ವರಮಾನವು ₹ 1.16 ಲಕ್ಷ ಕೋಟಿಗಳಷ್ಟಿತ್ತು. ಕಳೆದ ವರ್ಷ, ಕಂಪನಿಯ ಇ–ಕಾಮರ್ಸ್‌ನಲ್ಲಿನ ವಹಿವಾಟು ಶೇ 25ರಷ್ಟು ಏರಿಕೆ ದಾಖಲಿಸಿತ್ತು.

ಭಾರತದಲ್ಲಿ ಭಾರಿ ಹೂಡಿಕೆ?
ಅಲಿಬಾಬಾ ಕಂಪನಿಯು ಭಾರತದಲ್ಲಿ ಭಾರಿ ಮೊತ್ತದ ಬಂಡವಾಳ ಹೂಡಿಕೆ ಮಾಡಲು ಚಿಂತಿಸುತ್ತಿರುವ ಸಂದರ್ಭದಲ್ಲಿಯೇ ಜಾಕ್‌ ಮಾ ನಿವೃತ್ತರಾಗಲಿದ್ದಾರೆ. ಇ–ಕಾಮರ್ಸ್‌ ವಹಿವಾಟಿನಲ್ಲಿ ಅಮೆಜಾನ್‌ಗೆ ತೀವ್ರ ಸ್ಪರ್ಧೆ ನೀಡುವುದು ಕಂಪನಿಯ ಉದ್ದೇಶವಾಗಿದೆ.

‘ಭಾರತದ ತಂತ್ರಜ್ಞಾನ ವಲಯವನ್ನು ಜಾಕ್‌ ಮಾ ಅರ್ಥೈಸಿಕೊಂಡಿರುವ ಪರಿ ಕಂಡು ನಾನು ತುಂಬ ಪ್ರಭಾವಿತನಾಗಿದ್ದೇನೆ. ಅಲಿಬಾಬಾದ ಹೂಡಿಕೆ ನಿರ್ಧಾರವು ಎರಡೂ ದೇಶಗಳ ತಂತ್ರಜ್ಞಾನ ಕಂಪನಿಗಳ ನಡುವಣ ಬಾಂಧವ್ಯ ಬಲಪಡಿಸಲಿದೆ’ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಕಾರ್ಯನಿರ್ವಾಹಕ ನಿರ್ದೇಶಕ ಅತುಲ್‌ ಡಿ. ಅಭಿಪ್ರಾಯಪಟ್ಟಿದ್ದಾರೆ.

*
ಭವಿಷ್ಯದ ಬಗ್ಗೆ ಕನಸು ಹೊಂದಿರುವವರಿಗೆ ಗಾಳಿಸುದ್ದಿ, ಕಷ್ಟಕಾರ್ಪಣ್ಯ ಮತ್ತು ಹತಾಶೆಗಳು ಬದುಕಿನ ಭಾಗಗಳಾಗಿರುತ್ತವೆ.
-ಜಾಕ್‌ ಮಾ, ಅಲಿಬಾಬಾ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT