ಸೋಮವಾರ, ಫೆಬ್ರವರಿ 17, 2020
29 °C

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಗೆ ಕೇಂದ್ರದ ಸಮ್ಮತಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಜನಗಣತಿ ಕಾರ್ಯದ ಭಾಗವಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಗೆ  (ಎನ್‌ಪಿಆರ್‌) ಕೇಂದ್ರ ಸರ್ಕಾರ ಮಂಗಳವಾರ ಸಮ್ಮತಿ ನೀಡಿದೆ. ಈ ಕಾರ್ಯಕ್ಕೆ  ₹3,941 ಕೋಟಿ ವೆಚ್ಚವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜವಡೇಕರ್‌ ತಿಳಿಸಿದ್ದಾರೆ. 

ದೇಶದ ಪ್ರಾದೇಶಿಕ ‘ಸಾಮಾನ್ಯ ನಿವಾಸಿ’ಗಳ ಮಾಹಿತಿಯನ್ನು ಒಳಗೊಂಡ, ಸಮಗ್ರ ದತ್ತಾಂಶ ಸಿದ್ಧಪಡಿಸುವುದು ಎನ್‌ಪಿಆರ್‌ನ ಉದ್ದೇಶ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಪ್ರದೇಶವೊಂದರಲ್ಲಿ ಆರು ತಿಂಗಳಿಂದಲೂ ವಾಸವಿರುವ, ಮುಂದಿನ ಆರು ತಿಂಗಳ ವರೆಗೆ ಅದೇ ಪ್ರದೇಶದಲ್ಲಿ ವಾಸಿಸಲು ಉದ್ದೇಶಿಸಿರುವ ವ್ಯಕ್ತಿಯನ್ನು ‘ಸಾಮಾನ್ಯ ನಿವಾಸಿ’ ಎಂದು ಎನ್‌ಪಿಆರ್‌ ಅಡಿಯಲ್ಲಿ ಪರಿಗಣಿಸಲಾಗುತ್ತದೆ.  ಈ ವ್ಯಕ್ತಿ ಎನ್‌ಪಿಆರ್‌ ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. 

‘ಎನ್‌ಪಿಆರ್‌ ಅನ್ನು ಎನ್‌ಆರ್‌ಸಿಗೆ (ರಾಷ್ಟ್ರೀಯ ನೋಂದಣಿ) ಹೊಂದಿಸುವ ಯಾವುದೇ ಪ್ರಸ್ತಾವ ಕೇಂದ್ರದ ಎದುರು ಇಲ್ಲ,’ ಎಂದೂ ಸಚಿವ ಜಾವಡೇಕರ್‌ ತಿಳಿಸಿದ್ದಾರೆ. 

‘ಇದು ಸರಳ ಪ್ರಕ್ರಿಯೆ. ಮೊಬೈಲ್‌ ಆ್ಯಪ್‌ಗಳ ಮೂಲಕವೂ ಜನ ತಮ್ಮ ಮಾಹಿತಿಯನ್ನು ಅಪ್ಲೋಡ್‌ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಇದು ಸ್ವಯಂ ಘೋಷಣಾ ವಿಧಾನವಾಗಿದೆ. ಇದಕ್ಕೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ಬಯೋಮೆಟ್ರಿಕ್‌ ಕೂಡ ಇರುವುದಿಲ್ಲ. ಇದನ್ನು ಎಲ್ಲ ರಾಜ್ಯಗಳೂ ಈಗಾಗಲೇ ಒಪ್ಪಿಕೊಂಡಿವೆ. ಅಲ್ಲದೆ, ಈ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಲಾಗಿದೆ,’ ಎಂದು ಜಾವಡೇಕರ್‌ ತಿಳಿಸಿದರು. 

‘ಎನ್‌ಪಿಆರ್‌ನ ಆಧಾರದಲ್ಲಿ ಎನ್‌ಸಿಆರ್‌ ಅನ್ನು ಸಿದ್ಧಪಡಿಸಲಾಗುತ್ತದೆ,’ ಎಂದು ಕೇಂದ್ರ ಸಚಿವ ಕಿರಣ್‌ ರಿಜುಜು ಅವರು 2014ರಲ್ಲಿ ಲೋಕಸಭೆಯಲ್ಲಿ ಹೇಳಿದ್ದರು ಎಂಬ ವಿಷಯವನ್ನು ಸಚಿವ ಜಾವಡೇಕರ್‌ ಅವರ ಎದುರಿಟ್ಟಾಗ, ‘ಎನ್‌ಪಿಆರ್‌ ಅನ್ನು ಎನ್‌ಸಿಆರ್‌ಗೆ ಪೂರಕವಾಗಿ ಬಳಸಿಕೊಳ್ಳುತ್ತೇವೆ ಎಂದು ನಾವು ಹೇಳಿಲ್ಲ,’ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ದೇಶದಲ್ಲಿ ಇನ್ನೆಷ್ಟು ಗೊಂದಲ ಸೃಷ್ಟಿಸುತ್ತೀರಿ ಎಂದು ಮಾಧ್ಯಮಗಳಿಗೇ ಅವರು ಪ್ರಶ್ನೆ ಎಸೆದರು.  ಆದರೆ, ಲೋಕಸಭೆಯಲ್ಲಿ ರಿಜುಜು ಅವರು ನೀಡಿದ್ದ ಹೇಳಿಕೆಗೆ ಅವರು ಉತ್ತರ ನೀಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು