ಸೋಮವಾರ, ಸೆಪ್ಟೆಂಬರ್ 20, 2021
27 °C

ರಸ್ತೆಯಲ್ಲಿಯೇ ಹೆರಿಗೆ ನೋವು: ಮಹಿಳೆಗೆ ನೆರವಾಗಿ ಮಾನವೀಯತೆ ಮೆರೆದ ಆಟೊ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೊಂದು ಮನಕಲುಕುವ ಘಟನೆ. ಹೆರಿಗೆ ನೋವಿನಿಂದ ರಸ್ತೆಯಲ್ಲಿ ಒದ್ದಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ, 15 ದಿನಗಳ ಕಾಲ ಮಗುವಿನ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಂಡ ಆಟೊ ಚಾಲಕನ ಮಾನವೀಯತೆಯ ಕಥೆ ಇದು.

ತೆರೆಮರೆಯ ಹಿರೊ ಆದ ಆಟೊ ಚಾಲಕ ಬಾಬು ಮುದ್ರಪ್ಪ ಅವರ ಬಗ್ಗೆ ದಿ ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ. ಮುದ್ರಪ್ಪ ಏಪ್ರಿಲ್‌ 15ರಂದು ವೈಟ್‌ಫೀಲ್ಡ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಬಾಡಿಗೆ ಅರಸಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಮಹಿಳೆಯೊಬ್ಬಳು ನೋವಿನಿಂದ ಬಳಲುತ್ತಿದ್ದದ್ದನ್ನು ನೋಡಿದರು. ಆಕೆಯ ಸುತ್ತಾ ಅನೇಕರು ನಿಂತಿದ್ದರು. ಆದರೆ, ಯಾರೊಬ್ಬರು ಆಕೆಗೆ ನೆರವಾಗಿರಲಿಲ್ಲ.

‘ತಕ್ಷವೇ ಆಕೆಗೆ ಏನಾಗಿದೆ ಎಂದು ಕೇಳಿದೆ. ನೋವಿನಿಂದ ಒದ್ದಾಡುತ್ತಿದ್ದ ಆಕೆಗೆ ಮಾತನಾಡಲು ಕಷ್ಟವಾಗಿತ್ತು. ಅದರಲ್ಲಿಯೇ ಆಕೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದರು. ಮಹಿಳೆಗೆ ರಕ್ತಸಾವ್ರವೂ ಆಗುತ್ತಿತ್ತು’ ಎಂದು ಮುದ್ರಪ್ಪ ಘಟನೆಯನ್ನು ವಿವರಿಸಿದರು.

‘ಸಾಕಷ್ಟು ಮಂದಿ ಆಕೆಯನ್ನು ನೋಡುತ್ತಿದ್ದರೇ ವಿನಃ, ಸಹಾಯ ಮಾಡಲು ಯಾರೂ ಮುಂದೆಬರಲಿಲ್ಲ. ನನಗೆ ಆಕೆಯನ್ನು ಹಾಗೆ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ. ನನ್ನ ತಂಗಿಯೇ ಕಣ್ಣು ಮುಂದೆ ಬಂದಂತಾಯಿತು. ಮಾತನಾಡಲು ಕಷ್ಟಪಡುತ್ತಿದ್ದ ಆಕೆ, ತನ್ನ ಕುಟುಂಬದವರ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ’ ಎಂದರು.

ಮುದ್ರಪ್ಪ ತಕ್ಷಣ ಆಟೊದಲ್ಲಿ ಹತ್ತಿರವಿದ್ದ ವೈದೇಹಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಲ್ಲಿ ಸೌಲಭ್ಯಗಳ ಕೊರತೆ ಇದ್ದಿದ್ದರಿಂದ ಅಕೆಯನ್ನು ಸಿ.ವಿ. ರಾಮನ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಲ್ಲಿನ ವೈದ್ಯರು ಸೂಚಿಸಿದರು. ಅಲ್ಲಿಂದ ಅವರನ್ನು ಕರೆದೊಯ್ದ ಮುದ್ರಪ್ಪ, ತಮ್ಮ ಬಳಿಯಿದ್ದ ಎಲ್ಲ ದುಡ್ಡು ಸೇರಿಸಿ ಸಿ.ವಿ.ರಾಮನ್‌ ಆಸ್ಪತ್ರೆಗೆ ಸೇರಿಸಿದರು. 

‘ಹೆರಿಗೆ ಆಗುವವರೆಗೂ ಅಲ್ಲಿಯೇ ಇದ್ದೆ. ಕೆಲ ತಾಸುಗಳ ನಂತರ ಹೆಣ್ಣು ಮಗು ಜನಿಸಿದೆ ಎಂದು ವೈದ್ಯರು ಸಿಹಿ ಸುದ್ದಿ ತಿಳಿಸಿದರು. ನನ್ನ ಫೋನ್‌ ನಂಬರ್‌ ಮತ್ತು ವಿಳಾಸವನ್ನು ನೀಡಿ, ಅಲ್ಲಿಂದ ಮನೆಗೆ ಹೋದೆ. ಆದರೆ, ಮನೆಗೆ ಹೋದ ಕೆಲವೇ ಗಂಟೆಗಳ ನಂತರ ಆಸ್ಪತ್ರೆಯಿಂದ ಕರೆ ಬಂದಿತು. ಮಗುಗೆ ಉಸಿರಾಟದ ಸಮಸ್ಯೆ ಎದುರಾಗಿದೆ, ತಕ್ಷಣ ಶಿವಾಜಿನಗರದಲ್ಲಿನ ಬೌರಿಂಗ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ಮಗುವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಆಟೊದ ಹಿಂಬದಿ ಸೀಟ್‌ನಲ್ಲಿ ಇಟ್ಟು ವೇಗವಾಗಿ ಆಸ್ಪತ್ರೆಗೆ ಹೋದೆ’ ಎಂದು ಹೇಳಿದರು.

‘ನನ್ನ ಉಳಿತಾದ ಹಣದಲ್ಲಿಯೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದೆ. ಮಗು ಶೀಘ್ರ ಗುಣವಾಗಲೆಂದು ಪ್ರಾರ್ಥಿಸಿದೆ. ಇದರ ಹೊರತಾಗಿ ನನ್ನ ಕೈಯಲ್ಲಿ ಹೆಚ್ಚಿನ ಸಹಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ದುಡಿತು ತಂದರೆ ಮನೆಯಲ್ಲಿ ಅಂದಿನ ಊಟ ಎನ್ನುವ ಸ್ಥಿತಿ ಇದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಬಾಡಿಗೆ ಅರಸಿ ಹೋಗುತ್ತಿದ್ದಾಗ ತಾಯಿಯನ್ನು ದಾಖಲಿಸಿದ್ದ ಆಸ್ಪತ್ರೆಯಿಂದ ಕರೆ ಮಾಡಿ, ಆಕೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು. ಆಕೆಗೆ ಮಗು ಬೇಡವಾಗಿತ್ತು ಎನ್ನುವುದು ಆಗ ತಿಳಿಯಿತು’ ಎಂದು ವಿವರಿಸಿದರು.

ಬೌರಿಂಗ್‌ ಆಸ್ಪತ್ರೆಯಲ್ಲಿ ಮಗುವಿನ ಚಿಕಿತ್ಸೆ ನಡೆಯುತ್ತಿತ್ತು. ಒಂದು ವಾರದವರೆಗೆ ಆಸ್ಪತ್ರೆಯಲ್ಲಿಯೇ ಇದ್ದು ಅದರ ಆರೈಕೆಯನ್ನು ಮುದ್ರಪ್ಪ ಮಾಡಿದರು. ಈ ಮಧ್ಯೆ ಪೊಲೀಸರು ತಾಯಿಯ ಹುಡುಕಾಟ ನಡೆಸುತ್ತಿದ್ದರು. ನಾಲ್ಕು ಪೊಲೀಸ್‌ ಠಾಣೆಗಳಿಂದ ಮುದ್ರಪ್ಪ ಅವರನ್ನು ಕರೆದು ವಿಚಾರಣೆ ನಡೆಸಲಾಯಿತು. ‘ಪೊಲೀಸ್‌ ಠಾಣೆ, ಆಸ್ಪತ್ರೆಗೆ ಓಡಾಡುವುದರಲ್ಲಿಯೇ ನನ್ನ ಸಮಯ ಕಳೆದು ಹೋಗುತ್ತಿತ್ತು. ಕೆಲ ದಿನಗಳಲ್ಲಿಯೇ ನನಗೆ ಇದು ಸಾಕಾಗಿ ಹೋಯಿತು. ಆಸ್ಪತ್ರೆಯ ಸಿಬ್ಬಂದಿಗೆ ಹೇಳಿ, ಮನೆಗೆ ಹೋದೆ’ ಎಂದು ತಿಳಿಸಿದರು.

ಮುದ್ರಪ್ಪ ಹೀಗೆ ಹೇಳಿ ಹೋದ ಕೆಲ ದಿನಗಳಲ್ಲಿಯೇ ಮತ್ತೆ ಆಸ್ಪತ್ರೆಯಿಂದ ಮಗು ಮೃತಪಟ್ಟಿದೆ ಎಂದು ಕರೆ ಬಂದಿತು. ಮಗುವಿನ ಸ್ಥಿತಿ ತೀರಾ ಚಿಂತಾಜನಕವಾಗಿತ್ತು ಮತ್ತು ಅದರ ಬಾಯಿಯಿಂದ ರಕ್ತ ಬರಲು ಪಾರಂಭವಾಯಿತು. ಹೀಗಾಗಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದರು.

‘ನನ್ನ ಹೃದಯವೇ ಒಡೆದುಹೋದಂತಾಯಿತು. ಮಗುವಿನ ಅಂತ್ಯಸಂಸ್ಕಾರ ನಾನೇ ಮಾಡಬೇಕು ಎಂದು ನಿರ್ಧರಿಸಿದೆ. ಕೆಲವು ಪೊಲೀಸ್‌ ಸಿಬ್ಬಂದಿಯ ಜೊತೆಗೆ ಮಗುವಿನ ಅಂತ್ಯಸಂಸ್ಕಾರ ಮಾಡಲಾಯಿತು. ಕೆಲವೇ ಕೆಲವು ದಿನಗಳಲ್ಲಿ ನನಗೆ ಆ ಮಗುವಿನೊಂದಿಗೆ ಬಾಂಧವ್ಯ ಬೆಳೆದಿತ್ತು’ ಎಂದು ತಮ್ಮ ಅನುಭವನ್ನು ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು