ಸೋಮವಾರ, ಡಿಸೆಂಬರ್ 6, 2021
27 °C
1909ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ, 842 ಪ್ರಕರಣಗಳು ಸಕ್ರಿಯ

ಮಂಡ್ಯ: ನಾಲ್ವರ ಸಾವು; 152 ಮಂದಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲಾಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಸೋಮವಾರ ಮೃತಪಟ್ಟಿದ್ದಾರೆ. ನಾಲ್ವರಲ್ಲಿ ಇಬ್ಬರು ಮಂಡ್ಯ ಜಿಲ್ಲೆ, ಇಬ್ಬರು ರಾಮನಗರ ಜಿಲ್ಲೆಗೆ ಸೇರಿದ್ದಾರೆ.

ಅನ್ಯಜಿಲ್ಲೆಯವರನ್ನು ಹೊರತುಪಡಿಸಿ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್‌–19ನಿಂದ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ನಗರದ ಗುತ್ತಲು ಬಡಾವಣೆಯ 55 ವರ್ಷ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರನ್ನು ಎರಡು ದಿನಗಳಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ತಾಲ್ಲೂಕಿನ ಯರಹಳ್ಳಿ ಗ್ರಾಮದ 65 ವರ್ಷ ವಯಸ್ಸಿನ ಮಹಿಳೆ ಕೂಡ ಮೃತಪಟ್ಟಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮನಗರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ಧಾರೆ. ರಾಮನಗರದ 50 ವರ್ಷದ ವ್ಯಕ್ತಿ, ವಾರದಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಮೂವರನ್ನೂ ಕೋವಿಡ್‌ ಕಾರ್ಯಸೂಚಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಸಾತನೂರು ಸಮೀಪದ ದೊಡ್ಡಆಲಹಳ್ಳಿ ಗ್ರಾಮದ, 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

152 ಮಂದಿಗೆ ಸೋಂಕು: ಸೋಮವಾರ ಒಂದೇ ದಿನ 152 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1909ಕ್ಕೆ ಏರಿಕೆಯಾಗಿದೆ.

ಹೆಚ್ಚಿನ ಜನರು ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಗಾಗುತ್ತಿರುವ ಕಾರಣ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಮುಂಬೈ ಪ್ರಕರಣಗಳ ನಂತರ ಸೋಮವಾರ ಕಂಡುಬಂದಿರುವ 152 ಪ್ರಕರಣಗಳು ಅತೀ ಹೆಚ್ಚಿನ ಸೋಂಕಿತರ ಸಂಖ್ಯೆಯಾಗಿದೆ. ಹೆಚ್ಚುತ್ತಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ಈಗಾಗಲೇ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್‌ ವಾರ್ಡ್‌ ಸ್ಥಾಪನೆ ಮಾಡಲಾಗಿದೆ.

ಸೋಮವಾರ ಪತ್ತೆಯಾದ ರೋಗಿಗಳಲ್ಲಿ ಮಂಡ್ಯ ತಾಲ್ಲೂಕೊಂದರಲ್ಲಿ 34 ಪ್ರಕರಣ ಕಂಡುಬಂದಿವೆ. ಕೆ.ಆರ್‌.ಪೇಟೆ 24, ಶ್ರೀರಂಗಪಟ್ಟ, ಮಳವಳ್ಳಿಯಲ್ಲಿ 17, ಪಾಂಡವಪುರ 16, ನಾಗಮಂಗಲ 12, ಮದ್ದೂರು 13 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್‌ನಿಂದ 1,053ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ ಕೋವಿಡ್‌ ಆಸ್ಪತ್ರೆಗಳಲ್ಲಿ 842 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್‌ ಗೆದ್ದ ಕಾಮೇಗೌಡರ ಬಿಡುಗಡೆ

ಮಳವಳ್ಳಿ ತಾಲ್ಲೂಕು, ದಾಸನದೊಡ್ಡಿ ಗ್ರಾಮದ ‍ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಕೋವಿಡ್‌–19ನಿಂದ ಸಂಪೂರ್ಣವಾಗಿ ಗುಣಮುಖವಾಗಿದ್ದು ಸೋಮವಾರ ಆಸ್ಪತ್ರೆಯಿಂದ ಮನೆಗೆ ತೆರಳಿದರು.

85 ವರ್ಷಗಳ ಕಾಮೇಗೌಡರು 14 ದಿನಗಳ ಕಾಲ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಲಗಾಲಿನ ಗಾಯದಿಂದಲೂ ನರಳುತ್ತಿದ್ದ ಅವರು ಕೋವಿಡ್‌ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾದರು. ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಅವರಿಗೆ ಅಭಿನಂದಿಸಿ ಬೀಳ್ಕೊಡುಗೆ ನೀಡಿದರು.

ಸೋಮವಾರ ಜಿಲ್ಲಾಸ್ಪತ್ರೆಯಿಂದ ಒಟ್ಟು 44 ಮಂದಿ ಬಿಡುಗಡೆಯಾದರು. ಮಂಡ್ಯ ತಾಲ್ಲೂಕಿನ 20, ಕೆ.ಆರ್‌.ಪೇಟೆ 12, ಮದ್ದೂರು 6, ಶ್ರೀರಂಗಪಟ್ಟಣ ತಾಲ್ಲೂಕಿನ ನಾಲ್ವರು ಬಿಡುಗಡೆಯಾದರು.

***

ಕೋವಿಡ್‌ ಅಂಕಿ–ಅಂಶ

ಜಿಲ್ಲೆಯಲ್ಲಿ ಒಟ್ಟು: 1909

ಸಕ್ರಿಯ ಪ್ರಕರಣ: 842

ಏರಿಕೆ: 152

ಗುಣಮುಖ: 1053

ಏರಿಕೆ: 44

ಸಾವು: 24

ಏರಿಕೆ: 02

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು