ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಪ್ರದೇಶದ 474 ಮಳಿಗೆ ಬಂದ್‌

ಬಿಬಿಎಂಪಿ 14 ದಿನಗಳ ಕಾರ್ಯಾಚರಣೆ
Last Updated 15 ಜನವರಿ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯು ನಗರದಾದ್ಯಂತ 14 ದಿನಗಳ ಅವಧಿಯಲ್ಲಿ 474 ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದೆ.

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಬಂದ್‌ ಮಾಡಬೇಕು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಆದೇಶ ಹೊರಡಿಸಿದ ಬೆನ್ನಲ್ಲೇ ನಗರದಾದ್ಯಂತ ಈ ಕಾರ್ಯಾಚರಣೆ ನಡೆದಿದೆ.

ಎಚ್‌ಎಎಲ್‌ 2 ಮತ್ತು 3ನೇ ಹಂತ ಸೇರಿ ಪೂರ್ವವಲಯವೊಂದರಲ್ಲೇ 120 ಮಳಿಗೆಗಳನ್ನು ಮುಚ್ಚಲಾಗಿದೆ. ಇಲ್ಲಿನ ನಿವಾಸಿಗಳೇ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ತಡೆಗಟ್ಟ ಬೇಕು ಎಂದು ಒತ್ತಾಯಿಸಿ ಬಹಳ ಕಾಲದಿಂದ ಹೋರಾಟ ನಡೆಸುತ್ತಿದ್ದರು. ಪಶ್ಚಿಮ (88 ಮಳಿಗೆಗಳು), ದಕ್ಷಿಣ (82) ಹಾಗೂ ಯಲಹಂಕ ವಲಯ (82) ಮಳಿಗೆಗಳನ್ನು ಮುಚ್ಚಲಾಗಿದೆ. ಎಲ್ಲ ವಲಯಗಳ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಯು 8,493 ನೋಟಿಸ್‌
ಜಾರಿಗೊಳಿಸಿದೆ.

‘ನಾವು ನೋಟಿಸ್‌ ಜಾರಿಗೊಳಿಸಿದ್ದೇವೆ. ಆದರೆ, ಅದಕ್ಕೂ ಸ್ಪಂದಿಸದ ಹಿನ್ನೆಲೆಯಲ್ಲಿ ನಾವೇ ನೇರವಾಗಿ ಮಳಿಗೆಗಳನ್ನು ಮುಚ್ಚಿಸುತ್ತಿದ್ದೇವೆ. ಹೈಕೋರ್ಟ್‌ ಆದೇಶವೂ ಹಾಗೆಯೇ ಇದೆ’ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ಹೇಳಿದರು.

‘ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುವ ಪ್ರಕ್ರಿಯೆ ಕೇವಲ ಕಾಗದದಲ್ಲಷ್ಟೇ ಉಳಿದಿದೆ. ಆದರೆ, ವಾಸ್ತವದಲ್ಲಿ ಇಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.

‘ಇಂಥ ಪ್ರಯತ್ನಗಳು ಕೇವಲ ಉಪಮುಖ್ಯಮಂತ್ರಿಗೆ ದಾಖಲೆ ತೋರಿಸಲಿಕ್ಕಾಗಿ ಮಾತ್ರ ಮಾಡಿದಂತಿವೆ. ಇದು ಕಣ್ಣೊರೆಸುವ ತಂತ್ರವಲ್ಲದೇ ಮತ್ತೇನೂ ಅಲ್ಲ. ನಾವು ಅಧಿಕಾರಿಗಳಿಂದ ಬೇಸತ್ತಿದ್ದೇವೆ’ ಎಂದು ಪೂರ್ವವಲಯದ ನಿವಾಸಿ ಸ್ವರ್ಣಾ ವೆಂಕಟರಾಮನ್‌ ಹೇಳಿದರು. ‘ಸಾಕಷ್ಟು ಹಿಂದೆಯೇ ಈ ಸಂಬಂಧಿಸಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಆದರೆ, ಮಳಿಗೆ ಮಾಲೀಕರ ಪ್ರತಿರೋಧ ಎದುರಾಗುತ್ತಿತ್ತು. ಕೆಲವು ಪ್ರಕರಣಗಳಲ್ಲಿ ಕಾರ್ಪೊರೇಟರ್‌ಗಳು ಹಾಗೂ ಶಾಸಕರ ಮೂಲಕ ಒತ್ತಡ ಹೇರಿ ಕೆಲವೇ ಗಂಟೆಗಳಲ್ಲಿ ಮತ್ತೆ ವಾಣಿಜ್ಯ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದರು. ಈ ಬಾರಿ ಯಾರೂ ಅಂಗಡಿ ತೆರೆಯಲು ಬಿಡುವುದಿಲ್ಲ. ಹಾಗೇನಾದರೂ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಡಾ.ಹೆಗ್ಡೆ ಹೇಳಿದರು.

‘ವಲಯ ನಿರ್ಬಂಧಗಳನ್ನು ಮೀರಿ ನಡೆಯುತ್ತಿರುವ ಪಬ್‌, ಬಾರ್‌, ಮಸಾಜ್‌ ಪಾರ್ಲರ್‌ಗಳನ್ನು ಮುಚ್ಚಿಸಲೇಬೇಕು. ಬಿಬಿಎಂಪಿಯು ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ನಮ್ಮ ಬೆಂಗಳೂರು ಫೌಂಡೇಷನ್‌ ನಿರ್ದೇಶಕ ಸುರೇಶ್‌ ಎನ್‌.ಆರ್‌. ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT