ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಸಂಚಾರದಲ್ಲಿ ವ್ಯತ್ಯಯ ಜೂನ್‍ವರೆಗೆ ಅನಿವಾರ್ಯ

Last Updated 8 ಮೇ 2019, 15:22 IST
ಅಕ್ಷರ ಗಾತ್ರ

ಬೀರೂರು: ಕಳೆದ ವಾರ ನೀಟ್ ಪರೀಕ್ಷೆ ಬರೆಯಲು ರೈಲುಗಳಲ್ಲಿ ಪ್ರಯಾಣಿಸಿದ್ದ ವಿದ್ಯಾರ್ಥಿಗಳು ರೈಲುಸಂಚಾರದಲ್ಲಿ ಉಂಟಾದ ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡಿದ್ದು ಇನ್ನೂ ಹಸಿಯಾಗಿರುವಾಗಲೇ ಜೂನ್ 6ರವರೆಗೆ ವ್ಯತ್ಯಯ ಹೀಗೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಮಾರ್ಗ ಬದಲಾವಣೆ ಮತ್ತು ದುರಸ್ತಿ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯ ಹಲವೆಡೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಅದರ ಅನ್ವಯ ಬೆಳಿಗ್ಗೆ ಮೂರು ಗಂಟೆಗೆ ಬೀರೂರು ನಿಲ್ದಾಣ ಹಾದು ಬೆಂಗಳೂರು ಕಡೆ ತೆರಳಬೇಕಾದ ಗೋಲಗುಂಬಜ್ ರೈಲು ಬುಧವಾರ ಬೆಳಿಗ್ಗೆ ಸುಮಾರು 7 ಗಂಟೆ ತಡವಾಗಿ ಸಂಚರಿಸಿದೆ. ಈ ರೀತಿಯ ಒಂದು ರೈಲಿನ ಸಮಯದಲ್ಲಿ ಆದ ವಿಳಂಬ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರುತ್ತದೆ. ವೇಳಾಪಟ್ಟಿ ಅನುಸಾರ ಹುಬ್ಬಳ್ಳಿ ಇಂಟರ್‍ಸಿಟಿ ಮತ್ತು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲುಗಳು ನಿತ್ಯ ಸುಮಾರು ಒಂದೂವರೆ ಗಂಟೆ ತಡವಾಗಿ ಚಲಿಸುತ್ತಿವೆ. ಇದು ಪ್ಯಾಸೆಂಜರ್ ರೈಲುಗಳ ಸಂಚಾರದ ಮೇಲೂ ವ್ಯತ್ಯಯ ಉಂಟುಮಾಡಿದೆ.

ಸದ್ಯ ಅರಸೀಕೆರೆ ವಿಭಾಗದಲ್ಲಿ ಮೇ 1ರಿಂದ 11ರವರೆಗೆ ಬಾಣಾವರ-ಅರಸೀಕೆರೆ, ಮೇ 12ರಿಂದ 20ರವರೆಗೆ ದೇವನೂರು-ಬಾಣಾವರ, ಮೇ 21ರಿಂದ 30ರವರೆಗೆ ಬಳ್ಳೇಕೆರೆ-ದೇವನೂರು, ಮೇ 31ರಿಂದ ಜೂನ್ 6ರವರೆಗೆ ಕಡೂರು-ಬಳ್ಳೇಕೆರೆ ನಡುವೆ ಮೈಸೂರು ವಲಯ ಎಂಜಿನಿಯರಿಂಗ್ ವಿಭಾಗ ಬೆಳಿಗ್ಗೆ 7ರಿಂದ 10ರವರೆಗೆ ತಪಾಸಣೆ ಮತ್ತು ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ. ಈ ಸಮಯದಲ್ಲಿ ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್, ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ, ತಾಳಗುಪ್ಪ-ಬೆಂಗಳೂರು ಇಂಟರ್‍ಸಿಟಿ ಎಕ್ಸ್‌ಪ್ರೆಸ್, ಶಿವಮೊಗ್ಗ-ಮೈಸೂರು, ಚಿಕ್ಕಮಗಳೂರು-ಶಿವಮೊಗ್ಗ, ಅರಸೀಕೆರೆ-ಹುಬ್ಬಳ್ಳಿ ರೈಲುಗಳು ಸಂಚರಿಸುತ್ತಿದ್ದು ಒಂದು ರೈಲು ತಡವಾದರೆ ಈ ಮಾರ್ಗದಲ್ಲಿ ಸಂಚರಿಸುವ ಸುಮಾರು 45ರೈಲುಗಳ ಸಮಯದಲ್ಲೂ ವ್ಯತ್ಯಾಸವಾಗುತ್ತದೆ. ಬೇಸಿಗೆಯಲ್ಲಿ ದುರಸ್ತಿ ಮುಗಿಸಿದರೆ ವರ್ಷವಿಡೀ ಪ್ರಯಾಣಿಕರ ಸಂಚಾರ ಸುರಕ್ಷತೆ ಸಾಧ್ಯವಿದ್ದು, ಇತರೆ ಸಮಯದಲ್ಲಿ ಈ ಕೆಲಸ ಸಾಧ್ಯವಿಲ್ಲ ಎಂಬುದು ಇಲಾಖೆಯ ಹೇಳಿಕೆಯಾಗಿದೆ.

ಗುಂತಕಲ್ ಮತ್ತು ಧರ್ಮಾವರಂ ನಡುವೆ ಕೂಡಾ ದುರಸ್ತಿ ನಡೆದಿದ್ದು, ಅಲ್ಲಿಂದ ಮಾರ್ಗ ತಿರುಗಿಸಲಾದ ಸುಮಾರು 12ರೈಲುಗಳು ಬೆಂಗಳೂರು ಮತ್ತು ಚಿಕ್ಕ ಜಾಜೂರು ನಡುವೆ ಸಂಚರಿಸುತ್ತಿವೆ. ಇದರಿಂದಾಗಿಯೂ ಸಂಚಾರ ವ್ಯತ್ಯಯ ಉಂಟಾಗಿದೆ.

ಒಟ್ಟಿನಲ್ಲಿ, ಶಿವಮೊಗ್ಗ-ಬೆಂಗಳೂರು-ಹುಬ್ಬಳ್ಳಿಗಳ ನಡುವೆ ಸಂಚರಿಸುವ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಾಸ ಮುಂದುವರಿಯಲಿದ್ದು ರಜೆಯ ಪ್ರಯಾಣ ಸದ್ಯಕ್ಕಂತೂ ಹೊರೆಯಾಗುವ ಸಾಧ್ಯತೆ ಹೆಚ್ಚಿದೆ. ಜತೆಗೆ ಪ್ರಯಾಣಿಕರ ಒತ್ತಡ ಹೆಚ್ಚು ಇರುವ ಈ ಸಂದರ್ಭದಲ್ಲಿ ಬೀರೂರು ನಿಲ್ದಾಣದಲ್ಲಿ ಒಂದೇ ಕೌಂಟರ್ ಮೂಲಕ ಟಿಕೆಟ್ ವಿತರಣೆ ನಡೆದಿದ್ದು ಮೂರ್ನಾಲ್ಕು ರೈಲುಗಳು ಒಟ್ಟಿಗೆ ಬಂದರೆ ಪ್ರಯಾಣಿಕರಿಗೆ ಅನನುಕೂಲ ಆಗುತ್ತಿದೆ. ಹೆಚ್ಚುವರಿ ಕೌಂಟರ್ ಆರಂಭಿಸಿ ಪ್ರಯಾಣಿಕರ ಮೇಲಿನ ಒತ್ತಡ ಕಡಿಮೆ ಮಾಡಬೇಕೆಂಬ ಕೂಗು ಕೇಳಿಬಂದಿದ್ದು ರೈಲ್ವೆ ಇಲಾಖೆ ಇತ್ತ ಗಮನ ಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT