ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ–ವಿಜಿಲ್‌ ಬಳಸಿ; ನ್ಯಾಯಸಮ್ಮತ ಚುನಾವಣೆಗೆ ನೆರವಾಗಿ

ಚುನಾವಣಾ ಅಕ್ರಮ ಕಂಡುಬಂದರೆ ಕೈಕಟ್ಟಿ ಕೂರಬೇಡಿ: ಚುನಾವಣಾ ಆಯೋಗ ಮನವಿ
Last Updated 2 ಮೇ 2019, 16:36 IST
ಅಕ್ಷರ ಗಾತ್ರ

ಉಡುಪಿ: ಚುನಾವಣೆ ನ್ಯಾಯಸಮ್ಮತವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗ ಸಿ–ವಿಜಿಲ್ ಎಂಬ ಆ್ಯಪ್ ಜಾರಿಗೆ ತಂದಿದೆ. ಯೋಗ್ಯ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳು ಆಯ್ಕೆಯಾಗಬೇಕು ಎಂಬ ಮತದಾರರ ಅಭಿಲಾಷೆಗೆ ಈ ಆ್ಯಪ್‌ ನೆರವಾಗಲಿದ್ದು, ಚುನಾವಣಾ ನೀತಿ ಸಂಹಿತೆಗಳ ಉಲ್ಲಂಘನೆ ವಿರುದ್ಧ ಮತದಾರರು ಆ್ಯಪ್‌ ಬಳಸಿ ನೇರವಾಗಿ ದೂರು ನೀಡಬಹುದು.

ಅಪ್ರಾಮಾಣಿಕರು ನೀತಿಸಂಹಿತೆ ಉಲ್ಲಂಘಿಸುವುದನ್ನು ಕಂಡು ಮತದಾರರು ಸುಮ್ಮನಿರುವ ಅವಶ್ಯಕತೆ ಇಲ್ಲ. ಅಂಥವರ ವಿರುದ್ಧ ನೇರವಾಗಿ ಸಿ–ವಿಜಿಲ್ ಆ್ಯಪ್‌ ಬಳಸಿಕೊಂಡು ದೂರು ನೀಡಬಹುದು. ಸಾರ್ವಜನಿಕರು ಕೊಟ್ಟ ದೂರಿಗೆ ತ್ವರಿತಗತಿಯಲ್ಲಿ ಸ್ಪಂದನೆ ಸಿಗುವುದು ಸಿವಿಜಿಲ್ ಆ್ಯಪ್ ವಿಶೇಷ.

100 ನಿಮಿಷಗಳಲ್ಲಿ ಕ್ರಮ: ಸಾರ್ವಜನಿಕರು ದೂರು ನೀಡಿದ ಕೇವಲ 100 ನಿಮಿಷಗಳಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ. ತೆಗೆದುಕೊಂಡ ಕ್ರಮದ ಬಗ್ಗೆ ದೂರುದಾರರ ಮೊಬೈಲ್‌ಗೆ ಮಾಹಿತಿ ಬರಲಿದೆ.ದೂರು ನೀಡಲು ಕಚೇರಿಗೆ ಅಲೆಯಬೇಕಿಲ್ಲ, ಅಧಿಕಾರಿಗಳನ್ನು ಹುಡುಕಬೇಕಿಲ್ಲ, ಪತ್ರ ಬರೆಯುವ ಅವಶ್ಯಕತೆಯೂ ಇಲ್ಲ. ಸುಲಭವಾಗಿ, ಶೀಘ್ರವಾಗಿ ಇರುವ ಸ್ಥಳದಿಂದಲೇ ದೂರು ನೀಡಬಹುದಾಗಿದ್ದು, ನೀಡಿದ ದೂರಿನ ಕುರಿತು ಪ್ರತಿ ವಿವರಗಳನ್ನು ನಿಮ್ಮ ಮೊಬೈಲ್‌ನಲ್ಲಿ ವೀಕ್ಷಿಸಬಹುದು ಎನ್ನುತ್ತಾರೆ ಅಧಿಕಾರಿಗಳು.‌

ಸಿ–ವಿಜಿಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ: ಆಂಡ್ರಾಯ್ಡ್‌ ತಂತ್ರಾಂಶ ಇರುವ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಸಿ–ವಿಜಿಲ್ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದನ್ನು ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ಪರಿಸರದಲ್ಲಿ ಯಾವುದೇ ಚುನಾವಣಾ ನೀತಿ ಸಂಹಿತೆಗಳು ಉಲ್ಲಂಘಿಸುವುದನ್ನು ಕಂಡರೆ ಪೋಟೋ ಅಥವಾ ವೀಡಿಯೋಗಳನ್ನು ಅಪ್ ಲೋಡಿ ಮಾಡಿದರೆ ಸಾಕು. ನಿಮ್ಮ ದೂರು ಸ್ವೀಕೃತವಾಗಿ, ಕ್ಷಣಮಾತ್ರದಲ್ಲಿ ಮೊಬೈಲ್‌ಗೆ ಸಂದೇಶ ಬರಲಿದೆ.

ದೂರು ನೀಡಿದ ಸಮಯ ಮತ್ತು ಸ್ಥಳದ ಜಿಪಿಎಸ್ ಲೊಕೇಷನ್ ಆ್ಯಪ್‌ನಲ್ಲಿ ನಮೂದಾಗಲಿದ್ದು, ಸ್ಥಳಕ್ಕೆ ಸಮೀಪದ ಅಧಿಕಾರಿಗಳ ತಂಡ ನಿಗಧಿತ ಅವಧಿಯೊಳಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ದೂರು ಸರಿಯಾಗಿದ್ದರೆ ಸಂಬಂದಪಟ್ಟವರ ವಿರುದ್ದ ಕ್ರಮ ಕೈಗೊಳ್ಳಲಿದ್ದಾರೆ. ದೂರಿನ ಕುರಿತು ಹೆಚ್ಚಿನ ತನಿಖೆಯ ಅಗತ್ಯವಿದ್ದಲ್ಲಿ ಕ್ರಮ ತೆಗೆದುಕೊಳ್ಳುವ ಕಾಲಾವಕಾಶದ ಬಗ್ಗೆಯೂ ಮೊಬೈಲ್‌ಗೆ ಮಾಹಿತಿ ಬರಲಿದೆ.

ಯಾವ ವಿಷಯಗಳಲ್ಲಿ ದೂರು ನೀಡಬಹುದು?: ಮತದಾರರಿಗೆ ಹಣ ಹಂಚುವುದು, ಮದ್ಯ ಹಂಚುವುದು, ಉಡುಗೊರೆಗಳ ಆಮಿಷ, ಜನಾಂಗೀಯ ಭಾವನೆ ಕೆರಳಿಸುವ ಭಾಷಣ, ಪೇಯ್ಡ್ ನ್ಯೂಸ್, ಸುಳ್ಳು ಸುದ್ದಿ ಪ್ರಕಟ, ಬೆದರಿಕೆ ಹಾಕುವುದು, ಆಸ್ತಿಪಾಸ್ತಿಗೆ ಹಾನಿ ಮಾಡುವುದು ಸೇರಿದಂತೆ ಯಾವುದೇ ರೀತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ಧ ಸಾರ್ವಜನಿಕರು ದೂರು ನೀಡಬಹುದಾಗಿದೆ.

ಕ್ರಮ ಏನು: ನೀತಿ ಸಂಹಿತೆ ಉಲ್ಲಂಘನೆ ಸ್ಪಷ್ಟವಾದರೆ ಕಾರ್ಯಕ್ರಮಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಕ್ರಿಮಿನಲ್ ಪ್ರಕರಣದ ವ್ಯಾಪ್ತಿಗೆ ಬಂದರೆ ಎಫ್ಐಆರ್ ದಾಖಲಿಸಲಾಗುತ್ತದೆ.

‘ಜಿಲ್ಲೆಯಲ್ಲಿ ಈಗಾಗಲೇ ಸಿ–ವಿಜಿಲ್ ಮೂಲಕ 48 ದೂರುಗಳು ಸ್ವೀಕೃತವಾಗಿವೆ. ಮುಂದೆ ಚುನಾವಣಾ ಪ್ರಚಾರದ ಭರಾಟೆ ಹೆಚ್ಚಾಗಲಿದ್ದು, ವಿವಿಧ ರೀತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿ–ವಿಜಿಲ್ ಆಪ್ ಬಳಸಿ ದೂರು ನೀಡಬೇಕು’ ಎನ್ನುತ್ತಾರೆ ಸಿವಿಜಿಲ್‌ ಅಧಿಕಾರಿ ಮಂಜುನಾಥ ಶೆಟ್ಟಿ.

ಯೋಗ್ಯರ ಆಯ್ಕೆಗೆ ಪೂರಕ

ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ಪ್ರಭುಗಳು ಆಯ್ಕೆ ಮಾಡಿದವರೇ ಮುಂದೆ ಸರ್ಕಾರದಲ್ಲಿ ಮತದಾರರ ಪರವಾಗಿ ಅಧಿಕಾರ ನಡೆಸುವವರು. ಕೆಲಸ ಮಾಡುವ ಯೋಗ್ಯ, ಪ್ರಾಮಾಣಿಕ ಪ್ರತಿನಿಧಿಯನ್ನು ಮತದಾರರು ಆಯ್ಕೆ ಮಾಡಬೇಕು ಎಂಬುದು ಚುನಾವಣಾ ಆಯೋಗವು ಸಿ–ವಿಜಿಲ್‌ ಮೊಬೈಲ್‌ ಅಪ್ಲಿಕೇಶನ್‌ ಬಳಕೆಗೆ ತಂದಿರುವುದರ ಹಿಂದಿನ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT