ಕೈತುಂಬ ಹಣ ಕೊಟ್ಟ ನಿಂಬೆ

ಗುರುವಾರ , ಜೂಲೈ 18, 2019
29 °C
ಭರ್ಜರಿ ಬೆಲೆ; ರೈತ ಪ್ರಭಾಕರ ಬಗಲಿ ಸಾಧನೆ

ಕೈತುಂಬ ಹಣ ಕೊಟ್ಟ ನಿಂಬೆ

Published:
Updated:
Prajavani

ಇಂಡಿ: ಬರದ ಬೇಗುದಿಯ ಮಧ್ಯೆಯೂ ಇಲ್ಲಿಯ ರೈತ ಪ್ರಭಾಕರ ಬಗಲಿ ಅವರು ಈ ಬಾರಿ ಭರ್ಜರಿ ನಿಂಬೆ ಬೆಳೆದಿದ್ದಾರೆ. ಕೈತುಂಬ ಆದಾಯ ಗಳಿಸಿ ನೆಮ್ಮದಿಯ ನಗು ಬೀರುತ್ತಿದ್ದಾರೆ.

ಇಂಡಿ ಪಟ್ಟಣಕ್ಕೆ ಹೊಂದಿಕೊಂಡಿರುವ 32 ಎಕರೆ ಜಮೀನಿನಲ್ಲಿ ನಿಂಬೆ, ಬಾಳೆ, ಕಬ್ಬು, ತೊಗರಿ, ಬಾಳೆ ಬೆಳೆದು ಸಾಕಷ್ಟು ಆದಾಯ ಗಳಿಸಿದ್ದಾರೆ. 20 ವರ್ಷಗಳ ಹಿಂದೆ ಇಂಡಿ ತಾಲ್ಲೂಕಿಗೆ ವರವಾಗಿ ಬಂದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ಇವರ ಜಮೀನಿನಲ್ಲಿಯೇ ಹಾದು ಹೋಗಿದೆ. ಇದರಿಂದ ಬಾಳೆ, ಕಬ್ಬು ಬೆಳೆಗಳು ನಳನಳಿಸುತ್ತಿವೆ.

ಇತ್ತೀಚಿನ ತೀವ್ರ ಬರಗಾಲದಿಂದ ಕೊಳವೆಬಾವಿ ಮತ್ತು ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದನ್ನು ಅರಿತ ಪ್ರಭಾಕರ ಬಗಲಿ ಅವರು ಪ್ರಸಕ್ತ ವರ್ಷ ಬಾಳೆ ಮತ್ತು ಕಬ್ಬು ಬೆಳೆಗಳನ್ನು ಕೈಬಿಟ್ಟು, 4 ಎಕರೆ ಜಮೀನಿನಲ್ಲಿ 400 ದೀರ್ಘಕಾಲದ ನಿಂಬೆ ಹಿಡಗಳನ್ನು ಬೆಳೆದಿದ್ದಾರೆ.

ನಿಂಬೆ ಬೆಳೆ ಪ್ರತೀ ವರ್ಷ ಎರಡು ಬೀಡಿನಲ್ಲಿ ಫಲ ನೀಡುತ್ತದೆ. ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ಬರುವ ಬೆಳೆಗೆ ಒಂದು ಡಾಗಿಗೆ ₹600 ರಿಂದ ₹1,200 ರವೆಗೆ ಧಾರಣೆ ಇದ್ದರೆ, ಮಾರ್ಚ್–ಏಪ್ರಿಲ್‌ನಲ್ಲಿ ಧಾರಣೆ ₹2 ಸಾವಿರದವರೆಗೆ ಏರಿಕೆಯಾಗುತ್ತದೆ. ಪ್ರಸಕ್ತ ವರ್ಷ ₹3–4 ಸಾವಿರಕ್ಕೆ ಏರಿಕೆಯಾಗಿದೆ.

ಒಂದು ಗಿಡ ವರ್ಷದಲ್ಲಿ ಕನಿಷ್ಠ 8 ಡಾಗ್ ಫಲ ನೀಡುತ್ತದೆ. ಪ್ರತೀ ವರ್ಷ ಸರಾಸರಿ ₹1,500 ಧಾರಣೆ ಸಿಕ್ಕರೂ, ಒಂದೇ ಗಿಡಕ್ಕೆ ₹10–12 ಸಾವಿರ ಲಾಭ ಖಚಿತ.

ಪ್ರಸಕ್ತ ವರ್ಷ ಸರಾಸರಿ ₹2 ಸಾವಿರದಿಂದ ₹2,500ಧಾರಣೆ ಸಿಕ್ಕಿದೆ. ಅಂದರೆ ಪ್ರತೀ ವರ್ಷಕ್ಕಿಂತಲೂ ದುಪ್ಪಟ್ಟು ಲಾಭವಾಗಿದೆ.

‘ತಾಲ್ಲೂಕಿನ ಬಹಳಷ್ಟು ರೈತರ ನಿಂಬೆ ಬೆಳೆಗಳು ಒಣಗಿ ಹೋಗಿವೆ. ಕೆಲವರು ಟ್ಯಾಂಕರ್ ಬಳಸಿ ಬೆಳೆ ಸಂರಕ್ಷಣೆ ಮಾಡಿದ್ದಾರೆ. ನನ್ನ ಜಮೀನನಲ್ಲಿ ಇದ್ದ 600 ಗಿಡಗಳಲ್ಲಿ 400 ಗಿಡಗಳು ಮಾತ್ರ ಉಳಿದುಕೊಂಡಿವೆ. ದೀರ್ಘ ಕಾಲದ ನಿಂಬೆ ಬೆಳೆಯ ಸಂರಕ್ಷಣೆ ಮಾಡುವುದು ಕಷ್ಟ’ ಎಂದು ರೈತ ಪ್ರಭಾಕರ ಬಗಲಿ ಬೇಸರದಿಂದಲೇ ಹೇಳಿದರು.

‘ಕೇವಲ ಮಳೆಯನ್ನು ಅವಲಂಬಿಸಿದರೆ ನಿಂಬೆ, ದಾಳಿಂಬೆ, ದ್ರಾಕ್ಷಿ, ಪೇರು ಗಿಡಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಎಲ್ಲಾ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ತಾಲ್ಲೂಕಿನಲ್ಲಿರುವ ಕೆರೆಗಳನ್ನು ತುಂಬುವ ಕಾರ್ಯ ಪೂರ್ಣಗೊಂಡರೆ ಮಾತ್ರ ಬೆಳೆ ಸಂರಕ್ಷಣೆ ಸಾಧ್ಯವಾಗಬಹುದು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !