ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ರೌಡಿಗೆ ಗುಂಡೇಟು

ಕಾರು ಚಾಲಕನನ್ನು ಹತ್ಯೆಗೈದಿದ್ದ ವಾಸೀಂ ಗ್ಯಾಂಗ್ ಸೆರೆ
Last Updated 18 ಡಿಸೆಂಬರ್ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಗುಡ್ಡದಹಳ್ಳಿ ಮುಖ್ಯರಸ್ತೆಯಲ್ಲಿ ಡಿ.8ರ ರಾತ್ರಿ ಕಾರು ಅಡ್ಡಗಟ್ಟಿ ಸೈಯದ್ ಜಬೀವುಲ್ಲಾ (35) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ರೌಡಿ ವಾಸೀಂ ಅಲಿಯಾಸ್ ಬೋಡ್ಕಾನನ್ನು ಬ್ಯಾಟರಾಯನಪುರ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಹತ್ಯೆ ಸಂಬಂಧ ಆಜಾದ್ ನಗರದ ಮುಸ್ತಫಾ, ಮಂಜುನಾಥ್, ಖಲೀಂವುಲ್ಲಾ, ಶಬ್ಬೀರ್ ಹಾಗೂ ಇರ್ಫಾನ್ ಎಂಬುವರನ್ನು ಡಿ.14ರಂದೇ ವಶಕ್ಕೆ ಪಡೆದಿದ್ದ ಪೊಲೀಸರು, ಪ್ರಮುಖ ಆರೋಪಿ ವಾಸೀಂನ ಬಂಧನಕ್ಕೆ ಬಲೆ ಬೀಸಿದ್ದರು. ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಆತ ಜ್ಞಾನಭಾರತಿ ಸಮೀಪದ ವಿಶ್ವೇಶ್ವರಯ್ಯ ಲೇಔಟ್‌ಗೆ ಬರುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಇನ್‌ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿತ್ತು.

ದೊಡ್ಡಬಸ್ತಿ ಕಡೆಯಿಂದ ಬಂದ ವಾಸೀಂ, ಪೊಲೀಸರನ್ನು ನೋಡುತ್ತಿದ್ದಂತೆಯೇ ಓಡಲಾರಂಭಿಸಿದ್ದ. ಈ ಹಂತದಲ್ಲಿ ಕಾನ್‌ಸ್ಟೆಬಲ್ ಹರೀಶ್‌ ಕುಮಾರ್ ಅವರು ಬೆನ್ನಟ್ಟಿ ಆತನ ಕೊರಳ ಪಟ್ಟಿಗೆ ಕೈಹಾಕಿದ್ದರು. ಆಗ ವಾಸೀಂ ಲಾಂಗ್‌ನಿಂದ ಅವರ ಕೈಗೆ ಹೊಡೆದು ಇತರೆ ಸಿಬ್ಬಂದಿ ಮೇಲೂ ದಾಳಿಗೆ ಮುಂದಾಗಿದ್ದ. ಈ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ಆತನ ಕಾಲಿಗೆ ಗುಂಡು ಹೊಡೆದರು ಎನ್ನಲಾಗಿದೆ.

ಪ್ರತಿಷ್ಠೆಗಾಗಿ ಹತ್ಯೆ: ಬನ್ನೇರುಘಟ್ಟದ ಕೋಳಿಫಾರಂ ಗೇಟ್ ನಿವಾಸಿಯಾದ ಜಬೀವುಲ್ಲಾ, ಮೊದಲು ವಾಸೀಂ ಗ್ಯಾಂಗ್‌ನಲ್ಲೇ ಗುರುತಿಸಿಕೊಂಡಿದ್ದ. ಕ್ಷುಲ್ಲಕ ಕಾರಣಕ್ಕೆ ಸಹಚರರ ಮಧ್ಯೆ ಮನಸ್ತಾಪ ಉಂಟಾದ ಬಳಿಕ ಗ್ಯಾಂಗ್ ತೊರೆದು ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದ.

ಡಿ.8ರ ರಾತ್ರಿ ಬಾಪೂಜಿನಗರದ ಸಂಬಂಧಿಕರ ಮನೆಗೆ ಬಂದಿದ್ದ ಆತ, ನಂತರ ಹಣಕಾಸಿನ ವಿಚಾರವಾಗಿ ಮಾತನಾಡಬೇಕೆಂದು ಸಂಬಂಧಿ ಅಲ್ಲಾ ಬಕ್ಷ್‌ ಹಾಗೂ ಸ್ನೇಹಿತ ನವಾಜ್ ಜತೆ ಕಾರಿನಲ್ಲಿ ಜನತಾ ಕಾಲೊನಿಗೆ ತೆರಳಿದ್ದ. ಇದೇ ವೇಳೆ ಪಾನಮತ್ತನಾಗಿ ಅಲ್ಲಿಗೆ ಬಂದ ವಾಸೀಂ, ‘ಏನ್ರೋ, ಎಲ್ಲ ಸೇರಿ ಹೊಸ ಗ್ಯಾಂಗ್ ಕಟ್ಟುತ್ತಿದ್ದೀರಾ? ನೀನೂ ಅವನೊಟ್ಟಿಗೆ ಸೇರಿದ್ದೀಯಾ’ ಎಂದು ಅಲ್ಲಾ ಬಕ್ಷ್‌ನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.

ಇದರಿಂದ ಕೆರಳಿದ ಜಬೀವುಲ್ಲಾ, ‘ಅಲ್ಲಾ ಬಕ್ಷ್‌ ನನ್ನ ಸಂಬಂಧಿ. ಆತನಿಗೆ ಏನಾದರೂ ಅಂದರೆ ಇಲ್ಲೇ ಕೊಚ್ಚಿ ಹಾಕುತ್ತೇನೆ’ ಎಂದಿದ್ದ. ಆ ಮಾತಿನಿಂದ ಜಗಳ ಶುರುವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು. ಎಲ್ಲರೆದುರೇ ತನಗೆ ಆವಾಜ್ ಹಾಕಿದ್ದರಿಂದ ಕೆಂಡಾಮಂಡಲನಾಗಿದ್ದ ವಾಸೀಂ, ‘ಜಬೀವುಲ್ಲಾನನ್ನು ಸುಮ್ಮನೆ ಬಿಟ್ಟರೆ, ಸಹಚರರೇ ನನಗೆ ಮರ್ಯಾದೆ ಕೊಡುವುದಿಲ್ಲ’ ಎಂದು ಆತನನ್ನು ಮುಗಿಸಲು ನಿರ್ಧರಿಸಿದ್ದ.

ಜಬೀವುಲ್ಲಾ, ಬಕ್ಷ್‌ ಹಾಗೂ ನಯಾಜ್ ಅಲ್ಲಿಂದ ಹೊರಡುತ್ತಿದ್ದಂತೆಯೇ ಸಹಚರರನ್ನು ಸ್ಥಳಕ್ಕೆ ಕರೆಸಿಕೊಂಡ ವಾಸೀಂ, ಬೈಕ್‌ಗಳಲ್ಲಿ ಹಿಂಬಾಲಿಸಿ ಹೊಸಗುಡ್ಡದಹಳ್ಳಿಯ ಭಾಗ್ಯಲಕ್ಷ್ಮಿ ಫ್ಲೋರ್ ಮಿಲ್ ಬಳಿ ಕಾರು ಅಡ್ಡಗಟ್ಟಿದ್ದ. ಈ ವೇಳೆ ನಯಾಜ್ ಹಾಗೂ ಬಕ್ಷ್‌ ಜೀವಭಯದಿಂದ ಓಡಿಹೋದರೆ, ಹಂತಕರು ಜಬೀವುಲ್ಲಾನನ್ನು ಕಾರಿನಿಂದ ಎಳೆದು ಹತ್ಯೆಗೈದಿದ್ದರು. ಆರೋಪಿಗಳ ಬಂಧನಕ್ಕೆ ಕೆಂಗೇರಿ ಉಪನಗರ ಎಸಿಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳು ರಚನೆಯಾಗಿದ್ದವು.

ಬಕ್ಷ್‌ ಕೊಟ್ಟ ಹೇಳಿಕೆ ಆಧರಿಸಿ ಹಂತಕರನ್ನು ಗುರುತಿಸಿಕೊಂಡ ಪೊಲೀಸರು, ಮೊಬೈಲ್ ಕರೆ ವಿವರ ಸುಳಿವು ಆಧರಿಸಿ ಐದು ಮಂದಿಯನ್ನು ವಶಕ್ಕೆ ಪಡೆದರು. ಈಗ ವಾಸೀಂ ಕೂಡ ಸಿಕ್ಕಿಬಿದ್ದಿದ್ದು, ಇನ್ನೂ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.

8 ಪ್ರಕರಣ

ಜಗಜೀವನ್‌ರಾಮನಗರ ಠಾಣೆಯ ರೌಡಿಗಳ ಪಟ್ಟಿಯಲ್ಲಿ ವಾಸೀಂನ ಹೆಸರಿದೆ. ಎರಡು ಕೊಲೆ, ಮೂರು ಕೊಲೆಯತ್ನ, ಮೂರು ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಸದ್ಯ ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT