ಫ್ಲಿಪ್‌ಕಾರ್ಟ್ ಉದ್ಯೋಗಿ ಸೇರಿ ಇಬ್ಬರ ಸಾವು

ಶನಿವಾರ, ಮೇ 25, 2019
28 °C

ಫ್ಲಿಪ್‌ಕಾರ್ಟ್ ಉದ್ಯೋಗಿ ಸೇರಿ ಇಬ್ಬರ ಸಾವು

Published:
Updated:

ಬೆಂಗಳೂರು: ಬಾಣಸವಾಡಿ ಹಾಗೂ ನಂದಿನಿ ಲೇಔಟ್‌ನಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಫ್ಲಿಪ್‌ಕಾರ್ಟ್‌ ಉದ್ಯೋಗಿ ಸಿ. ಸಂತೋಷ್ (19) ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಕುಂದಾಪುರದ ಸಂತೋಷ್, ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

‘ನಂದಿನಿ ಲೇಔಟ್‌ ಬಳಿಯ ರಾಜೀವ್ ಉದ್ಯಾನ ಮುಂಭಾಗದಲ್ಲಿ ಸಂತೋಷ್‌ ಬೈಕ್‌ನಲ್ಲಿ ಹೊರಟಿದ್ದರು. ಹಿಂದಿನಿಂದ ಬಂದ ನೀರಿನ ಟ್ಯಾಂಕರ್, ಬೈಕ್‌ಗೆ ಗುದ್ದಿತ್ತು. ಬೈಕ್‌ನಿಂದ ಬಿದ್ದ ಸಂತೋಷ್ ಮೇಲೆ ಟ್ಯಾಂಕರ್‌ನ ಚಕ್ರಗಳು ಹರಿದುಹೋಗಿದ್ದರಿಂದ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಗ್ಗೆ ಸ್ಥಳೀಯರಿಂದ ಹೇಳಿಕೆ ಪಡೆಯಲಾಗಿದೆ’ ಎಂದು ರಾಜಾಜಿನಗರ ಸಂಚಾರ ಪೊಲೀಸರು ಹೇಳಿದರು.

‘ಅಪಘಾತದ ಬಳಿಕ ಟ್ಯಾಂಕರ್‌ ಬಿಟ್ಟು ಚಾಲಕ ಪರಾರಿಯಾಗಿದ್ದು, ಆತನನ್ನು ಪತ್ತೆ ಮಾಡುತ್ತಿದ್ದೇವೆ’ ಎಂದರು.

ಕೂಲಿ ಕಾರ್ಮಿಕ ಸಾವು: ಬಾಣಸವಾಡಿ ಬಳಿ ರಸ್ತೆ ದಾಟುತ್ತಿದ್ದ ವೇಳೆ ಟಾಟಾ ಏಸ್ ವಾಹನ ಗುದ್ದಿದ್ದರಿಂದಾಗಿ ಕೂಲಿ ಕಾರ್ಮಿಕ ಹನುಮಂತರಾಯಪ್ಪ (68) ಎಂಬುವರು ಮೃತಪಟ್ಟಿದ್ದಾರೆ.

‘ಸ್ಥಳೀಯ ನಿವಾಸಿಯಾಗಿದ್ದ ಹನುಮಂತರಾಯಪ್ಪ, ಗುರುವಾರ ರಾತ್ರಿ 9.30 ಗಂಟೆ ಸುಮಾರಿಗೆ ಬಾಣಸವಾಡಿಯ ಅಗ್ನಿಶಾಮಕ ದಳ ಕಚೇರಿಯ ಮುಂಭಾಗ ರಸ್ತೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಟಾಟಾ ಏಸ್ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ’ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು.

‘ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದ ಹನುಮಂತರಾಯಪ್ಪ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !