ಸುಮಲತಾಗೆ ರೈತ ಸಂಘದ ಬೆಂಬಲ?

ಮಂಗಳವಾರ, ಏಪ್ರಿಲ್ 23, 2019
31 °C
ಅಧಿಕೃತ ಘೋಷಣೆ 26ರಂದು: ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ

ಸುಮಲತಾಗೆ ರೈತ ಸಂಘದ ಬೆಂಬಲ?

Published:
Updated:
Prajavani

ಪಾಂಡವಪುರ: ‘ಮಂಡ್ಯ ಲೋಕಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡಬೇಕೆಂಬುದು ರೈತ ಸಂಘದ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಈ ಸಂಬಂಧ ಮಾರ್ಚ್‌ 26ರಂದು ಅಧಿಕೃತ ಘೋಷಣೆ ಮಾಡಲಾಗುವುದು’ ಎಂದು ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಮಲತಾ ಅವರಿಗೆ ಏಕೆ ಬೆಂಬಲ ನೀಡಲಾಗುತ್ತದೆ ಎಂಬುದನ್ನು ಜನತೆಗೆ ಬಹಿರಂಗವಾಗಿ ತಿಳಿಸಿ ಪ್ರಚಾರ ನಡೆಸಲಾಗುವುದು. ದರ್ಶನ್‌ ಪುಟ್ಟಣ್ಣಯ್ಯ ಕೂಡ ಪ್ರಚಾರ ಕೈಗೊಳ್ಳಲಿದ್ದಾರೆ ಎಂದರು.

ದೇವೇಗೌಡರ ಆಸ್ತಿಯೇ?

ಮಂಡ್ಯ ಜಿಲ್ಲೆ ಎಚ್‌.ಡಿ.ದೇವೇಗೌಡರ ಕುಟುಂಬದ ಆಸ್ತಿಯಲ್ಲ. ಜಿಲ್ಲೆಯಲ್ಲಿ ಉತ್ತಮ ನಾಯಕರಿಲ್ಲವೇ. ದೇವೇಗೌಡರು ತಮ್ಮ ಜತೆಗೆ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಧಿಕಾರಕ್ಕೆ ತರಲು ಜಿಲ್ಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆಯೇ. ಇಂತಹ ರಾಜಕಾರಣವನ್ನು ಜಿಲ್ಲೆಯ ಜನತೆ ಒಪ್ಪಿಕೊಳ್ಳಬೇಕೆ ಎಂಬುದನ್ನು ಜನರು ಚರ್ಚಿಸಬೇಕಾಗಿದೆ ಎಂದು ಕೆನ್ನಾಳು ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್ ಹೇಳಿದರು.

ಮಣ್ಣಿನ ಮಕ್ಕಳು ಯಾರು. ಜಿಲ್ಲೆಯ ರೈತರು ನಿಜವಾದ ಮಣ್ಣಿನ ಮಕ್ಕಳು. ಅಲ್ಲದೆ ಕಳೆದ 30 ವರ್ಷಗಳಿಂದ ನಿರಂತರವಾಗಿ ರೈತರ ಪರ ಹೋರಾಟ ಮಾಡಿಕೊಂಡು ಬಂದಿರುವ ರೈತ ಸಂಘದ ಕಾರ್ಯಕರ್ತರು ನಿಜವಾದ ಮಣ್ಣಿನ ಮಕ್ಕಳೇ ಹೊರತು ದೇವೇಗೌಡರ ಕುಟುಂಬದವರಲ್ಲ. ಅವರು ಉತ್ತಿಲ್ಲ, ಬಿತ್ತಿಲ್ಲ ಬೆಳೆಯನ್ನು ತೆಗೆದವರಲ್ಲ. ಆದರೆ ರೈತರನ್ನು ಬಳಸಿಕೊಂಡು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಇಂತಹ ನಡವಳಿಕೆಯನ್ನು ಜಿಲ್ಲೆಯ ರೈತರು ವಿರೋಧಿಸಬೇಕಿದೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.

ನಿಖಿಲ್ ಮಂಡ್ಯದ ಅಳಿಯ ಕೇವಲ ಗಿಮಿಕ್‌

ಜೆಡಿಎಸ್ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಅಳಿಯ ಆಗುವುದಾಗಿ ಹೇಳುತ್ತಿದ್ದಾರೆ. ಇದೆಲ್ಲಾ ಚುನಾವಣೆಯ ಗಿಮಿಕ್‌. ಅಳಿಯ ಊಟಮಾಡಿ ಹೊರಡಬೇಕಷ್ಟೇ. ಮನೆಯಲ್ಲಿ ಠಿಕಾಣಿ ಹೂಡುವುದಲ್ಲ ಎಂದು ರೈತ ಸಂಘದ  ಎಣ್ಣೆಹೊಳೆಕೊಪ್ಪಲು ಮಂಜು ಟೀಕಿಸಿದರು.

ಪಕ್ಷೇತರ ಅಭ್ಯರ್ಥಿ ಸುಮಲತಾ ನಿಜವಾಗಿಯೂ ಮಂಡ್ಯದ ಸೊಸೆ. ಇಲ್ಲಿ ಸೊಸೆಗೆ ಮಾತ್ರ ನೆಲೆ.  ಕುಟುಂಬದಲ್ಲಿ ಸೊಸೆಯ ಪಾತ್ರ ದೊಡ್ಡದು. ಹಾಗಾಗಿ ಜಿಲ್ಲೆಯ ಸೊಸೆ ಸುಮಲತಾ ಅವರನ್ನು ಉಳಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂದು  ಅವರು ಹೇಳಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೆ.ಕೆ.ಗೌಡೇಗೌಡ, ದಯಾನಂದ್‌, ಹರವು ಪ್ರಕಾಶ್‌, ಅಮೃತಿ ರಾಜಶೇಖರ್, ರಘು, ಚಿಕ್ಕಾಡೆ ವಿಜೇಂದ್ರ, ಇದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !